ಇವರೆಲ್ಲರಿಗಿಂತಲೂ ತಾಯಿಯೇ ಗೌರವಾರ್ಹಳು

Untitled design (4)
Published on
ಯಾಜ್ಞವಲ್ಕ್ಯ ಸ್ಮೃಯ ಮಾತೊಂದನ್ನು ಇಲ್ಲಿ ಸ್ಮರಿಸಬಹುದು. ತಾಯಿಯಾದವಳು ಇವರೆಲ್ಲರಿಗಿಂತಲೂ ಹೆಚ್ಚು - ಎನ್ನುತ್ತಾರೆ ಯಾಜ್ಞವಲ್ಕ್ಯಮಹರ್ಷಿಗಳು. ಸ್ಮೃಯ ಆರಂಭದಲ್ಲೇ, ಎಂದರೆ ಮೊದಲ ಐವತ್ತು ಶ್ಲೋಕಗಳೊಳಗೇ, ತಾಯಿಯ ಹಿರಿಮೆಯ ಮಾತಿದೆ. ಯಾರಿಗಿಂತ ತಾಯಿ ಹೆಚ್ಚೆನಿಸುತ್ತಾಳೆ? ಗುರುವಿಗಿಂತಲೂ ಆಚಾರ್ಯನಿಗಿಂತಲೂ ಉಪಾಧ್ಯಾಯನಿಗಿಂತಲೂ ಋತ್ವಿಕ್ಕಿಗಿಂತಲೂ! ಹಾಗಾದರೆ ಗುರುವೆಂದರೆ ಯಾರು, ಆಚಾರ್ಯನಾರು? ಉಪಾಧ್ಯಾಯನಾರು? ಯಾರು ಋತ್ವಿಕ್ಕು? - ಇದೆಲ್ಲವನ್ನೂ ನಿರೂಪಿಸಿಯೇ ತಾಯಿಯ ಹಿರಿಮೆಯನ್ನು ಯಾಜ್ಞವಲ್ಕ್ಯರು ಹೇಳಿರುವುದು.

ಯಾಜ್ಞವಲ್ಕ್ಯರ ಕಾಲ ಸುಮಾರು 3ನೇ ಶತಮಾನವೆನ್ನುವರು. ಸ್ಮೃಗಳಲ್ಲಿ ಮೊದಲನೆಯ ಸ್ಥಾನವು ಮನುಸ್ಮೃಗೆ ಸಲ್ಲುವುದಾದರೆ, ಎರಡನೆಯ ಸ್ಥಾನವು ಯಾಜ್ಞವಲ್ಕ್ಯ ಸ್ಮೃಗೇ. ಬಹುಮಟ್ಟಿಗೆ ಮನುಸ್ಮೃಯನ್ನೇ ಅನುಕರಿಸಿರುವ ಕೃತಿಯಿದು. ಯಾಜ್ಞವಲ್ಕ್ಯಸ್ಮೃಗೆ ವ್ಯಾಖ್ಯಾನ ಬರೆದವರು ಕರ್ಣಾಟಕದ ವಿದ್ವಾಂಸ ವಿಜ್ಞಾನೇಶ್ವರರು; ಕಲ್ಯಾಣದ ಚಾಲುಕ್ಯರ ಕಾಲದಲ್ಲಿದ್ದವರು (11ನೆಯ ಶತಮಾನದ ಅಂತ). ವ್ಯಾಖ್ಯಾನದ ಹೆಸರು ಮಿತಾಕ್ಷರಾ. ಅವರ ಅಭಿಪ್ರಾಯವನ್ನೂ ಇಲ್ಲಿ ಬಳಸಿದೆ.

ಯಾರು ಗುರುವೆಂದರೆ? ಗರ್ಭಾಧಾನದಿಂದ ಉಪನಯನ ಪರ್ಯಂತವಾದ ವೈದಿಕಕರ್ಮಗಳನ್ನು ವಿಧ್ಯನುಸಾರವಾಗಿ ನೆರವೇರಿಸಿ, ಉಪನಯನ ಹೊಂದಿದ ಬ್ರಹ್ಮಚಾರಿಗೆ ವೇದವನ್ನು ಯಾರು ಹೇಳಿಕೊಡುತ್ತಾನೋ ಆತನು ಗುರು. ಉಪನಯನ ನೆರವೇರಿಸಿ, ವೇದವನ್ನು ಯಾರು ಹೇಳಿಕೊಡುವನೋ ಆತನು ಆಚಾರ್ಯ. ವೇದದ ಏಕದೇಶವನ್ನು ಅಧ್ಯಯನ ಮಾಡಿಸುವವನು ಉಪಾಧ್ಯಾಯ. ಏಕದೇಶವೆಂದರೆ ಒಂದು ಭಾಗ. ವೇದದ ಭಾಗವನ್ನಷ್ಟೇ ಹೇಳಿಕೊಡುವವನು ಉಪಾಧ್ಯಾಯ. ಹಾಗಾದರೆ ಸಮಗ್ರವೇದ ಎಂದರೇನು? ವೇದ-ವೇದಾಂಗಗಳನ್ನು ಸೇರಿಸಿದಲ್ಲಿ ಅದು ಪೂರ್ಣ. ಯಾವುದೋ ಕೆಲಭಾಗಗಳನ್ನಷ್ಟೇ ಹೇಳಿಕೊಡುವಲ್ಲಿ ಆತನು ಆಚಾರ್ಯ ಆಗಲಾರ.

ವೇದಗಳು ನಾಲ್ಕು - ಋಗ್ವೇದ, ಯಜುರ್ವೆದ, ಸಾಮವೇದ, ಅಥರ್ವ ವೇದ. ಅಲ್ಲೂ ಮಂತ್ರಭಾಗವಷ್ಟಕ್ಕೇ ವೇದವೆನ್ನುವುದಿಲ್ಲ. ಬ್ರಾಹ್ಮಣಭಾಗವೂ ವೇದವೇ. ಮಂತ್ರಗಳ ವಿವರಣೆಯನ್ನೋ ಯಜ್ಞಾ ನ್ವಯವನ್ನೋ ತೋರಿಸಿಕೊಡತಕ್ಕ ವೇದಭಾಗಗಳಿಗೆ ಬ್ರಾಹ್ಮಣವೆನ್ನುವರು. ಮಂತ್ರಗಳು ಛಂದೋ-ಬದ್ಧವಾಗಿರತಕ್ಕವು. ಬ್ರಾಹ್ಮಣಭಾಗವೆಂಬುದು ಗದ್ಯರೂಪದಲ್ಲಿರುವುದು. ಒಟ್ಟಿನಲ್ಲಿ, ವೇದದ ಮಂತ್ರ- ಬ್ರಾಹ್ಮಣಗಳೆರಡರ ಅಧ್ಯಯನವನ್ನೂ ಆಚಾರ್ಯನು ನಡೆಸಿಕೊಡುತ್ತಾನೆ. ವೇದಕ್ಕೆ ಆರು ಅಂಗಗಳುಂಟು. ಅವುಗಳೆಂದರೆ - ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೌತಿಷ ಹಾಗೂ ಕಲ್ಪಗಳು. ವೇದಮಂತ್ರಗಳ ಸರಿಯಾದ ಉಚ್ಚಾರಣೆಯನ್ನು ಶಿಕ್ಷೆಯು ತಿಳಿಸಿಕೊಡುತ್ತದೆ. ಶಬ್ದನಿರ್ವಣವನ್ನು ವ್ಯಾಕರಣವು ತಿಳಿಸುತ್ತದೆ. ನುಡಿಯ ನಡೆಯ ಬಗೆಗಳನ್ನು ಛಂದಸ್ಸು ಗೊತ್ತಾಗಿಸುತ್ತದೆ.

ಶಬ್ದಗಳ ಮೂಲಾಶಯವನ್ನು ನಿರುಕ್ತವು ಸ್ಪುಟಪಡಿಸುತ್ತದೆ. ಯಜ್ಞಾರ್ಥವಾದ ಕಾಲವಿವೇಚನೆಯನ್ನು ಜ್ಯೌತಿಷವು ತೋರಿಸುತ್ತದೆ. ಯಜ್ಞಕಲಾಪಗಳನ್ನು ನೆರವೇರಿಸುವ ಬಗೆಯನ್ನು ಕಲ್ಪವು ಅರುಹುತ್ತದೆ. ಮಂತ್ರ-ಬ್ರಾಹ್ಮಣಗಳಲ್ಲಿ ಕೇವಲ ವೇದಾಂಗ ತಿಳಿಸಿಕೊಡುವವನು ಉಪಾಧ್ಯಾಯ. ಪಾಕ ಯಜ್ಞಾದಿಗಳನ್ನು ನೆರವೇರಿಸಿಕೊಡುವವನೇ ಋತ್ವಿಕ್ಕು. ಇವರೆಲ್ಲರೂ ಪೂಜ್ಯರೇ. ಆದರೆ ಇವರೆಲ್ಲರಿಗಿಂತಲೂ ತಾಯಿಯು ಹೆಚ್ಚು, ಎನ್ನುತ್ತದೆ ಯಾಜ್ಞವಲ್ಕ್ಯಸ್ಮೃ. ಹೇಗೆ ಹಿರಿದೆಂಬುದರ ವಿವರಣವನ್ನು ಸ್ಮೃಯು ಕೊಡಹೋಗಿಲ್ಲ. ತಾಯಿಯ ಹಿರಿತನದ ಬಗ್ಗೆ ಶ್ರೀರಂಗಮಹಾಗುರುಗಳು ತಿಳಿಸಿರುವುದುಂಟು. ತಾಯಿ ಎಂಬ ಪದವು ಅಚ್ಚಗನ್ನಡಪದದಂತೆ ಕಂಡರೂ, ತಾಯೃ ಎಂಬ ಸಂಸ್ಕೃತ-ಧಾತುವಿನಿಂದ ಬಂದದ್ದು. ಸಂತಾನ ಮತ್ತು ಪಾಲನಗಳು ಅದರ ಅರ್ಥಗಳು. ಸಂತಾನವೆಂದರೆ ಜನ್ಮಕೊಡುವುದು, ವಿಸ್ತರಿಸುವುದು. ಪಾಲನವೆಂದರೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು. ಮರಿಯನ್ನು ಹೆತ್ತು ಸಲಹುವ ಕೆಲಸವನ್ನು ಎಲ್ಲ ಪ್ರಾಣಿಗಳೂ ಮಾಡುವಲ್ಲಿ ಮನುಷ್ಯರ ಹಿರಿಮೆಯೇನು?

ವಿವಾಹದಲ್ಲಿ ಬಳಸುವ ಸಂಕಲ್ಪವೇ ಹೇಳುವಂತೆ, ವಿವಾಹವೆಂಬುದು ಧರ್ಮಪ್ರಜಾ-ಪ್ರಾಪ್ತಿಗಾಗಿ. ಜೀವದ ಮೂಲಧರ್ಮವಾದ ಜ್ಞಾನವೆಂಬುದೇನುಂಟೋ ಅದಕ್ಕಾಗಿಯೇ ಜೀವಿಸುವಂತಹ ಶಿಶುವಿಗೆ ಜನ್ಮಕೊಡುವುದೇ ಧರ್ಮಪ್ರಜಾ-ಪ್ರಾಪ್ತಿ. ಅದನ್ನು ಪಡೆಯಲೂ ಆ ಧರ್ಮವು ಕೆಡದಂತೆ ಸಲಹಲೂ ಅಪಾರವಾದ ಅರಿವು, ಯುಕ್ತವಾದ ಪ್ರಯತ್ನ, ಅಸಾಧಾರಣವಾದ ತಾಳ್ಮೆಗಳು ಬೇಕಾಗುತ್ತವೆ. ಎರಡೂ ಜವಾಬ್ದಾರಿಯ ಕೆಲಸಗಳೇ.ಇವೆಲ್ಲವೂ ಚೆನ್ನಾಗಿ ನಡೆದರಲ್ಲವೇ ಉಪಾಧ್ಯಾಯ/ಆಚಾರ್ಯ ಮುಂತಾದವರ ಕಾರ್ಯವು ಮುಂದೆ ಚೆನ್ನಾಗಿ ನೆರವೇರುವುದು ಹೀಗಾಗಿ ತಾಯಿಯ ಅಂತರಂಗದಲ್ಲಾಡುವ ಸತ್ಸಂಕಲ್ಪ, ಮುಂದೆ ಬೆಳೆಸುವಾಗಿನ ಸತ್​ಸಂಸ್ಕಾರಕ್ಕಾಗಿನ ಸತತ-ಪ್ರಯತ್ನ ಇವುಗಳು ತಾಯಿಯಿಂದಲೇ ಆಗತಕ್ಕವು. ಎಂದೇ ತಾಯಿಯ ಸ್ಥಾನ ಹಿರಿದು. ಹೀಗಾಗಿ, ಗುರುವಿನ ಸ್ಥಾನಕ್ಕಿಂತಲೂ ಗುರುತರವಾದ ಸ್ಥಾನವು ತಾಯಿಯದು. ಹೀಗೆ ಯಾಜ್ಞವಲ್ಕ್ಯರ ಮಾತಿನ ಮರ್ಮವು ಶ್ರೀರಂಗಮಹಾಗುರುಗಳ ನುಡಿಗಳಲ್ಲಿ ಗೋಚರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net