ಶಿವಮೊಗ್ಗ ಜಿಲ್ಲೆಯ ಜನರಿಗೆ ಮುದ ನೀಡಿದ ಮಾನ್ಸೂನ್

krishi
ಭತ್ತದ ನಾಟಿ ಕಾರ್ಯಕ್ಕೆ ಸಜ್ಜಾಗಿರುವ ರೈತ ಮಹಿಳೆಯರು
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಜುಲೈ ಅಂತ್ಯಕ್ಕೆ ಸಂಪೂರ್ಣ ಆಶಾದಾಯಕ ಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಎಲ್ಲರಿಗೂ ಮುದ ನೀಡಿದೆ. ವರುಣ ಈಗ ತಾತ್ಕಾಲಿಕ ಬ್ರೇಕ್ ನೀಡಿರುವುದರಿಂದ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಮುಖ್ಯವಾಗಿ ಈ ಬಾರಿ ಮಳೆ ಹೆಚ್ಚಿನ ಅನಾಹುತಗಳನ್ನು ಸೃಷ್ಟಿ ಮಾಡದೇ ಇರುವುದು ಜಿಲ್ಲಾಡಳಿತ ಹಾಗೂ ಜನರಿಗೆ ಸಮಾಧಾನ ಮೂಡಿಸಿದೆ.

ಈ ಹಿಂದೆ ತಿಂಗಳಿಡೀ ಸುರಿಯಬೇಕಾದ ಮಳೆ ಒಂದೆರಡು ವಾರದಲ್ಲೇ ಧರೆಗಿಳಿದು ಕೃಷಿ ಭೂಮಿ, ವಾಸದ ಮನೆ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟುಮಾಡಿದ ಅನೇಕ ನಿದರ್ಶನಗಳಿವೆ. ಉಕ್ಕಿ ಹರಿದ ನದಿಗಳು ರೈತರ ಭೂಮಿಯನ್ನೇ ಆಪೋಷನ ತೆಗೆದುಕೊಂಡು ನಾಲ್ಕಾರು ವರ್ಷ ಯಾವುದೇ ಬೆಳೆ ಬೆಳೆಯದ ಸ್ಥಿತಿ ನಿರ್ಮಾಣ ಮಾಡಿದ ಉದಾಹರಣೆಗಳೂ ಇವೆ. ಆದರೆ ಜುಲೈ ಅಂತಕ್ಕೆ ಜಿಲ್ಲೆಯ ಸರಾಸರಿ ವಾಡಿಕೆ ಮಳೆಯ ಪ್ರಮಾಣ 603.54 ಮಿ.ಮೀ. ಆಗಿದ್ದರೆ ಸುರಿದಿದ್ದು 577.37 ಮಿ.ಮೀ. ವಾಡಿಕೆಗಿಂತ ಸ್ವಲ್ಪ ಕಡಿಮೆ ಮೆಳೆಯಾಗಿದ್ದರೂ ಹೆಚ್ಚಿನ ನಷ್ಟ ಸಂಭವಿಸಿಲ್ಲ.

ಇದಕ್ಕೆಲ್ಲ ಹೋಲಿಕೆ ಮಾಡಿದರೆ ಇದುವರೆಗಿನ ಮುಂಗಾರು ಸಂಪೂರ್ಣ ಜನಸ್ನೇಹಿ. ಬೆರಳೆಣಿಕೆಯಷ್ಟು ಮನೆ, ಕೊಟ್ಟಿಗೆಗಳ ಗೋಡೆ, ಮೇಲ್ಛಾವಣಿ ಕುಸಿದಿದ್ದನ್ನು ಬಿಟ್ಟರೆ ವರುಣ ಹೆಚ್ಚಿನ ಅಪಾಯವನ್ನು ತಂದೊಡ್ಡಲಿಲ್ಲ. ಸದ್ದಿಲ್ಲದೆ ಜಲಾಶಯಗಳು, ಕರೆಕಟ್ಟೆಗಳು ಭರ್ತಿಯಾಗಿವೆ.

ಇನ್ನೇನು ಮಳೆಯಿಂದ ಕೊಳೆ ರೋಗದ ಭೀತಿ ಎದುರಾಗುತ್ತದೆ ಈ ವರ್ಷದ ಫಸಲು ಕೈಸೇರುವುದಿಲ್ಲ ಎಂದು ಅಡಕೆ ಬೆಳೆಗಾರರು ಆತಂಕದಲ್ಲಿರುವಾಗಲೇ ಮಳೆರಾಯ ಕೊಂಚ ಬಿಡುವು ನೀಡಿದ್ದಾನೆ. ಇದು ಅಡಕೆ ಬೆಳೆಗಾರರ ವಲಯದಲ್ಲಿ ಹರ್ಷ ಮೂಡಿಸಿದೆ. ಅಡಕೆ ಹಾಗೂ ಶುಂಠಿಗೆ ಕೊಳೆ ರೋಗ ನಿಯಂತ್ರಕ ಸಿಂಪರಣೆಗೆ ರೈತರು ಸಜ್ಜಾಗುತ್ತಿದ್ದಾರೆ. ಇನ್ನೊಂದೆಡೆ ಭತ್ತದ ನಾಟಿ ಕಾರ್ಯವೂ ಚುರುಕುಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net