

ಕರೊನಾ ಸೋಂಕಿನ ಹಾವಳಿ ನಿಯಂತ್ರಣಕ್ಕೆ ಬರುತ್ತಿಲ್ಲ. ಈವರೆಗೆ, ಮಹಾರಾಷ್ಟ್ರ, ದೆಹಲಿ ಮತ್ತು ತಮಿಳುನಾಡು ಸ್ಥಿತಿ ಚಿಂತೆಗೆ ಕಾರಣವಾಗಿತ್ತು. ಆದರೆ, ಕರ್ನಾಟಕದಲ್ಲೂ ಸೋಂಕು ಪ್ರಕರಣಗಳು ವೇಗವಾಗಿ ವೃದ್ಧಿಸುತ್ತಿವೆ. ಶನಿವಾರ ಒಂದೇ ದಿನ 918 ಪ್ರಕರಣಗಳು ದಾಖಲಾಗಿದ್ದವು. ಭಾನುವಾರವಂತೂ ಸಾವಿರದ ಗಡಿ ದಾಟಿ, 1267 ಪ್ರಕರಣಗಳು ದಾಖಲಾಗಿವೆ. 16 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರುವೊಂದರಲ್ಲೇ 783 ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ಮೊದಲ ಬಾರಿ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಇಂದಿನಿಂದ (ಸೋಮವಾರ) ರಾತ್ರಿ ಕರ್ಫ್ಯೂ , ಜುಲೈ 5ರಿಂದ ಭಾನುವಾರ ಲಾಕ್ಡೌನ್ ಮತ್ತೆ ಜಾರಿಗೆ ಬರುತ್ತಿದೆ. ಸೋಂಕು ಪ್ರಸರಣದ ವೇಗವನ್ನು ತಗ್ಗಿಸಲು ಸರ್ಕಾರ ಹರಸಾಹಸ ಪಡುತ್ತಿದೆಯಾದರೂ, ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಮುಂದಿನ ಕೆಲ ದಿನಗಳ ಕಾಲ ಇದೇ ಸ್ಥಿತಿ ಮುಂದುವರಿದರೆ, ಚಿಕಿತ್ಸೆ ನಿಟ್ಟಿನಲ್ಲಿ ಸರ್ಕಾರ ಮಾಡಿಕೊಂಡ ಸಿದ್ಧತೆಗಳು ಸಾಕಾಗದ ಸನ್ನಿವೇಶ ತಲೆದೋರಬಹುದು.
ಜನಜೀವನವನ್ನು ಮತ್ತೆ ಸಹಜ ಸ್ಥಿತಿಗೆ ತರಲು, ಆರ್ಥಿಕತೆ ಮತ್ತು ಉದ್ಯೋಗಗಳನ್ನು ಉಳಿಸಲು ಸರ್ಕಾರ ದಿಗ್ಬಂಧನವನ್ನು ಹಂತಹಂತವಾಗಿ ವಾಪಸ್ ಪಡೆದಿದೆ. ಇದು ತೀರಾ ಅವಶ್ಯಕ ಮತ್ತು ಅನಿವಾರ್ಯ ಕ್ರಮವಾಗಿತ್ತು. ಲಾಕ್ಡೌನ್ ತೆರವುಗೊಂಡಿದೆ ಎಂದ ಮಾತ್ರಕ್ಕೆ ಕರೊನಾದ ಅಪಾಯ ಕುಗ್ಗಿದೆ ಎಂದಲ್ಲ. ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳದೆ ಜನರು ಅನಿಯಂತ್ರಿತ ಓಡಾಟದಲ್ಲಿ ತೊಡಗಿಕೊಂಡಿದ್ದಾರೆ. ದಿನನಿತ್ಯದ ತುರ್ತು ಕೆಲಸಗಳಿಗೆ ಒಂದಿಷ್ಟು ಓಡಾಟ ಸರಿ. ಆದರೆ, ಸುರಕ್ಷಾ ಕ್ರಮಗಳನ್ನು ಅನುಸರಿಸದೆ ಇರುವುದು, ಜನಸಂದಣಿ ಪ್ರದೇಶಗಳಲ್ಲಿ ಸಂಚರಿಸುವುದು, ಅನಗತ್ಯವಾಗಿ ಮನೆಯಿಂದ ಹೊರಬರುವುದು ಹೀಗೆ ಇಂಥ ಹಲವು ಅಪಸವ್ಯಗಳಿಗೆ ಭಾರಿ ಬೆಲೆ ತೆರಬೇಕಾಗುತ್ತದೆ. ಎಷ್ಟೋ ಕಡೆಗಳಲ್ಲಿ ಜನರು ಈಗಲೂ ಮಾಸ್ಕ್ ಧರಿಸುತ್ತಿಲ್ಲ. ಹಾಗಾಗಿಯೇ, ಸರ್ಕಾರ ಮಾಸ್ಕ್ ಹಾಕದೆ ಇರುವವರ ಮೇಲೆ ದಂಡದ ಅಸ್ತ್ರ ಪ್ರಯೋಗಿಸುತ್ತಿದೆ. ಇಂಥ ಬಿಕ್ಕಟ್ಟಿನ ಸನ್ನಿವೇಶದಲ್ಲೂ ಎಲ್ಲವೂ ಸರ್ಕಾರವೇ ಮಾಡಲಿ ಎಂದು ನಿರೀಕ್ಷಿಸುವುದು ಸೂಕ್ತವಲ್ಲ. ನಾಗರಿಕರಿಗೂ ಅವರದ್ದೇ ಆದ ಜವಾಬ್ದಾರಿ, ಕರ್ತವ್ಯ ಇರುತ್ತದೆ. ಆ ಬದ್ಧತೆಯನ್ನು ಮರೆಯಬಾರದು. ಪ್ರಸಕ್ತ ಸನ್ನಿವೇಶದಲ್ಲಿ ಸರ್ಕಾರದೊಂದಿಗೆ ನಾಗರಿಕ ಸಮುದಾಯ ಸೂಕ್ತ ಸಹಕಾರ ನೀಡಬೇಕು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಓಡಾಟವನ್ನು ಆದಷ್ಟು ನಿಯಂತ್ರಿಸಬೇಕು.
ಆಸ್ಪತ್ರೆಗಳನ್ನು ಕರೊನಾ ಚಿಕಿತ್ಸೆಗೆ ಸನ್ನದ್ಧಗೊಳಿಸುವ ಗುರುತರ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಇತ್ತೀಚಿನ ದಿನಗಳಲ್ಲಿ ರೋಗಿಗಳು ಚಿಕಿತ್ಸೆಗೆ ಪರದಾಡಿದ ಮತ್ತು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತ ಹಲವು ಪ್ರಕರಣಗಳು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾಕ್ಷಿ ಒದಗಿಸಿದ್ದವು. ಹಾಗಾಗಿ, ಕುಂದುಕೊರತೆಗಳನ್ನು ನಿವಾರಿಸಿ ಸೂಕ್ತ ಸಮಯಕ್ಕೆ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಮಾಡಬೇಕಿದೆ. ಚೇತರಿಕೆ ಪ್ರಮಾಣ ಹೆಚ್ಚುತ್ತಿರುವುದು ಸ್ವಲ್ಪ ಸಮಾಧಾನದ ಸಂಗತಿಯಾದರೂ, ಸರ್ಕಾರ ಮತ್ತು ಜನಸಮುದಾಯ ಕರೊನಾ ಸೋಂಕಿನ ವಿರುದ್ಧ ಇನ್ನಷ್ಟು ಪರಿಣಾಮಕಾರಿಯಾಗಿ ಅಷ್ಟೇ ಎಚ್ಚರಿಕೆಯಿಂದ ಹೋರಾಡಬೇಕಾದ ಕಾಲವಿದು.