

ರಬತ್: ಆಫ್ರಿಕಾದ ಮೊರಾಕೊದಲ್ಲಿ 6.8 ತೀವ್ರತೆಯಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಸಾವಿಗೀಡಾದವರ ಸಂಖ್ಯೆ 632ಕ್ಕೆ ಏರಿಕೆಯಾಗಿದ್ದು, 329 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ (ಸೆ.8) ತಡರಾತ್ರಿ ಮೊರಾಕೊದಲ್ಲಿ ಪ್ರಬಲ ಭೂಕಂಪ ಸಂಭವಿಸಿತು. ಅಲ್-ಹೌಜ್, ಮರ್ರಾಕೇಶ್, ಔರ್ಜಾಜೆಟ್, ಅಜಿಲಾಲ್, ಚಿಚೌವಾ ಮತ್ತು ತಾರೌಡಾಂಟ್ ಪ್ರಾಂತ್ಯಗಳಲ್ಲಿ ಸಾವುನೋವುಗಳು ವರದಿಯಾಗಿವೆ ಎಂದು ಮೊರಾಕೊದ ಆಂತರಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ ಭೂಕಂಪವು ರಾತ್ರಿ 11:11 ಗಂಟೆಗೆ (22:11 GMT) 44 ಮೈಲಿಗಳು (71 ಕಿಲೋಮೀಟರ್) ನೈರುತ್ಯಕ್ಕೆ 18.5 ಕಿಲೋಮೀಟರ್ ಆಳದಲ್ಲಿ ಮಾರಕೇಶ್‌ನ ನೈಋತ್ಯಕ್ಕೆ ಅಪ್ಪಳಿಸಿದೆ. ಭೂಕಂಪನದ ಬೆನ್ನಲ್ಲೇ ಜನರು ಭಯಭೀತರಾಗಿ ಮನೆಗಳಿಂದ ಓಡಿಹೋದರು. ಭೂಕಂಪದಿಂದ ಐತಿಹಾಸಿಕ ಕಟ್ಟಡಗಳಿಗೆ ಭಾರೀ ಹಾನಿಯಾಗಿದ್ದು, ವಿದ್ಯುತ್ ಕಡಿತವೂ ಆಗಿದೆ ಎಂದು ತಿಳಿದುಬಂದಿದೆ.
ಸದ್ಯ ಭೂಕಂಪನಕ್ಕೆ 632 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಗಾಯಾಳುಗಳಿಗೆ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ನಗರ ಮತ್ತು ಪಟ್ಟಣದ ಹೊರಭಾಗಗಳಲ್ಲೇ ಅತಿ ಹೆಚ್ಚು ಹಾನಿಯಾಗಿದೆ ಎಂದು ಮೊರಾಕೊದ ಆಂತರಿಕ ಸಚಿವಾಲಯ ತಿಳಿಸಿದೆ. ಆದರೆ, ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ಇನ್ನು ಅಂದಾಜು ಮಾಡಿಲ್ಲ.
ಮೊರೊಕೊ ಭೂಕಂಪನದಲ್ಲಿ ಮೃತಪಟ್ಟವರಿಗೆ ವಿಶ್ವದ ನಾಯಕರು ಸಂತಾಪ ಸೂಚಿಸಿದ್ದು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಇಂದು ಜಿ-20 ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ದುಃಖದ ಸಮಯದಲ್ಲಿ ಇಡೀ ಜಗತ್ತು ಮೊರಾಕೊ ಜೊತೆಗಿದೆ. ನಾವು ಸಾಧ್ಯವಿರುವ ಎಲ್ಲ ನೆರವು ನೀಡಲು ಸಿದ್ಧರಿದ್ದೇವೆ ಎಂದರು. (ಏಜೆನ್ಸೀಸ್)