

ಕೋಲಾರ: ನಿವೇಶನ ವಾಪಸ್ ಮಾಡಿದರೂ ಆರೋಪದಿಂದ ಮುಕ್ತರಾಗಲು ಸಾಧ್ಯವಿಲ್ಲ. ಮುಡಾ ಹಗರಣ ಸಮರ್ಪಕವಾಗಿ ತನಿಖೆಯಾಗಿ ಸಿದ್ದರಾಮಯ್ಯ ಅವರು ಆರೋಪ ಮುಕ್ತರಾಗಲಿ, ಅಲ್ಲಿಯ ತನಕ ರಾಜೀನಾಮೆ ನೀಡಿ ಪ್ರಾಮಾಣಿಕರು ಎನಿಸಿಕೊಳ್ಳಲಿ ಎಂದು ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಆರೋಪ ಕೇಳಿ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಅದೇ ರೀತಿ ಸಿದ್ದರಾಮಯ್ಯ ಸಹ ನಡೆದುಕೊಳ್ಳಲಿ ಎಂದರು.
ಮುಡಾ ಆರೋಪ ಎದುರಿಸುತ್ತಿರುವ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿದರೆ ತನಿಖೆ ದಿಕ್ಕು ತಪು÷್ಪವ ಸಾಧ್ಯತೆ ಇದೆ. ಆದ್ದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ. ಆ ಮೂಲಕ ಜನರ ನಂಬಿಕೆ ಉಳಿಸಿಕೊಳ್ಳಲಿ ಎಂದರು.
ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ವೇಳೆ, ಬಿಎಸ್‌ವೈ ಅಧಿಕಾರದಲ್ಲಿರುವುದರಿಂದ ವಿಚಾರಣೆ ಸರಿಯಾಗಿ ನಡೆಯುವುದಿಲ್ಲ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದರು. ಆದರೆ ಈಗ ಹೇಗೆ ಅಧಿಕಾರದಲ್ಲಿ ಮುಂದುವರಿಯುತ್ತಾರೆ ಎಂದು ಪ್ರಶ್ನಿಸಿದರು.
ಶಾಸಕ ಜಿ.ಟಿ.ದೇವೇಗೌಡರ ಹೇಳಿಕೆ ವೈಯಕ್ತಿಕವಾಗಿ ಇರಬಹುದು, ನಮ್ಮ ನಿಲುವು, ಪಕ್ಷದ ನಿಲುವು ರಾಜೀನಾಮೆ ನೀಡಬೇಕಿದೆಯಷ್ಟೇ ಎಂದರು.
ಆರೋಪ ನಿಜವಲ್ಲ
ಮುಡಾ ವಿಚಾರವಾಗಿ ಇಡಿಯವರು ಎಫ್ಐಆರ್ ದಾಖಲಿಸಿಲ್ಲ, ಲೋಕಾಯುಕ್ತದ ಎಫ್ಐಆರ್ ಆಧಾರದ ಮೇಲೆ ತನಿಖೆ ಮಾಡುತ್ತಿದ್ದಾರೆ. ತನಿಖೆ ಬಳಿಕ ಸತ್ಯಾಂಶ ಹೊರ ಬರಲಿ ಎಂದು ಸಂಸದರು ತಿಳಿಸಿದರು. ಇನ್ನು ಉದ್ಯಮಿಯೊಬ್ಬರು ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಆರೋಪ ಮಾಡಿರುವುದನ್ನು ಸಾಬೀತುಪಡಿಸಲಿ. ಹೇಳಿಕೆ ನೀಡಿದ ಮಾತ್ರಕ್ಕೆ ನಿಜವಾಗುವುದಿಲ್ಲ ಎಂದರು.
ಕೈಗಾರಿಕೆಗಳ ಸ್ಥಾಪನೆಗೆ ಬದ್ಧ
ಬೆಂಗಳೂರಿನಲ್ಲಿ ಎಂಎಸ್‌ಎಂಇಯಿಂದ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೋಲಾರಕ್ಕೆ ಏನು ಬೇಕಾದರೂ ಮಾಡಿಕೊಡುವ ಭರವಸೆ ನೀಡಿದ್ದಾರೆ. 4ರಲ್ಲಿ ಒಂದು ಅಥವಾ 2 ಯೋಜನೆ ಜಾರಿಯಾಗಲಿದ್ದು, ಜನವರಿಯೊಳಗೆ ಜಿಲ್ಲೆಯ ಜನರಿಗೆ ಸಿಹಿಸುದ್ದಿ ಸಿಗಲಿದೆ. ಕೆಜಿಎಫ್ ಭಾಗಕ್ಕೆ ಕೈಗಾರಿಕೆಗಳನ್ನು ತರಲು ನಾವು ಬದ್ಧರಾಗಿದ್ದೇವೆ. ಕೈಗಾರಿಕೆ ಅಭಿವೃದ್ಧಿಗೆ 2-3 ವರ್ಷ ಬೇಕಾಗಿದೆ. ಅದಕ್ಕೂ ಮೊದಲು ಕೆಜಿಎಫ್ ನಗರ ಅಭಿವೃದ್ಧಿಯಾಗಬೇಕಿದೆ. ವಸತಿ, ಹೋಟೆಲ್ ಸೇರಿ ಎಲ್ಲ ಸೌಕರ್ಯಗಳಿದ್ದರೆ ಮಾತ್ರವೇ ಬೇರೆಯವರೂ ಈ ಭಾಗಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ಸಂಸದರು ತಿಳಿಸಿದರು.
ಕೇಂದ್ರದ ವಿರುದ್ಧ ಆರೋಪ ಸಲ್ಲದು
ಕೋಲಾರದಲ್ಲಿ ಹೊರ ವರ್ತುಲ ರಸ್ತೆಗೆ ಮೀಸಲಿರಿಸಿದ್ದ ಅನುದಾನ ಕೇಂದ್ರ ಸರ್ಕಾರಕ್ಕೆ ವಾಪಸ್ ಹೋಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರವು ಭೂಸ್ವಾಧೀನಪಡಿಸಿಕೊಂಡು ಸಹಕರಿಸಿದರೆ ಅನುಕೂಲವಾಗಲಿದೆ. ಆ ಪ್ರಕ್ರಿಯೆಯಾಗದೆ ಕೇಂದ್ರದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಮಲ್ಲೇಶ್ ಬಾಬು ಹೇಳಿದರು.