ಬೆಂಗಳೂರು: ರಂಗಭೂಮಿ, ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟನೆ ಮೂಲಕ ಛಾಪು ಮೂಡಿಸಿದವರು ಕಲಾವಿದ ಮೂಗು ಸುರೇಶ್. ಕನ್ನಡದ 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗಿದೆ. ಎರಡೂವರೆ ದಶಕಗಳ ಚಿತ್ರರಂಗದ ಅನುಭವದೊಂದಿಗೆ ಇದೀಗ ಮೂಗು ಸುರೇಶ್ ಹೊಸ ಸಾಹಸಕ್ಕಿಳಿದಿದ್ದು, ‘ಕ್ಷಮೆಯಿರಲಿ ತಂದೆ’ ಚಿತ್ರದ ಮೂಲಕ ಅವರು ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ. ಜತೆಗೆ ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಲೇಖಕ ಸ. ಹರೀಶ್ ರಚಿಸಿದ್ದ ‘ಡೆತ್ ಸರ್ಟಿಫಿಕೇಟ್’ ಕಥೆಯನ್ನು ಮೂಗು ಸುರೇಶ್ ಸಿನಿಮಾ ಮಾಡಿದ್ದಾರೆ. ಇದೊಂದು ತಂದೆ-ಮಗನ ಬಾಂಧವ್ಯ ಸಾರುವ ಚಿತ್ರವಾಗಿದೆ. ಹಿರಿಯ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಟಿ.ಎಸ್.ನಾಗಾಭರಣ ಇತ್ತೀಚೆಗೆ ಚಿತ್ರದ ಟ್ರೇಲರ್ ರಿಲೀಸ್ ಮಾಡಿ, ತಂಡಕ್ಕೆ ಶುಭ ಹಾರೈಸಿದರು. ಮೂಗು ಸುರೇಶ್, ‘ಈ ಹಿಂದೆ ನನಗೆ ಹಲವು ಕಥೆಗಳನ್ನು ಸಿನಿಮಾ ಮಾಡಿ ಎಂದು ಹೇಳಿದ್ದರು, ನಾನು ಒಪ್ಪಿರಲಿಲ್ಲ. ಆದರೆ, ಸ. ಹರೀಶ್‌ರ ‘ಡೆತ್ ಸರ್ಟಿಫಿಕೇಟ್’ ಕಥೆ ನನಗೆ ತುಂಬಾ ಇಷ್ಟವಾಯಿತು. 10 ಸಾರಿ ಓದಿದ ಮೇಲೆ ಇದನ್ನು ಸಿನಿಮಾ ಮಾಡಬೇಕು ಎಂದು ನಿರ್ಧರಿಸಿದೆ. ಮೊದಲು ನಿರ್ದೇಶಕ ಪಿ.ಶೇಷಾದ್ರಿ ಬಳಿ ಚರ್ಚಿಸಿದ್ದೆ. ಅವರು ಸಕರಾತ್ಮಕ ಸ್ಪಂದಿಸಿದರೂ, ಇಂದಿನ ವ್ಯಾಪಾರದ ಮಟ್ಟಿಗೆ ದೂರು ಇರುವುದು ಒಳ್ಳೆಯದು ಎಂದಿದ್ದರು. ಆದರೆ, ನನ್ನ ಬಹುಕಾಲ ವರ್ಷಗಳ ಸಿನಿಮಾ ಅನುಭವ ಹಾಗೂ ತುಡಿತವೇ ‘ಕ್ಷಮೆಯಿರಲಿ ತಂದೆ’ ಚಿತ್ರ ಮಾಡುವಂತೆ ಪ್ರೇರೇಪಿಸಿತು. ಈವರೆಗೂ ಕೂಡಿಟ್ಟ ಹಣವನ್ನೆಲ್ಲಾ ಈ ಚಿತ್ರಕ್ಕೆ ಹೂಡಿಕೆ ಮಾಡಿದ್ದೇನೆ. ಬೆಂಗಳೂರು, ತುಮಕೂರು ಸೇರಿ 10 ದಿನಗಳ ಕಾಲ ಶೂಟಿಂಗ್ ನಡೆಸಿದ್ದೇವೆ’ ಎಂದು ಹೇಳಿದರು. ಇದೇ ಮೂಗು ಸುರೇಶ್ ಜತೆಗೆ ಮಂಜುನಾಥ ಹೆಗ್ಡೆ, ರೇಣುಕಾ ಬಾಲಿ, ಶ್ರೀಮಂತ, ವಿನ್ಯಾ ಶೆಟ್ಟಿ ಕಲಾಬಳಗದಲ್ಲಿದ್ದಾರೆ. ಜೂ.12ಕ್ಕೆ ‘ಕ್ಷಮೆಯಿರಲಿ ತಂದೆ’ ರಾಜ್ಯಾದ್ಯಂತ ರಿಲೀಸ್ ಆಗಲಿದೆ.