ವೈದ್ಯರ ಕರ್ತವ್ಯಲೋಪದಿಂದಾಗಿ ತಾಯಿ, ಮಗು ಸಾವು

21 feb tnp 01
ತಿ.ನರಸೀಪುರ ಕಬಿನಿ ಅತಿಥಿ ಗೃಹದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ದಸಂಸ ತಾಲೂಕು ಸಂಚಾಲಕ ಕುಕ್ಕೂರು ರಾಜು ಮಾತನಾಡಿದರು. ಹೇಮಾವತಿ, ರವಿಚಂದ್ರ, ರಾಚಪ್ಪ, ಮಹದೇವ, ಮಹೇಶ ಇದ್ದರು.
Published on

ತಿ.ನರಸೀಪುರ: ಸಿಜೇರಿಯನ್ ಹೆರಿಗೆಯ ವೇಳೆಯಲ್ಲಿ ವೈದ್ಯರ ಕರ್ತವ್ಯ ಲೋಪದಿಂದಾಗಿ ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದ್ದು, ಮತ್ತೊಂದು ಮಗು ತಬ್ಬಲಿಯಾಗಿದೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕುಕ್ಕೂರು ರಾಜು ಗಂಭೀರ ಆರೋಪ ಮಾಡಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯ ಡಾ.ನವೀನ್ ಅವರ ಹಣ ದಾಹ ಮತ್ತು ಕರ್ತವ್ಯ ಲೋಪದ ಪರಿಣಾಮ ತಾಲೂಕಿನ ಹೆಮ್ಮಿಗೆ ಗ್ರಾಮದ ಜಗದೀಶ ಎಂಬುವರ ಪತ್ನಿ ಸಾಕಮ್ಮ(36) ಹಾಗೂ ಐದಾರು ತಿಂಗಳು ತುಂಬಿದ್ದ ಗಂಡು ಮಗು ಸಾವನ್ನಪ್ಪಿದ್ದು, ಎರಡೂವರೆ ವರ್ಷದ ಮತ್ತೊಂದು ಮಗು ತಬ್ಬಲಿಯಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ತುಂಬು ಗರ್ಭಿಣಿಯಾಗಿದ್ದ ಸಾಕಮ್ಮ ಅವರು ಕಳೆದ 2024 ರ ಜೂನ್ 24 ರಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದರು. ಅಂದು ಕರ್ತವ್ಯನಿರತ ವೈದ್ಯ ಡಾ.ನವೀನ್ ಅನಗತ್ಯವಾಗಿ ಸಿಜೇರಿಯನ್ ಹೆರಿಗೆ ಮಾಡಿದ್ದಲ್ಲದೆ ಸಂಬಂಧಿಕರ ಗಮನಕ್ಕೂ ತಾರದೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ. ಅಲ್ಲದೆ ಅದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯ ಮೂಲಕ 10,000 ರೂ. ಲಂಚ ಕೂಡ ಪಡೆದುಕೊಂಡಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ಸಾಕಮ್ಮ ಅಸ್ವಸ್ಥರಾದರು. ಆರು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ದಾಖಲಾಗಿದ್ದರೂ ಆಕೆಗೆ ಸೂಕ್ತ ಚಿಕಿತ್ಸೆ ಕೊಡದೆ ನಿರ್ಲಕ್ಷಿಸಿದ್ದರಿಂದ ಸಾವನ್ನಪ್ಪಿದ್ದಾರೆ. ತಾಯಿ ಆಗಲಿಕೆಯಿಂದ ಹಾರೈಕೆ ಸಿಗದ ಗಂಡು ಮಗು ಕೂಡ ಮೃತಪಟ್ಟಿತು ಎಂದು ವಿವರಿಸಿದರು.

ಈ ಸಂಬಂಧ ಮೃತಳ ಸಂಬಂಧಿ ಹೇಮಾವತಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಲಿಖಿತ ದೂರು ನೀಡಿ ಹಲವು ತಿಂಗಳುಗಳೇ ಆಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಸೂತಿ ವೈದ್ಯ ನವೀನ್ ಹಣಕ್ಕಾಗಿ ಬಲವಂತದಿಂದ ಸಿಜೇರಿಯನ್ ಹೆರಿಗೆಗೆ ಗರ್ಭಿಣಿಯರು ಮತ್ತು ಅವರ ಸಂಬಂಧಿಕರನ್ನು ಪ್ರಚೋದಿಸುತ್ತಿದ್ದಾರೆ. ಲಂಚದ ಆರೋಪದ ಮೇಲೆ ನವೀನ್ ಮತ್ತು ಮತ್ತೊಬ್ಬ ವೈದ್ಯೆ ಡಾ.ರಮ್ಯಾ ಅವರಿಬ್ಬರನ್ನು ವರ್ಗಾವಣೆ ಮಾಡಲಾಗಿತ್ತು. ಹಣ ದಾಹದಿಂದ ಪ್ರಭಾವ ಬಳಸಿ ಮತ್ತೆ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದಾರೆ. ಕರ್ತವ್ಯ ಲೋಪ ಎಸಗುತ್ತಿರುವ ವೈದ್ಯ ನವೀನ್ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಿ, ಮೃತರ ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕು. ತಪ್ಪಿದ್ದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿ ಮುಂಭಾಗ ಧರಣಿ ಕೂರಬೇಕಾಗುತ್ತದೆ ಎಂದು ಕುಕ್ಕೂರು ರಾಜು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮೃತ ಮಹಿಳೆಯ ಸಂಬಂಧಿ ಹೇಮಾವತಿ, ಮಂಡ್ಯ ಜಿಲ್ಲಾ ಸಂಚಾಲಕ ಗಂಜಾಂ ರವಿಚಂದ್ರ, ತಾಲೂಕು ಸಂಘಟನಾ ಸಂಚಾಲಕ ಹ್ಯಾಕನೂರು ರಾಚಪ್ಪ, ಮುಖಂಡರಾದ ತೊಟ್ಟವಾಡಿ ಮಹದೇವ, ಕುರುಬೂರು ಮಹೇಶ, ಮಂಜೇಶ್ ಗೌಡ್ರು, ಆಲಗೂಡು ಶಾಂತಕುಮಾರ್ ಹಾಗೂ ವಾಟಾಳ್ ನಿಂಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net