ಮೊಂತಾ ಚಂಡಮಾರುತ ಎಫೆಕ್ಟ್​! ರಾಜ್ಯದಲ್ಲಿ ಯೆಲ್ಲೋ ಅಲರ್ಟ್;​ ಹಲವೆಡೆ ಭಾರೀ ಮಳೆ ಸಾಧ್ಯತೆ | Montha Cyclone

ajit (10)
Published on

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಮೊಂತಾ ಚಂಡಮಾರುತ (Montha Cyclone) ತೀವ್ರಗೊಂಡಿದ್ದು, ಕರಾವಳಿ ಭಾಗಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಆಂಧ್ರಪ್ರದೇಶ, ಪುದುಚೇರಿ, ಓಡಿಶಾ ರಾಜ್ಯಗಳಲ್ಲಿ ಬಿರುಸಿನ ಗಾಳಿ ಹಾಗೂ ಭಾರೀ ಮಳೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಇದರೊಂದಿಗೆ ಕೆಲವಡೆ ಭೂಕುಸಿತ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಇಂದು ಬೆಳಗ್ಗಿನಿಂದಲೇ ಆಂಧ್ರಪ್ರದೇಶದಲ್ಲಿ ಮೊಂತಾ ಪರಿಣಾಮ ಬೀರಿದ್ದು, ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಭಯದ ಭೀತಿ ಹುಟ್ಟಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕರಾವಳಿ ಭಾಗದಲ್ಲಿರುವ ಜನರನ್ನು ಪುನರ್ವಸತಿ ಕೇಂದ್ರಗಳಿಗೆ ತುರ್ತಾಗಿ ಸ್ಥಳಾಂತರಿಸುವಂತೆ ಸಿಎಂ ಎನ್​. ಚಂದ್ರಬಾಬು ನಾಯ್ಡು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಈ ಚಂಡಮಾರುತ ಗಂಟೆಗೆ 100 ಕಿ.ಮೀ.ಗೂ ಹೆಚ್ಚಿನ ವೇಗದಲ್ಲಿ ಚಲಿಸುತ್ತಿದೆ. ಇದು ಪ್ರಸ್ತುತ ಮಚಲಿಪಟ್ಟಣದಿಂದ 230 ಕಿ.ಮೀ, ಕಾಕಿನಾಡದಿಂದ 310 ಕಿ.ಮೀ ಮತ್ತು ವಿಶಾಖಪಟ್ಟಣದಿಂದ 370 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಇದು ತೀವ್ರ ಚಂಡಮಾರುತವಾಗಿ ಬಲಗೊಳ್ಳುವ ಸಾಧ್ಯತೆಯಿದೆ ಎಂದು ಇತ್ತೀಚಿನ ಹವಾಮಾನ ಇಲಾಖೆಯ ವರದಿ ತಿಳಿಸಿದೆ.

ರಾಜ್ಯಕ್ಕೂ ಮೊಂತಾ ಎಫೆಕ್ಟ್​

ಇಂದು ಬೆಳಗ್ಗೆಯಿಂದಲೇ ರಾಜ್ಯ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಮುಂದಿನ ಮೂರು ದಿನಗಳ ಕಾಲ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಚಾಮರಾಜನಗರ, ಕೊಡಗು, ಬಾಗಲಕೋಟೆ, ಕೊಪ್ಪಳ, ರಾಯಚೂರು, ಗದಗ, ಬೆಳಗಾವಿ, ಚಿಕ್ಕಬಳ್ಳಾಪುರ, ಶಿವಮೊಗ್ಗ ಜಿಲ್ಲೆಗಳಲ್ಲಿ ವರುಣ ಸುರಿಯಲಿದ್ದಾನೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net