

ಶಾಲಾ ಬಾಲಕನಿಗೆ ತಾನು ಏನಾದರೂ ಸಾಧನೆ ಮಾಡಿ ಗಿನ್ನೀಸ್ ರೆಕಾರ್ಡ್ ಮಾಡಬೇಕು ಎನಿಸಿತು. ಆಗ ಮೊಂಟಿ ಲಾರ್ಡ್ ಎಂಬ ಬಾಲಕ ಪುಸ್ತಕಗಳ ಮೊದಲ ಸಾಲುಗಳನ್ನು ಓದಲು ಆರಂಭಿಸಿದ.
ಈಗ ಈ 14 ವರ್ಷದ ಬಾಲಕ ಕೇವಲ ಮೊದಲ ಸಾಲು ಹೇಳಿದರೆ ಸಾಕು 129 ಪುಸ್ತಕಗಳನ್ನು ಗುರುತಿಸುತ್ತಾನೆ! ಇದರಿಂದಾಗಿ ಮೊಂಟಿ ಗಿನ್ನೀಸ್ ರೆಕಾರ್ಡ್ ಪುಸ್ತಕದಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾನೆ.
ಈ ಮೊದಲು ಇಂತಹ ರೆಕಾರ್ಡ್ ಭಾರತೀಯನ ಹೆಸರಲ್ಲಿತ್ತು. ಆಗ ಮೊಂಟಿ ಅದನ್ನು ದಾಟಿ 129 ಪುಸ್ತಕಗಳ ಹೆಸರನ್ನು ಗುರುತಿಸಿದ್ದಾನೆ. ಮೊಂಟಿ ಸದ್ಯ ಸೈಕಾಲಜಿ ವಿಷಯದಲ್ಲಿ ದೂರ ಶಿಕ್ಷಣದ ಮೂಲಕ ಅಭ್ಯಾಸ ನಡೆಸುತ್ತಿದ್ದಾನೆ.
ಮೊಂಟಿ ತಂದೆ ಫ್ಯಾಬಿನ್ ಲಾರ್ಡ್ ಮಗನಿಗೆ ಈ ಬಗ್ಗೆ ಚಾಲೆಂಜ್ ಹಾಕಿದ್ದರು. ಏನಾದರು ಸಾಧನೆ ಮೂಲಕ ರೆಕಾರ್ಡ್ ಮಾಡು ಎಂದು. ಅದನ್ನು ಒಪ್ಪಿಕೊಂಡ ಮೊಂಟಿ ಈಗ ಸಾಧಕನಾಗಿದ್ದಾನೆ.
ಮೊಂಟಿ ಒಟ್ಟು 200 ಪುಸ್ತಕಗಳನ್ನು ತನ್ನ ತಂದೆ ಸಹಾಯದಿಂದ ಓದಿದ್ದ. ತಂದೆ ಫ್ಯಾಬಿನ್ ಓದುವುದನ್ನು ವಿಡಿಯೋ ಮಾಡಿದ್ದರು. ಇದರ ಸಹಾಯದಿಂದ ಮೊಂಟಿ ಪುಸ್ತಕದ ಸಾಲುಗಳನ್ನು ನೆನಪಿಟ್ಟುಕೊಂಡಿದ್ದಾನೆ.
ಈ 200 ಪುಸ್ತಕಗಳಲ್ಲಿ ಪ್ರಖ್ಯಾತ ಪುಸ್ತಕಗಳಾದ ಹ್ಯಾರಿ ಪಾಟರ್, ದಿ ಗ್ರುಫೆಲೊ, ಅಡ್ವೆಂಚರ್ಸ್ ಆಫ್ ಹಕ್ಕಲ್ಬೆರ್ರಿ ಫಿನ್ ಇವುಗಳ ಜತೆಗೆ ವಿಲೀಯಮ್ ಷೇಕ್ಸ್ಪೀಯರ್ ಅವರ ನಾಟಕಗಳು, ಇಯಾನ್ ಫ್ಲೆಮಿಂಗ್ಸ್ ಅವರ ಬಾಂಡ್ ಪುಸ್ತಕಗಳನ್ನು ಮೊಂಟಿ ನೆನಪಿಟ್ಟುಕೊಂಡಿದ್ದಾನೆ.
ಪುಸ್ತಕದ ಮೊದಲ ಸಾಲುಗಳನ್ನು ನಾನು ನೆನಪಿಟ್ಟುಕೊಳ್ಳಲು ಎರಡರಿಂದ ಮೂರು ವಾರ ಬೇಕಾಗಿತ್ತು. ನಾನು ಪುಸ್ತಕದ ಶೀರ್ಷಿಕೆ ಜತೆಗೆ ನೆನಪಿಸಿಕೊಳ್ಳುತ್ತಿದ್ದೆ. ಹ್ಯಾರಿ ಪಾಟರ್ನಂತಹ ಪುಸ್ತಕಗಳು ತುಂಬ ಸುಲಭ ಆದರೆ, ಲಾರ್ಡ್ ಆಫ್ ದಿ ರಿಂಗ್ಸ್ ಪುಸ್ತಕ ಕಠಿಣವಾಯಿತು ಎನ್ನುತ್ತಾನೆ ಮೊಂಟಿ. (ಏಜೆನ್ಸೀಸ್)