

ಪಟನಾ: ರೈತರಿಗೆ ಕೆಲಸವಿಲ್ಲದೆ ಬಿಡುವಾಗಿರುವ ಏಪ್ರಿಲ್-ಜೂನ್ ಅವಧಿಯಲ್ಲೇ ಹೆಚ್ಚಿನ ಕೊಲೆಗಳು ನಡೆಯುತ್ತವೆ ಎಂದು ಬಿಹಾರದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿ) ಕುಂದನ್ ಕೃಷ್ಣನ್ ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಕೇಂದ್ರ ಕಾರ್ಯಾಲಯದ ಎಡಿಜಿ ಕೃಷ್ಣನ್ ಈ ಟಿಪ್ಪಣಿ ಮಾಡಿದ್ದಾರೆ. ‘ಇತ್ತೀಚೆಗೆ ಇಡೀ ಬಿಹಾರದಲ್ಲಿ ಅನೇಕ ಕೊಲೆಗಳಾಗಿವೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಬಹಳಷ್ಟು ಹತ್ಯೆಗಳು ನಡೆಯುತ್ತವೆ. ಬಹುತೇಕ ರೈತರಿಗೆ ಕೆಲಸವಿಲ್ಲದಿರುವುದರಿಂದ ಅದು ಮುಂದುವರಿಯುತ್ತದೆ’ ಎಂದು ಕೃಷ್ಣನ್ ಹೇಳಿದ್ದರು. ಮಳೆ ಮುಗಿದ ನಂತರ ರೈತರು ಕೆಲಸಗಳಲ್ಲಿ ವ್ಯಸ್ತರಾಗುತ್ತಾರೆ ಹಾಗೂ ಕೊಲೆಗಳು ತಗ್ಗುತ್ತವೆ ಎಂದೂ ಅಭಿಪ್ರಾಯ ಪಟ್ಟಿದ್ದರು. ಮಾಧ್ಯಮದವರು ಕೊಲೆಗಳ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಮುಂಬರುವ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ರಾಜಕಾರಣಿಗಳು ಕೂಡ ಹೆಚ್ಚು ಗಮನ ಹರಿಸುತ್ತಾರೆ ಎಂದಿದ್ದರು.