

ಬೆಂಗಳೂರು: ಪಾಸ್ವರ್ಡ್ ಎಂದಾಕ್ಷಣ ನಮಗೆಲ್ಲಾ ನೆನಪಾಗೋದು ನಮ್ಮ ಮೊಬೈಲ್, ಕಂಪ್ಯೂಟರ್, ಬ್ಯಾಂಕ್ ಲಾಕರ್ ಹೀಗೆ ಮುಂತಾದ ವಸ್ತುಗಳ ಭದ್ರತೆಗೆ ನೀಡಲಾದ ನಾಲ್ಕರಿಂದ ಐದು ಡಿಜಿಟ್ ಅಂಕಿಗಳು. ಈ ಪಾಸ್ವರ್ಡ್ ನಮ್ಮ ದಿನನಿತ್ಯದ ಜೀವನದಲ್ಲಿ ಎಷ್ಟು ಪರಿಣಾಮಕಾರಿಯಾಗಿದೆ ಹಾಗೂ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ ಬೆಳಗ್ಗೆ ಎದ್ದ ಕೂಡಲೇ ನಮ್ಮ ಫೋನ್ಗೆ ಪಾಸ್ವರ್ಡ್ ಹಾಕಿ ದಿನವನ್ನು ಪ್ರಾರಂಭಿಸುವಂತೆ ಮಾಡಿದೆ.
ಬ್ಯಾಂಕ್ ವಹಿವಾಟು ನಡೆಸಲು ಕೂಡ ಇದೇ ರೀತಿಯ ಸ್ಟ್ರಾಂಗ್ ಪಾಸ್ವರ್ಡ್ ಅನ್ನು ಇಟ್ಟಿರುತ್ತೇವೆ. ಈ ಕೋಡ್ ಡಿಜಿಟ್ಗಳು ನಮನ್ನು ಹೊರತುಪಡಿಸಿದರೆ ಅನ್ಯರಿಗೆ ತಿಳಿದಿರುವುದಿಲ್ಲ. ನಮಗೆ ನಂಬಿಕೆಯಿದ್ದರೆ ನಾವು ನಮ್ಮ ಆಪ್ತರಿಗೆ ಈ ಪಾಸ್ವರ್ಡ್ ಅನ್ನು ಹಂಚಿಕೊಳ್ಳುವ ಮುಖೇನ ಅವರಿಗೂ ತಿಳಿಸಬಹುದು. ಈ ಮೂಲಕ ಕಷ್ಟದ ಸಮಯದಲ್ಲಿ ನಾವು ನಮ್ಮ ಕೋಡ್ ಮರೆತರೆ, ಅವರ ಮೂಲಕ ಇದನ್ನು ಮತ್ತೊಮ್ಮೆ ಪಡೆದುಕೊಳ್ಳಬಹುದು.
ಭಾರತದಲ್ಲಿ ಕೆಲವರಲ್ಲ ಹಲವರು ಬಳಸುವ ಪಾಸ್ವರ್ಡ್ ಮಾತ್ರ ಒಂದೇ ಆಗಿದೆ ಎಂಬುದು ಸದ್ಯ ಬಹಳ ಆಶ್ಚರ್ಯಕರ ಸಂಗತಿ. ಏನಪ್ಪಾ ಇದು ಒಂದೇ ಪಾಸ್ವರ್ಡ್ ಹೇಗೆ ಇಡಲು ಸಾಧ್ಯ ಎಂಬ ಪ್ರಶ್ನೆ ಖಂಡಿತ ನಿಮ್ಮಲ್ಲಿ ಮೂಡುವುದು ಸಹಜ.
ಈ ಪಾಸ್ವರ್ಡ್ಗಳು ಮೊಬೈಲ್, ಡಿಜಿಟಲ್ ಲಾಕರ್, ಲಾಪ್ಟಾಪ್ ಅಥವಾ ಇ-ಮೇಲ್ಗೆ ಬಳಕೆ ಮಾಡಿರಬಹುದು. ಆದ್ರೆ, ಅನೇಕರು ತಮಗೆ ಸುಲಭವಾಗಿ ನೆನಪಾಗುವಂತೆ ಕೋಡ್ ಇಡಲು ಹೆಚ್ಚು ಚಿಂತಿಸುತ್ತಾರೆ. ಕಾರಣ, ಈ ರೀತಿಯ ಪಾಸ್ವರ್ಡ್ಗಳನ್ನು ಇಟ್ಟುಕೊಳ್ಳುವುದರಿಂದ ನಾವು ಮರೆಯುವುದಿಲ್ಲ, ಮರೆತರೂ ಒಂದೆರೆಡು ಬಾರಿ ಪ್ರಯತ್ನಿಸುವ ಮುಖೇನ ಸುಲಭವಾಗಿ ಓಪನ್ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಹಲವರದ್ದು.
ಆದರೆ ಇತ್ತೀಚಿನ ಮಾಹಿತಿ ಪ್ರಕಾರ, ಭಾರತದಲ್ಲಿ ಅತೀ ಹೆಚ್ಚಾಗಿ ಬಳಸುವ ಪಾಸ್ವರ್ಡ್ ಅಂದರೆ ಅದು "123456"! ಈ ಆರು ನಂಬರ್ಗಳನ್ನು ಅನೇಕರು ಬಳಕೆ ಮಾಡುತ್ತಿದ್ದಾರೆ. ಇದನ್ನು ಹ್ಯಾಕ್ ಮಾಡಲು ಕೆಲವೇ ಸೆಕೆಂಡ್ಗಳು ಸಾಕು ಎಂದು ತಜ್ಞರು ತಿಳಿಸಿದ್ದಾರೆ.