

ಈ ವರ್ಷದ ಮಾರ್ಚ್ ತಿಂಗಳಲ್ಲಿ ರಾಜ್ಯದಲ್ಲಿ ಕರೊನಾ ಸೋಂಕಿನ ಹಾವಳಿ ಆರಂಭವಾದಾಗಿನಿಂದ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡ ಹೆಚ್ಚಿದೆ. ಆರಂಭದಲ್ಲಿ ಸೋಂಕು ಪ್ರಕರಣಗಳು ಮತ್ತು ಮರಣ ಪ್ರಮಾಣ ಎರಡೂ ಕಡಿಮೆ ಇದ್ದವು. ಇದೇ ಕಾರಣಕ್ಕಾಗಿ ಕರ್ನಾಟಕ ಮಾದರಿ ಕೇಂದ್ರದಿಂದ ಶ್ಲಾಘಿಸಲ್ಪಟ್ಟಿತ್ತು. ಆದರೆ, ನೋಡುನೋಡುತ್ತಿದ್ದಂತೆ ಪರಿಸ್ಥಿತಿ ಬದಲಾಗಿದೆ. ಸೋಂಕಿನ ಪ್ರಸರಣದ ವೇಗ ಗಣನೀಯವಾಗಿ ಹೆಚ್ಚಿದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 60 ಸಾವಿರದ ಗಡಿ ದಾಟಿದ್ದರೆ, ಈ ಪೈಕಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲೇ ಇವೆ. ಬೆಂಗಳೂರು ಮತ್ತು ಕೆಲ ಜಿಲ್ಲೆಗಳಲ್ಲಿ ಒಂದು ವಾರದ ಲಾಕ್ಡೌನ್ ಜಾರಿಯಲ್ಲಿದೆಯಾದರೂ, ಹೇಳಿಕೊಳ್ಳುವಂಥ ಪ್ರಯೋಜನ ವಾಗಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಂತೆ ಆರೋಗ್ಯ ಇಲಾಖೆಯ ಸಿದ್ಧತೆಗಳು ಸಾಕಾಗುತ್ತಿಲ್ಲ. ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಅವಕಾಶ ಕಲ್ಪಿಸಿದರೂ, ರೋಗಿಗಳ ಪರದಾಟ ತಪು್ಪತ್ತಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಲೇ ಹಲವು ರೋಗಿಗಳು ಚಿಕಿತ್ಸೆ ಸಿಗದೆ ಪ್ರಾಣಬಿಟ್ಟಿರುವ ದುರದೃಷ್ಟಕರ ಘಟನೆಗಳಿಗೂ ರಾಜ್ಯ ಸಾಕ್ಷಿಯಾಗಿದೆ.
ಈ ನಡುವೆ, ಕರೊನಾ ಸೇನಾನಿಗಳಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ನರ್ಸ್, ಇತರ ಆರೋಗ್ಯ ಸಿಬ್ಬಂದಿಯೂ ಕರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ವಿಶ್ರಾಂತಿ ಇಲ್ಲದೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ವಾಸ್ತವವೇ. ಪ್ರಸಕ್ತ ಸೋಂಕು ಪ್ರಕರಣಗಳು ಗಣನೀಯವಾಗಿ ಹೆಚ್ಚಿರುವುದರಿಂದ ಮತ್ತು ಇದೇ ಪರಿಸ್ಥಿತಿ ಒಂದಿಷ್ಟು ಕಾಲ ಮುಂದುವರಿಯುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿರುವುದರಿಂದ ವೈದ್ಯರ ಸಮೇತ ಕರೊನಾ ಸೇನಾನಿಗಳ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಆದರೆ, ಕರೊನಾ ಭಯದಿಂದ ಹಲವೆಡೆ ವೈದ್ಯರೇ ಆಸ್ಪತ್ರೆಗೆ ಬರುತ್ತಿಲ್ಲ. ಕೋವಿಡ್ ಹೊರತಾದ ಕರ್ತವ್ಯ ನೀಡಿದರೆ ಮಾತ್ರ ನಿಭಾಯಿಸಲು ಸಾಧ್ಯ ಎಂದು ಹೇಳುತ್ತ ಕರ್ತವ್ಯದಿಂದ ವಿಮುಖರಾಗುತ್ತಿದ್ದಾರೆ. ಎಲ್ಲ ವೈದ್ಯರೂ ಈ ರೀತಿ ಮಾಡುತ್ತಿಲ್ಲವಾದರೂ ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರ ಹಿಂಜರಿಕೆ, ಚಿಕಿತ್ಸೆ ನೀಡಲು ನಿರಾಕರಣೆಯಂಥ ನಿದರ್ಶನಗಳು ಕಾಣುತ್ತಿವೆ.
ಕರೊನಾ ವಿರುದ್ಧ ಪ್ರಬಲವಾಗಿ ಹೋರಾಟ ನಡೆಸಿ, ಜನರಲ್ಲಿ ವಿಶ್ವಾಸ ಮೂಡಿಸಬೇಕಾದ ವೈದ್ಯರು ಅಥವಾ ಆರೋಗ್ಯ ಕಾರ್ಯಕರ್ತರೇ ಈ ರೀತಿ ಕೈಚೆಲ್ಲಿದರೆ ರೋಗಿಗಳ ಪಾಡೇನು? ಒತ್ತಡ ಇರುವುದು ನಿಜ. ಆದರೆ, ಈ ಸಂದರ್ಭ ಹೋರಾಟದಿಂದ ಹಿಂದೆ ಸರಿಯುವಂಥದ್ದಲ್ಲ. ಬದಲಾಗಿ, ಮತ್ತಷ್ಟು ಪರಿಣಾಮಕಾರಿಯಾಗಿ ಹೋರಾಡುವುದರ ಮೂಲಕ ಸೋಂಕಿನ ಹಾವಳಿಯನ್ನು ನಿಯಂತ್ರಿಸಬೇಕಿದೆ. ವೈದ್ಯ ವೃತ್ತಿಯ ಪಾವಿತ್ರ್ಯ ಮತ್ತು ಅವರ ಸಮರ್ಪಣಾ ಭಾವದ ಬಗ್ಗೆ ಸಮಾಜದಲ್ಲಿ ಗೌರವ ಇದ್ದೇ ಇದೆ. ವೈದ್ಯ ಸಮುದಾಯ ಈ ಇಡೀ ಸನ್ನಿವೇಶವನ್ನು ಬಿಕ್ಕಟ್ಟಾಗಿ ನೋಡುವುದಕ್ಕಿಂತ ಅವಕಾಶವಾಗಿ ನೋಡಲಿ. ಹೊಸ ರೋಗದ ವಿರುದ್ಧ ಹೋರಾಡಲು, ರೋಗಿಗಳ ಪ್ರಾಣ ಉಳಿಸಲು ಸಿಕ್ಕಿರುವ ಅಪರೂಪದ ಅವಕಾಶ ಎಂದು ಅರಿತುಕೊಂಡು ಕಾರ್ಯತತ್ಪರರಾಗಲಿ. ಕರೊನಾ ಸೇನಾನಿಗಳು ಸಮಾಜದ ಆತ್ಮಸ್ಥೈರ್ಯ ಹೆಚ್ಚಿಸಬೇಕಿದ್ದು, ಅವರೇ ಕುಗ್ಗಿ ಹೋದರೆ ಜನರಲ್ಲಿ ಭರವಸೆ ಬಿತ್ತುವವರಾರು?