ಯೆಸ್​ ಬ್ಯಾಂಕ್​ಗೆ ವಿಧಿಸಿದ್ದ ನಿರ್ಬಂಧ ಮಾ.18ಕ್ಕೆ ತೆರವು; ಅವಸರ, ಭಯ ಬೇಡ..ಎಲ್ಲರ ಹಣವೂ ಸುರಕ್ಷಿತವೆಂದ ಆರ್​ಬಿಐ ಗವರ್ನರ್​...

YES BANK PHOTO F
Published on

ನವದೆಹಲಿ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಯೆಸ್​ ಬ್ಯಾಂಕ್​ ಮೇಲೆ ಹೇರಿದ್ದ ತಾತ್ಕಾಲಿಕ ನಿಷೇಧವನ್ನು ಮಾರ್ಚ್​ 18ರಂದು ಸಂಜೆ 6ಗಂಟೆಗೆ ಹಿಂಪಡೆಯಲಾಗುವುದು ಎಂದು ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್​ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ(ಮಾರ್ಚ್​ 18) ಸಂಜೆ ಬ್ಯಾಂಕ್​ನ ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಳ್ಳಲಿದೆ. ಯೆಸ್​ ಬ್ಯಾಂಕ್​ನಲ್ಲಿ ಠೇವಣಿ ಇಟ್ಟವರು ನಗದು ಹಿಂತೆಗೆದುಕೊಳ್ಳುವ ವಿಚಾರದಲ್ಲಿ ಅವಸರ ಮಾಡಬಾರದು. ಠೇವಣಿದಾರರು ಆತಂಕದಿಂದ ಬಂದು ಹಣ ಹಿಂತೆಗೆತಕ್ಕೆ ಅವಸರ ಮಾಡಿದರೆ, ಬ್ಯಾಂಕ್​ನ್ನು ಪುನಶ್ಚೇತನಗೊಳಿಸಲು ನಾವು ತೆಗೆದುಕೊಂಡ ಕ್ರಮ ಹಳಿ ತಪ್ಪುತ್ತದೆ ಎಂದು ಹೇಳಿದರು.

ಯೆಸ್​ ಬ್ಯಾಂಕ್​ ಠೇವಣಿದಾರರ ಹಣ ಸುರಕ್ಷಿತವಾಗಿದೆ. ಬ್ಯಾಂಕ್​ನ ಆರ್ಥಿಕ ಸುಧಾರಣೆಗೆ ಆರ್​ಬಿಐ ಎಲ್ಲ ರೀತಿಯ ಬೆಂಬಲವನ್ನೂ ನೀಡಲಿದೆ. ಗ್ರಾಹಕರು ಯಾರೂ ತಮ್ಮ ಹಣದ ವಿಚಾರದಲ್ಲಿ ಭಯ ಪಡುವುದು ಬೇಡ ಎಂದರು.

ಸುಸ್ತಿ ಸಾಲಗಳಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್​ನ್ನು ಮಾರ್ಚ್​ 5ರಂದು ಭಾರತೀಯ ರಿಸರ್ವ್​ ಬ್ಯಾಂಕ್​ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಬ್ಯಾಂಕ್​ನ ಆಡಳಿತ ಮಂಡಳಿಯನ್ನು ಸೂಪರ್​ಸೀಡ್ ಮಾಡಿತ್ತು.

ಹಾಗೇ ಗ್ರಾಹಕರ ಹಣ ವಿತ್​ಡ್ರಾ ಮಿತಿಯನ್ನು 50 ಸಾವಿರ ರೂಪಾಯಿಗೆ ಮಿತಿಗೊಳಿಸಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net