ನಿಯಮ ಉಲ್ಲಂಘಿಸಿದ 700 ಕ್ಕೂ ಹೆಚ್ಚು ಪಬ್-ಬಾರ್ ಮೇಲೆ ದಾಳಿ

pub
Published on

ಬೆಂಗಳೂರು: ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದ ಹೋಟೆಲ್, ಪಬ್, ಡಿಸ್ಕೋಥೆಕ್, ಹುಕ್ಕಾ ಬಾರ್‌ಗಳ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

ಅಪ್ರಾಪ್ತರಿಗೆ ಮದ್ಯ ಹಾಗೂ ಸಿಗರೇಟು ಮಾರಾಟ ಸೇರಿ ಇತರೆ ನಿಯಮಗಳನ್ನು ಉಲ್ಲಂಘಿಸುತ್ತಿರುವ ದೂರಿನ ಮೇರೆಗೆ ಸಿಸಿಬಿ ಪೊಲೀಸರು ನಗರದ 700ಕ್ಕೂ ಹೆಚ್ಚು ಪಬ್, ಡಿಸ್ಕೋಥೆಕ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲೆ ಶುಕ್ರವಾರ ರಾತ್ರಿ ದಿಢೀರ್ ದಾಳಿ ನಡೆಸಿದ್ದಾರೆ.

ನಿಯಮ ಉಲ್ಲಂಘಿಸಿ ಅವಧಿ ಮೀರಿ ತೆರೆದಿರುವುದು ಹಾಗೂ 18 ವರ್ಷದ ಕೆಳಗಿನವರಿಗೆ ತಂಬಾಕು, ಸಿಗರೇಟು ಮತ್ತು ಮದ್ಯ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಹಲವು ದೂರುಗಳ ಬಂದಿದ್ದವು. ದೂರಿನನ್ವಯ ಪಬ್, ಹೋಟೆಲ್‌ಗಳು, ಡಿಸ್ಕೋಥೆಕ್‌ಗಳು ಹಾಗೂ ಹುಕ್ಕಾ ಬಾರ್‌ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಒಟ್ಟು 701 ಸ್ಥಳಗಳಲ್ಲಿ ಪರಿಶೀಲಿಸಲಾಗಿದ್ದು, ಇದರಲ್ಲಿ 390 ಕಡೆ ನಿಯಮ ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ 480 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಪದೇ ಪದೇ ನಿಯಮ ಉಲ್ಲಂಘಿಸುವವರ ವಿರುದ್ಧ ಮಾರಾಟ ಪರವಾನಿಗೆಯನ್ನು ರದ್ದುಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕಾಲೇಜು ಮುಖ್ಯಸ್ಥರಿಂದ ದೂರು:
ನಗರದ ಬಾರು,ಪಬ್ ಮತ್ತು ಹುಕ್ಕಾ ಬಾರ್‌ಗಳಲ್ಲಿ ಅಪ್ರಾಪ್ತ ಕಾಲೇಜು ವಿದ್ಯಾರ್ಥಿಗಳು ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಅಂತ ಕೆಲ ಕಾಲೇಜು ಮುಖ್ಯಸ್ಥರು ಕಮಿಷನರ್‌ಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ನಗರ ಪೊಲೀಸ್ ಆಯುಕ್ತ ದಯಾನಂದ್ ಸಿಸಿಬಿ ಮೂಲಕ ದಾಳಿ ಮಾಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net