'ಸೇನೆಗೆ ಮತ್ತಷ್ಟು ಶಕ್ತಿ'; ಮುಂದಿನ ವಾರ ಭಾರತಕ್ಕೆ ಬರಲಿವೆ ಮೂರು ಅಪಾಚೆ ಹೆಲಿಕಾಪ್ಟರ್‌ಗಳು| apache helicopters

Apache helicopters
Published on

ನವದೆಹಲಿ; ಭಾರತೀಯ ಸೇನಾ ಪಡೆಗಳಿಗೆ ಮತ್ತಷ್ಟು ಶಕ್ತಿ ನೀಡುವ ಸಲುವಾಗಿ ಅಪಾಚೆಯ 3 ಯುದ್ಧ ಹೆಲಿಕಾಪ್ಟರ್​ಗಳು ಮುಂದಿನ ವಾರ ಭಾರತಕ್ಕೆ ಸೇರ್ಪಡೆಯಾಗಲಿವೆ.

ಜಾಗತಿಕ ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿನ ತ್ವರಿತ ಬದಲಾವಣೆಗಳಿಂದಾಗಿ ಹೆಲಿಕಾಪ್ಟರ್‌ಗಳ ಹಸ್ತಾಂತರ ಮುಂದೂಡುತ್ತಲೇ ಇತ್ತು. ಇದೀಗ 'ಟ್ಯಾಂಕ್ಸ್ ಇನ್ ದಿ ಏರ್' ಎಂದೂ ಕರೆಯಲ್ಪಡುವ AH-64E ಗಳ ಸುಧಾರಿತ ದಾಳಿ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಯ (IAF) ಹಿಂದನ್ ವಾಯುಪಡೆ ನಿಲ್ದಾಣಕ್ಕೆ ಬಂದು ಸೇರಲಿವೆ.

ಭಾರತವು ಇದೇ ಜುಲೈ 21 ರಂದು ಅಮೆರಿಕದಿಂದ ಬಹುನಿರೀಕ್ಷಿತ ಅಪಾಚೆ ದಾಳಿ ಹೆಲಿಕಾಪ್ಟರ್‌ಗಳನ್ನು ಸ್ವೀಕರಿಸಲಿದೆ. ರಕ್ಷಣಾ ಮತ್ತು ಭದ್ರತಾ ಸಂಸ್ಥೆಗಳಿಗೆ ಸಂಬಂಧಿಸಿದ ಮೂಲಗಳ ಪ್ರಕಾರ, ಹೆಲಿಕಾಪ್ಟರ್‌ಗಳನ್ನು ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾಗುವುದು ಎಂದು ಹೇಳಲಾಗಿದೆ.

ರಾಜಸ್ಥಾನದ ಜೋಧ್‌ಪುರದಲ್ಲಿ ಸೇನೆಯು ತನ್ನ ಮೊದಲ ಅಪಾಚೆ ಸ್ಕ್ವಾಡ್ರನ್ ಅನ್ನು ರಚಿಸಿದ 15 ತಿಂಗಳ ಬಳಿಕ ಮೂರು ಅಪಾಚೆ ಹೆಲಿಕಾಪ್ಟರ್ ಭಾರತೀಯ ಸೇನೆಗೆ ಸೇರ್ಪಡೆಯಾಗಲು ಸಜ್ಜಾಗಿವೆ. ಅಪಾಚೆ ಅತ್ಯಂತ ಆಧುನಿಕ ದಾಳಿ ಹೆಲಿಕಾಪ್ಟರ್ ಆಗಿದ್ದು, AH-64E ಅಪಾಚೆಯನ್ನು ಇತ್ತೀಚಿನ ಸಂವಹನ, ಸಂಚರಣೆ, ಸಂವೇದಕ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.

6 ಹೆಲಿಕಾಪ್ಟರ್‌ಗಳಿಗೆ ಒಪ್ಪಂದ

(ಏಜೆನ್ಸೀಸ್)

2020 ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ಭಾರತೀಯ ಸೇನೆಗೆ ಆರು ಅಪಾಚೆ ಹೆಲಿಕಾಪ್ಟರ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದವು. ಅದಕ್ಕೂ ಮೊದಲು ಐಎಎಫ್, ಸೆಪ್ಟೆಂಬರ್ 2015 ರಲ್ಲಿ 22 ಅಪಾಚೆ ಹೆಲಿಕಾಪ್ಟರ್‌ಗಳಿಗಾಗಿ ಅಮೆರಿಕ ಮತ್ತು ಬೋಯಿಂಗ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿ, ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಿತ್ತು. ಅಮೆರಿಕ 2020 ಜುಲೈ ನಲ್ಲಿ ಭಾರತೀಯ ವಾಯುಪಡೆಗೆ ಎಲ್ಲಾ ೨೨ ಅಪಾಚೆ ದಾಳಿ ಹೆಲಿಕಾಪ್ಟರ್‌ಗಳ ವಿತರಣೆಯನ್ನು ಪೂರ್ಣಗೊಳಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಮೂರು ಅಪಾಚೆ ಹೆಲಿಕಾಪ್ಟರ್​ಗಳು ಮುಂದಿನ ವಾರ ಭಾರತಕ್ಕೆ ಬರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net