

ನವದೆಹಲಿ: ಮಾರ್ಚ್ 31ರಂದು ಸುಮಾರು 17.58 ಕೋಟಿ ಭಾರತೀಯರ ಪ್ಯಾನ್ ಕಾರ್ಡ್ಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳಲಿವೆ. ಪ್ಯಾನ್ ಕಾರ್ಡ್ಗಳಿಗೆ ಆಧಾರ್ ಲಿಂಕ್ ಮಾಡಲು ಸಾಕಷ್ಟು ಸಮಯ ನೀಡಲಾಗಿದ್ದು ಮಾರ್ಚ್ 31ರೊಳಗೆ ಲಿಂಕ್ ಮಾಡದಿದ್ದರೆ ಅವುಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳಲಿವೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
2018ರಲ್ಲಿ ಸುಪ್ರೀಂ ಕೋರ್ಟ್ ಪ್ಯಾನ್ ಕಾರ್ಡ್ಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಆದೇಶ ಹೊರಡಿಸಿತ್ತು. ಪ್ಯಾನ್ಗೆ ಆಧಾರ್ ಲಿಂಕ್ ಮಾಡದಿದ್ದರೆ ಆದಾಯ ತೆರಿಗೆ ಇಲಾಖೆಯ ಯಾವುದೇ ಸೇವೆಗಳಿಗೆ ನಾಗರಿಕರು ಅರ್ಹರಾಗುವುದಿಲ್ಲ ಎಂದು ಹೇಳಲಾಗಿತ್ತು. ಅಂದಿನಿಂದ ಅನೇಕ ಬಾರಿ ಪ್ಯಾನ್ಗೆ ಆಧಾರ್ ಲಿಂಕ್ ಮಾಡಲು ಕೊನೆಯ ದಿನವನ್ನು ನೀಡಿ ಅದನ್ನು ವಿಸ್ತರಿಸುತ್ತಾ ಬರಲಾಗಿದೆ. ಹಾಗೆ ವಿಸ್ತರಣೆ ಮಾಡಿ 2020ರ ಮಾರ್ಚ್ 31ರೊಳಗೆ ಲಿಂಕ್ ಮಾಡಬೇಕು ಎಂದು ಕೊನೆಯ ದಿನಾಂಕವನ್ನು ಪ್ರಕಟಿಸಿ ತಿಂಗಳುಗಳು ಉರುಳಿದೆ. ಆದರೂ ಅನೇಕರು ಲಿಂಕ್ ಮಾಡಿಲ್ಲ ಎನ್ನಲಾಗಿದೆ.
ಭಾರತದಲ್ಲಿ ಈವರೆಗೆ ಸುಮಾರು 30.75 ನಾಗರಿಕರು ತಮ್ಮ ಪ್ಯಾನ್ ಕಾರ್ಡ್ಗಳಿಗೆ ಆಧಾರ್ ಲಿಂಕ್ ಮಾಡಿದ್ದಾರೆ. ಇನ್ನೂ 17.58 ಕೋಟಿ ಜನರು ಆಧಾರ್ ಲಿಂಕ್ ಮಾಡುವುದು ಬಾಕಿ ಇದೆ.
ಮಾರ್ಚ್ 31ರ ನಂತರ ಆಧಾರ್ ಲಿಂಕ್ ಆಗದ ಪ್ಯಾನ್ ಕಾರ್ಡ್ಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳಲಿದ್ದು, ಪ್ಯಾನ್ ಕಾರ್ಡ್ ಹೊಂದಿರುವವನು ಆಧಾರ್ ಲಿಂಕ್ ಮಾಡಿದ ನಂತರ ಅದರ ಮೌಲ್ಯ ವಾಪಾಸಾಗುವುದು ಎಂದು ತಿಳಿಸಲಾಗಿದೆ. (ಏಜೆನ್ಸೀಸ್)