ಮುಂಗಾರು ಪೂರ್ವಸಿದ್ಧತೆ ಮರೆತ ಸಿಎಂ: ಆರ್.ಅಶೋಕ್ ವಾಗ್ದಾಳಿ | Heavy rain damage

R Ashok
Published on

ಬೆಂಗಳೂರು: ಈ ಬಾರಿ ಮುಂಗಾರು ಪೂರ್ವ ಮಳೆ ಭರಪೂರ ಸುರಿದಿದೆ. ಅವಧಿಗೆ ಮುನ್ನವೇ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಸಿಎಂ ಸಿದ್ದರಾಮಯ್ಯ ಪೂರ್ವಭಾವಿ ಸಭೆ ಕೂಡ ನಡೆಸಿಲ್ಲವೆಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದರು.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಭಾರಿ ಮಳೆಯ ಕಾರಣ ಬೆಂಗಳೂರು ಸೇರಿ ಅನೇಕ ಜಿಲ್ಲೆಗಳಲ್ಲಿ ಹಾನಿಯಾಗಿದೆ. ಮುಂಗಾರು ಎದುರಿಸುವ ಸಂಬಂಧ ಸಭೆ ನಡೆಸಿ ಅಗತ್ಯ ಸಿದ್ಧತೆ ಮಾಡಿಕೊಂಡಿರುವುದನ್ನು ಸಿದ್ದರಾಮಯ್ಯ ಪರಿಶೀಲಿಸಿಲ್ಲ.

ಸಿಎಂ ಹಾದಿಯಲ್ಲಿ ಸಾಗಿರುವ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜವಾಬ್ದಾರಿ ನಿರ್ಲಕ್ಷಿಸಿದ್ದು, ಹಾನಿ ಬಾಧಿತ ಪ್ರದೇಶಗಳಿಗೆ ಭೇಟಿಯನ್ನು ಮರೆತು ಬಿಟ್ಟಿದ್ದಾರೆ. ನೊಂದ ಜನರ ಅಹವಾಲು ಕೇಳುವ ಬದಲು ಮೋಜು-ಮಸ್ತಿಯಲ್ಲಿ ಕಾಂಗ್ರೆಸ್‌ನವರು ಮುಳುಗಿದ್ದಾರೆ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಸಕಲೇಶಪುರಕ್ಕೆ ಭೇಟಿ ನಾಳೆ

ಸಕಲೇಶಪುರ ಮಳೆ ಹಾನಿ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸುವೆ. ಸರ್ಕಾರಕ್ಕೆ ಮಾನ-ಮರ್ಯಾದೆಯಿದ್ದರೆ ಕೂಡಲೇ ಅಧಿಕಾರಿಗಳ ಸಭೆ ಕರೆದು, ತ್ವರಿತವಾಗಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ಮಹಾನಗರದಲ್ಲಿ 400 ಹಾನಿ ಸ್ಥಳಗಳನ್ನು ಗುರುತಿಸಲಾಗಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಹಾನಿ ಪ್ರದೇಶಗಳು ಏರಿಕೆಯಾಗಿವೆ. ಸಿಎಂ, ಡಿಸಿಎಂ ಬೆಂಗಳೂರಿನಲ್ಲಿ ಒಂದು ರೌಂಡ್ ಹೋಗಿ ಬಂದು ಮನೆಯಲ್ಲಿ ಮಲಗಿಕೊಂಡರು.

ಮಳೆ ಹಾನಿ ಪ್ರದೇಶಗಳಲ್ಲಿ ತುರ್ತು ಪರಿಹಾರ ಕೈಗೊಳ್ಳಲು ಬಿಡುಗಡೆ ಮಾಡಿದ ಹಣವೆಷ್ಟು ? ಎಂದು ಬಹಿರಂಗಪಡಿಸಬೇಕು. ತೋರಿಕೆಯ ಕಾಳಜಿ ಪ್ರದರ್ಶಿಸಿ, ಮೋಜು-ಮಸ್ತಿಯಲ್ಲಿ ಮುಳುಗಿದರೆ ಜನರ ಕಷ್ಟ ನೀಗುವುದಿಲ್ಲ ಎಂದು ಕುಟುಕಿದರು.

ತೆರಿಗೆ ಹೆಚ್ಚಳಕ್ಕೆ ಆಸಕ್ತಿ

ಬೆಂಗಳೂರು ಅಭಿವೃದ್ಧಿ, ಬಾಧಿತ ಪ್ರದೇಶದ ಕಷ್ಟ-ನಷ್ಟ ಇತ್ಯರ್ಥಕ್ಕಿಂತ ಸಾಲ ಮಾಡಲು, ತೆರಿಗೆ ಹೆಚ್ಚಿಸಲು ಕಾಂಗ್ರೆಸ್ ಸರ್ಕಾರಕ್ಕೆ ಆಸಕ್ತಿಯಿದೆ. ಕಸ ವಿಲೇವಾರಿ ಬಿಬಿಎಂಪಿ ಹೊಣೆಯಾದರೂ ಕಸದಲ್ಲೂ ಲಂಚದ ರಸ ಮಾಡಿಕೊಳ್ಳಲು ಹೊರಟಿದೆ ಎಂದು ಆರೋಪಿಸಿದರು.

ಪ್ರತಿ ಮನೆಗೆ ಕಸದ ಸೆಸ್ 120 ರೂ.ನಿಂದ 720 ರೂ., ಅಪಾರ್ಟ್‌ಮೆಂಟ್‌ಗಳಿಗೆ 1800 ರೂ. ನಿಂದ 18,000 ರೂ, ಮಾಲ್‌ಗಳಿಗೆ ಸೇವಾ ಶುಲ್ಕ 3,600 ರಿಂದ 52,500 ರೂ. ಖಾಲಿ ಸೈಟ್‌ಗೆ 600 ರಿಂದ 5400 ರೂ., ಖಾಲಿ ಜಮೀನಿಗೆ 3,600 ರಿಂದ 67 ಸಾವಿರ ರೂ. ಸೇವಾ ಶುಲ್ಕ ವಿಧಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಅಪಾಯಕ್ಕೆ ಆಹ್ವಾನಿಸುತ್ತಿವೆ. ಆಸ್ಪತ್ರೆಗಳು, ಮಾಲ್‌ಗಳಲ್ಲಿ ಬಿಬಿಎಂಪಿಯಿಂದ ಕಸ ಸಂಗ್ರಹಿಸುವವರು ಇಲ್ಲದಿದ್ದರೂ ಸೆಸ್ ಹಾಕುತ್ತಿದ್ದಾರೆ ಎಂದು ಆರ್.ಅಶೋಕ್ ಆಕ್ಷೇಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net