

ಅಮ್ಮನಿಲ್ಲದೆ ಬದುಕಿಲ್ಲ, ಅವಳೊಂದು ದೊಡ್ಡ ಭಾವಶಕ್ತಿ. ಅವಳ ಅಂತಃಕರಣದ ಲೋಕದಲ್ಲಿ ಬೆಳೆದ ಮಕ್ಕಳು ಎಷ್ಟೇ ದೊಡ್ಡವರಾದರೂ, ಆ ಪ್ರೀತಿ, ಮಮತೆ, ವಾತ್ಸಲ್ಯ ಮತ್ತು ಪ್ರೇರಣೆಯನ್ನು ಮರೆಯಲು ಸಾಧ್ಯವಿಲ್ಲ. ಹಾಗಾಗಿ, ಜೀವನದಲ್ಲಿ "ತಾಯಿಯೇ ದೇವರು' ಎಂದೆನಿಸಿದ ಸಂದರ್ಭಗಳನ್ನು ಹಂಚಿಕೊಳ್ಳುವಂತೆ ನೀಡಿದ ಕರೆಗೆ ಓದುಗರಿಂದ ಬಂದಿರುವ ಪ್ರತಿಕ್ರಿಯೆ ಅಭೂತಪೂರ್ವ. ಅಮ್ಮನ ದಿನದ ನಿಮಿತ್ತ ಅಂಥ ಕೆಲ ಟನೆಗಳನ್ನು ಇಲ್ಲಿ ದಾಖಲಿಸಲಾಗಿದೆ.
ತಾಯಿ ಅನ್ನೋದು ಭಾವನೆಯಷ್ಟೇ ಅಲ್ಲ ದೈಹಿಕವಾಗಿ ತಾಯಿಯಿಲ್ಲದ ಮೊದಲ ತಾಯಂದಿರ ದಿನವನ್ನು ನೋಡುತ್ತಿದ್ದೇನೆ. ಏನು ಹೇಳಬೇಕು ಗೊತ್ತಿಲ್ಲ. ನನ್ನಮ್ಮ ನನ್ನಿಂದ ಯಾವ ಸೇವೆಯನ್ನೂ ಮಾಡಿಸಿಕೊಂಡಿಲ್ಲ. ಅವರು ಕೊನೆಯ ತನಕ ನನ್ನ ಜತೆಗೇ ಇದ್ದರು. ಮದುವೆಯಾಗಿ, ನನಗೆ ಮಗುವಾದರೂ, ನನ್ನನ್ನು ಮಗುವಿನಂತೆಯೇ ನೋಡಿಕೊಳ್ಳುತ್ತಿದ್ದರು. ತಾಯಿ ಮನೆಯಲ್ಲಿದ್ದರೆ ಮಕ್ಕಳಿಗೆ ದೊಡ್ಡ ಶಕ್ತಿ ಇರುತ್ತದೆ. ನನ್ನ ತಾಯಿ ನನಗೆ ಎಲ್ಲವೂ ಆಗಿದ್ದರು. "ನೀವೇನು ಎಲ್ಲರ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತೀರಿ' ಎಂದು ಎಲ್ಲರೂ ಕೇಳುತ್ತಾರೆ. ಆ ಗುಣ ನನಗೆ ಬಂದಿದ್ದು ತಾಯಿಯಿಂದ. ಅವರು ಯಾವತ್ತೂ ಕೃತಕವಾಗಿರಲಿಲ್ಲ. ಬಹಳ ಮುಗ್ಧತೆಯಿಂದ, ಎಲ್ಲವನ್ನೂ ಹೇಳಿಕೊಳ್ಳುತ್ತ, ಎಲ್ಲರನ್ನೂ ಮೆಚ್ಚಿಕೊಳ್ಳುವ ಅವರ ಗುಣವೇ ನನಗೂ ಸ್ವಲ್ಪ ಬಂದಿದೆ. ದೈಹಿಕವಾಗಿಯಷ್ಟೇ ತಾಯಿ ನನ್ನ ಜತೆಗಿಲ್ಲ. ನನ್ನ ಪ್ರತಿ ಹೆಜ್ಜೆ ಮತ್ತು ಉಸಿರಿನಲ್ಲೂ ಜತೆಗಿದ್ದಾರೆ. ಪ್ರತಿಯೊಬ್ಬರಲ್ಲೂ ನಾನು ನನ್ನ ತಾಯಿಯನ್ನು ನೋಡುತ್ತಿದ್ದೇನೆ. ನನಗೆ ಜೀವಕೊಟ್ಟ ತಾಯಿಗೆ, ಬದುಕು ಕೊಟ್ಟ ದೊಡ್ಡಮ್ಮನಿಗೆ, ಯಾರಿಗೆ ಸಲಾಂ ಹೇಳಲಿ? ಇಡೀ ವರ್ಷ ತಾಯಂದಿರ ದಿನ. ತಾಯಿ ಅನ್ನೋದು ಭಾವನೆ ಅಷ್ಟೇ ಅಲ್ಲ, ಅದೊಂದು ಶಕ್ತಿ.
| ತಾರಾ ನಟಿ