

ಶಿವಮೊಗ್ಗ: ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಭಾನುವಾರ ಇಡೀ ದಿನ ಜಿಟಿಜಟಿ ಮಳೆಯಾಯಿತು. ಇದರಿಂದ ಶಿವಮೊಗ್ಗ ಜಿಲ್ಲಾದ್ಯಂತ ಥಂಡಿ ವಾತಾವರಣ ಉಂಟಾಗಿದೆ.
ಶಿವಮೊಗ್ಗ ನಗರ ಒಳಗೊಂಡಂತೆ ಹೊಸನಗರ, ಸಾಗರ, ಸೊರಬ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ನಿರಂತರ ಮಳೆಯಿಂದ ವಾತಾವರಣ ತಂಪಾಗಿದೆ. ಶಿವಮೊಗ್ಗ ನಗರದಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ಇದರಿಂದ ಜನರ ಸಂಚಾರ ವಿರಳವಾಗಿತ್ತು. ಹವಾಮಾನ ಇಲಾಖೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಮಲೆನಾಡಿಲ್ಲಿ ಜೋರಾದ ಗಾಳಿಯೊಂದಿಗೆ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಒಳಹರಿವು ಹೆಚ್ಚಳ:
ಲಿಂಗನಮಕ್ಕಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳವಾಗಿದ್ದು, 10,991 ಕ್ಯೂಸೆಕ್‌ಗೆ ಏರಿಕೆ ಕಂಡಿದೆ. 1,819 ಅಡಿ ಸಾಮರ್ಥ್ಯದ ಜಲಾಶಯದ ನೀರಿನ ಮಟ್ಟ ಭಾನುವಾರ ಬೆಳಗ್ಗೆವರೆಗೆ 1,763.75 ಅಡಿಗೆ ಏರಿಕೆ ಆಗಿದ್ದು, 5,857 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
588.24 ಮೀಟರ್ ಸಾಮರ್ಥ್ಯದ ತುಂಗಾ ಜಲಾಶಯ ಭರ್ತಿಯಾಗಿದ್ದು 8,972 ಕ್ಯೂಸೆಕ್ ನೀರಿನ ಒಳಹರಿವಿದ್ದು, ಇಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. 186 ಅಡಿ ಸಾಮರ್ಥ್ಯದ ಭದ್ರಾ ಜಲಾಶಯಕ್ಕೂ 1,275 ಕ್ಯೂಸೆಕ್ ನೀರಿನ ಒಳಹರಿವಿದೆ. ಭಾನುವಾರ 144.3 ಅಡಿಗೆ ಏರಿಕೆಯಾಗಿದ್ದು, 569 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.