

ತಾಯಿಯ ಬಗ್ಗೆ ಮಗನಾಗಿ ಆರೋಗ್ಯಕರವಾಗಿ ಮತ್ತು ಅಭಿಮಾನಪೂರ್ವಕವಾಗಿ ಚಿಂತಿಸುತ್ತಾ ಇರುವ ನಿಮಗೆ ಒಳಿತಾಗಲಿ. ಯಾವುದೇ ಸಮಸ್ಯೆಗೆ ಪರಿಹಾರ ನಾಲ್ಕೈದು ಮಾರ್ಗಗಳಲ್ಲಿ ಇರುತ್ತವೆ. ನಾವು ಒಂದೇ ಮಾರ್ಗವನ್ನು ಹಿಡಿದು ಯೋಚಿಸುವುದರಿಂದಲೂ, ಆ ಮಾರ್ಗ ನಿರೀಕ್ಷಿತ ಫಲವನ್ನು ಕೊಡದೇ ಇರುವುದರಿಂದಲೂ ಹೀಗೆ ಕಂಗಾಲಾಗುತ್ತೇವೆ. ನಿಮ್ಮ ತಾಯಿಯನ್ನು ಆರೋಗ್ಯವಾಗಿ ರಕ್ಷಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ನಿಮ್ಮಹೆಂಡತಿಗೆ ಅತ್ತೆಯನ್ನು ಕಂಡರೆ ಆಗದೇ ಇರುವುದಕ್ಕೆ ಅನೇಕ ಕಾರಣಗಳಿರಬಹುದು. ಅದನ್ನು ನಾನಿಲ್ಲಿ ರ್ಚಚಿಸುವುದಿಲ್ಲ. ಆದರೆ ಒಂದು ಮಾತು ಹೇಳಲಿಚ್ಛಿಸುತ್ತೇನೆ. ಅತ್ತೆ- ಸೊಸೆಯ ಸಂಬಂಧ ಚೆನ್ನಾಗಿರಬೇಕಾದರೆ ಇಬ್ಬರದ್ದೂ ಹೊಣೆ ಬಹಳವಾಗಿರುತ್ತದೆ. ಒಬ್ಬರೇ ಅನುಸರಿಸಿಕೊಂಡು ಹೋಗಲಿ ಎಂದು ನಿರೀಕ್ಷಿಸುವುದು ಅವೈಜ್ಞಾನಿಕವಾಗುತ್ತದೆ.
ನಿಮ್ಮ ಮನೆಯಲ್ಲಿ ಒಬ್ಬರು ಸಂಬಂಧಕ್ಕೆ ವಿಮುಖರಾಗಿದ್ದಾರೆ. ಅದನ್ನು ನೀವೂ ಮತ್ತು ನಿಮ್ಮ ತಾಯಿಯೂ ಒಪ್ಪಿಕೊಂಡುಬಿಡಿ. ನಿಮ್ಮ ಹೆಂಡತಿಯನ್ನು ಸರಿಮಾಡುವುದಕ್ಕಾಗುವುದಿಲ್ಲ ಎಂದು ನೀವೇ ಬರೆದಿದ್ದೀರಿ. ಅಂದಮೇಲೆ ಆ ಬಗ್ಗೆ ನೀವು ಕೊರಗಬಾರದು ಮತ್ತು ಪ್ರಯತ್ನಿಸಲೂಬಾರದು. ಅವರು ವಿಮುಖರಾಗಿದ್ದರೂ ನಿಮ್ಮ ತಾಯಿ ನೆಮ್ಮದಿಯಿಂದ ಇರಲು ಸಾಧ್ಯವಿದೆ. ಮಗನಾಗಿ ನೀವು ಅವರನ್ನು ಇಷ್ಟಪಡುತ್ತೀರಿ. ಈ ಬಗ್ಗೆ ಅವರು ಹೆಮ್ಮೆ ಪಡಬಹುದಲ್ಲವೇ? ಸಂತೋಷವನ್ನೂ ಅನುಭವಿಸಬಹುದಲ್ಲವೇ? ಮೊದಲು ನೀವು ಮತ್ತು ನಿಮ್ಮ ತಾಯಿ ಮನೆಯಲ್ಲಿರುವ ಪರಿಸ್ಥಿತಿಯನ್ನು ಯಾವ ಮುಜುಗರವಿಲ್ಲದೇ ಒಪ್ಪಿಕೊಂಡುಬಿಡಿ. ನಿಮ್ಮ ಹೆಂಡತಿ ಹೇಗಿದ್ದಾರೋ ಹಾಗೆಯೇ ನೀವೂ ಮತ್ತು ನಿಮ್ಮ ತಾಯಿಯೂ ಒಪ್ಪಿಕೊಂಡು ಬಿಟ್ಟರೆ ಅರ್ಧ ನಿಮ್ಮ ದುಗುಡ ಕಳೆದುಹೋಗುತ್ತದೆ. ಪ್ರಾಚೀನ ಮಾತೊಂದಿದೆ. ಯಾವುದನ್ನು ಬದಲಾಯಿಸಲು ಸಾಧ್ಯವೇ ಇಲ್ಲವೋ ಅದನ್ನು ಹಾಗೇ ಒಪ್ಪಿಕೊಂಡುಬಿಡಬೇಕು ಎಂದು. ನಿಮ್ಮ ತಾಯಿ ಮನೆಯ ಕೆಲಸಗಳನ್ನು ಮಾಡುತ್ತಾರೆಂದು ಕೊರಗಿದ್ದೀರಿ. ನೀವು ಬೆಳಗ್ಗೆ ಎದ್ದಾಗಿನಿಂದ ಆಫೀಸಿಗೆ ಹೋಗುವವರೆಗೆ ಮತ್ತು ಆಫೀಸಿನಿಂದ ಬಂದ ಮೇಲೆ ಒಂದಿಷ್ಟು ಕೆಲಸಗಳನ್ನು ಮಾಡಿ. ಗಂಡಸಾದವರು ಮನೆಗೆಲಸವನ್ನು ಮಾಡಲೇ ಬಾರದು ಎನ್ನುವ ಕಾನೂನೇನೂ ಇಲ್ಲವಲ್ಲ? ನಿಮ್ಮ ತಾಯಿಯ ಕೆಲಸವನ್ನು ನೀವೂ ಹಂಚಿಕೊಂಡರೆ ನಿಮ್ಮ ಹೆಂಡತಿಯೇನೂ ಆಕ್ಷೇಪಣೆ ಮಾಡಲಾರರು. ಮತ್ತು ನಿಮ್ಮ ತಾಯಿಗೂ ಮಗ ತನ್ನ ಜತೆ ಕೈಜೋಡಿಸುತ್ತಿದ್ದಾನೆನ್ನುವ ಸಂತೋಷ ಸಿಗಬಹುದು. ವಯಸ್ಸಾದರೂ ಶರೀರ ಆರೋಗ್ಯವಾಗಿದ್ದರೆ, ಕೆಲಸ ಮಾಡುವುದು ಒಳ್ಳೆಯದೇ. ದೇಹಕ್ಕೆ ಒಳ್ಳೆಯ ವ್ಯಾಯಮ ದೊರಕಿದಂತಾಗುತ್ತದೆ. ಇನ್ನು ನಿಮ್ಮ ತಾಯಿ ಕಡಿಮೆ ತಿನ್ನುವುದರ ಬಗ್ಗೆ ಬೇಜಾರು ಮಾಡಿಕೊಂಡಿದ್ದೀರಿ. ನಿಮ್ಮ ಮಾತು ನಿಜ. ದೇಹಕ್ಕೆ ಎಷ್ಟು ಅಗತ್ಯವಿದೆಯೋ ಅಷ್ಟನ್ನು ತಿನ್ನಲೇಬೇಕಾಗುತ್ತದೆ. ಯಾರದ್ದೋ ಕೋಪಕ್ಕೆ ತಿನ್ನುವುದನ್ನು ಕಡಿಮೆ ಮಾಡಿದರೆ ನಾಳೆ ಆರೋಗ್ಯ ಕ್ಷೀಣಿಸಿದರೆ ಅವರೇ ರೋಗರುಜಿನಗಳನ್ನು ಅನುಭವಿಸಬೇಕಾಗುತ್ತದೆ. ಸಾವಿನ ಕ್ಷಣ ಹತ್ತಿರಬರುವವರೆಗೆ ನಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಹೊಣೆ. ಈ ವಿಚಾರವನ್ನು ಅವರಿಗೆ ಅರ್ಥವಾಗುವಂತೆ ತಿಳಿಸಿ. ಮತ್ತು ಹಣ್ಣುಗಳನ್ನು ತಿನ್ನಬಹುದಾದ ಹಸಿ ತರಕಾರಿಗಳನ್ನೂ ಸಂಜೆಯ ಹೊತ್ತು ಅವರಿಗೆ ನೀವೇ ಹೆಚ್ಚಿಕೊಟ್ಟು ತಿನ್ನುವಂತೆ ನೋಡಿಕೊಳ್ಳಿ. ಮನಸ್ಸೊಂದಿದ್ದರೆ ಸಂಬಂಧಗಳನ್ನು ಬೆಳೆಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಹತ್ತುಹಲವು ಮಾರ್ಗಗಳಿವೆ. ಮುರಿದುಹಾಕುವುದಕ್ಕೆ ಒಂದೇ ಮಾರ್ಗ ಅದು ಜಗಳಕಾಯುವುದು. ಅದನ್ನು ನಿಮ್ಮ ಹೆಂಡತಿ ಈಗಾಗಲೇ ಮಾಡಿದ್ದಾರೆ. ನೀವೂ ನಿಮ್ಮ ಹೆಂಡತಿಯ ಮೇಲೆ ಒತ್ತಡ ಹೇರುವ ಅಥವಾ ಅವರೊಂದಿಗೆ ಜಗಳ ಕಾಯುವ ನೆಗೆಟಿವ್ ಮಾರ್ಗವನ್ನು ಅನುಸರಿಸದೇ ಅಮ್ಮ ನಿಗೆ ಏನು ಬೇಕೋ ಅದನ್ನು ನೀವೇ ಅನುಸರಿಸುತ್ತಾ ಪಾಸಿಟಿವ್ ಮಾರ್ಗವನ್ನು ಹಿಡಿಯಿರಿ. ಅಮ್ಮನೂ ಖುಷಿಯಾಗುತ್ತಾರೆ. ನಿಮಗೂ ನೆಮ್ಮದಿ ಸಿಗುತ್ತದೆ.