ನಿಗಾ ಇಡಲಿಕ್ಕೆ ಮಾಡಿಕೊಂಡ ವ್ಯವಸ್ಥೆ ನಿಗಾವಳಿ

Georgia (1)
Published on
‘ಸುತ್ತಮುತ್ತಲು ಕಪ್ಪು ಕತ್ತಲೆಯು ಮುತ್ತಿರಲು... ವೀರ ಕಾವಲುಗಾರ ಭೋಜನಕೆ ನಡೆದಿರಲು... ಸಿಹಿನೀರ ತರಲೆಂದು ಅವನ ಸತಿ ಬಂದಿರಲು... ಕಳ್ಳಗಂಡಿಯ ಹಿಂದೆ ಪಿಸುಮಾತ ಕೇಳಿದಳು... ಆಲಿಸಿದಳು ಇಣುಕಿದಳು ವೈರಿಪಡೆ ಕೋಟೆಯತ್ತ ಬರುವುದನ್ನು ಕಂಡಳು...’ ನಾಗರಹಾವು ಚಿತ್ರದ ಪ್ರಸಿದ್ಧ ಹಾಡಿನ ಸಾಲುಗಳನ್ನೊಮ್ಮೆ ನೆನಪಿಸಿಕೊಳ್ಳಿ. ಕನ್ನಡನಾಡಿನ ವೀರರಮಣಿ, ಗಂಡುಭೂಮಿಯ ವೀರನಾರಿ ಎಂದು ಖ್ಯಾತಿವೆತ್ತ ಒನಕೆ ಓಬವ್ವ ಆ ಸನ್ನಿವೇಶದಲ್ಲಿ ಏನು ಮಾಡಿದ್ದಳು? ಒಂದು ‘ಸಜೀವ ಸಿಸಿಟಿವಿ’ಯೇ ಆಗಿ ಕೋಟೆಯನ್ನು ಅಪಾಯದಿಂದ ರಕ್ಷಿಸಿದ್ದಳು! ನಿಜವಾಗಿಯಾದರೆ ಸಿಸಿಟಿವಿಯಂತೆ ಆಗಂತುಕರನ್ನು ಬರೀ ಕಂಡದ್ದಷ್ಟೇ ಅಲ್ಲ, ಆ ಹಾಡಿನಲ್ಲಿ ಬಣ್ಣಿಸಿರುವಂತೆ ‘ತೆವಳುತ ಒಳಗೆ ಬರುತಿರೆ ವೈರಿ... ಒನಕೆಯ ಬೀಸಿ ಕೊಂದಳು ನಾರಿ... ಸತ್ತವರನ್ನು ಎಳೆದುಹಾಕುತ... ಮತ್ತೆ ನಿಂತಳು ಹಲ್ಲು ಮಸೆಯುತ... ವೈರಿರುಂಡ ಚಂಡಾಡಿದಳು... ರಕುತದ ಕೋಡಿ ಹರಿಸಿದಳು...’ ಆದ್ದರಿಂದ, ಚಿತ್ರದುರ್ಗದ ಕೋಟೆಗೆ ಒನಕೆ ಓಬವ್ವಳೇ ಮೊತ್ತಮೊದಲ ಶಕ್ತಿಯುತ ಸಿಸಿಟಿವಿ ಎಂದು ನಾವು ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಸ್ವಲ್ಪ ಕಾವ್ಯಾತ್ಮಕ ಹೋಲಿಕೆ ಎನಿಸಿದರೂ ಒಪ್ಪತಕ್ಕ ಮಾತೇ.

ಓಬವ್ವಳದು ಸುಮಾರು 300 ವರ್ಷಗಳಷ್ಟು ಹಳೆಯ ಇತಿಹಾಸವಾದರೆ ಈಗ ಸರ್ವಾಂತರ್ಯಾಮಿ ಆಗಿರುವ ಆಧುನಿಕ ಸಿಸಿಟಿವಿಗೂ ಹತ್ತಿರಹತ್ತಿರ 100 ವರ್ಷಗಳ ಇತಿಹಾಸವಿದೆ. ಆಗಿನ ಸೊವಿಯೆತ್ ಒಕ್ಕೂಟದ ಲಿಯೊನ್ ಥೆರಮಿನ್ ಎಂಬ ಮೇಧಾವಿ ತಂತ್ರಜ್ಞ 1927ರಲ್ಲಿ ಮೊತ್ತಮೊದಲ ಸಿಸಿಟಿವಿ ವ್ಯವಸ್ಥೆಯ ಆವಿಷ್ಕಾರ ಮಾಡಿದವನು. ಆತನ ಉಪಕರಣವನ್ನು ಸ್ಟಾಲಿನ್ ಸರ್ಕಾರವು ಮಾಸ್ಕೊ ಕ್ರೆಮ್ಲಿನ್ ಪ್ರಾಂಗಣದಲ್ಲಿ ಆಗಂತುಕರ ಚಲನವಲನ ನಿಯಂತ್ರಿಸಲಿಕ್ಕೆ ಬಳಸಿತ್ತಂತೆ. ಮುಂದೆ 1942ರಲ್ಲಿ ಎರಡನೆಯ ಪ್ರಪಂಚ ಯುದ್ಧದ ವೇಳೆ ಜರ್ಮನಿಯ ವಾಲ್ಟರ್ ಬ್ರೂಚ್ ಎಂಬೊಬ್ಬ ಇಂಜಿನಿಯರನು ಸಿಸಿಟಿವಿ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದನು. ಅದನ್ನು ಹಿಟ್ಲರನ ನಾಝಿ ಸೇನೆಯು ದೂರಗಾಮಿ ಕ್ಷಿಪಣಿಗಳ ಪರೀಕ್ಷಾರ್ಥ ಉಡ್ಡಯನ ವೀಕ್ಷಣೆಗೆ ಬಳಸಿತು. ಅಮೆರಿಕದಲ್ಲಿ 1950ರಿಂದ ಪೌರಾಡಳಿತದಲ್ಲಿ ಮತ್ತು ಖಾಸಗಿಯಾಗಿಯೂ ಬಳಕೆ ಆರಂಭವಾದ ಮೇಲೆ ಈಗ ಸಿಸಿಟಿವಿ ವಿಶ್ವವ್ಯಾಪಿಯಾಗಿದೆ. ಅಪರಾಧಗಳ ತನಿಖೆಯಲ್ಲಿ ಮತ್ತು ತಡೆಗಟ್ಟುವುದರಲ್ಲೂ ತುಂಬ ಉಪಯುಕ್ತವಾಗಿದೆ.

CCTVಎನ್ನುವುದರ ಪೂರ್ಣರೂಪ Closed Circuit Television. ಇದಕ್ಕೆ ಸಂವಾದಿಯಾದ ಕನ್ನಡ ಪದ ಕಂಡುಕೊಳ್ಳುವುದು ನಿಜಕ್ಕೂ ಸವಾಲೇ. ಇಂತಹ ಸಂದರ್ಭಗಳಲ್ಲಿ ಬರುವ ಮೂಲಭೂತ ಪ್ರಶ್ನೆಯೇನೆಂದರೆ- ಇಂಗ್ಲಿಷ್​ನ Bus ಅನ್ನು ಕನ್ನಡದಲ್ಲಿ ಬಸ್ಸು ಎಂದರಾಗದೇ, ‘ಧೂಮ್ರಶಕಟ’ ಬೇಕೇ?Railway signal  ಅನ್ನು ಕನ್ನಡದಲ್ಲೂ ರೈಲ್ವೇ ಸಿಗ್ನಲ್ ಎಂದರೆ ಸಾಲದೇ, ‘ಉಗಿಬಂಡಿ ಆಗಮನ ನಿರ್ಗಮನ ಸೂಚಕ ಸಂಕೇತ’ ಅಂತೆಲ್ಲ ರೈಲಿನಷ್ಟೇ ಉದ್ದದ ಪದಬಂಡಿ ಬೇಕೇ? ಅಲ್ಲದೇ ಈಗಿನ್ನು ರೈಲು-ಬಸ್ಸುಗಳೆಲ್ಲ ವಿದ್ಯುತ್ ಚಾಲಿತ ಆಗುವುದರಿಂದ ಧೂಮ್ರವಾಗಲೀ ಉಗಿಯಾಗಲೀ ಇರುವುದಿಲ್ಲವಲ್ಲ! ಹೀಗಿದ್ದರೂ ಪದ ಕಟ್ಟುವ ಚಟುವಟಿಕೆಯಾಗಿ CCTVಯನ್ನು ಬೇಕಂತಲೇ ಸೇರಿಸಿದ್ದಾಗಿತ್ತು. ಏಕೆಂದರೆ ಈ ಅಂಕಣದ ಓದುಗರ ಆಲೋಚನಾವಿಧಾನ, ಕ್ರಿಯಾಶೀಲತೆ ನಿಜಕ್ಕೂ ಬೆರಗು ಮೂಡಿಸುವಂಥದು. ನಿರೀಕ್ಷಿಸಿದಂತೆ ಈ ಬಾರಿಯೂ ಓದುಗರಿಂದ ವಿಭಿನ್ನ ಪ್ರಯತ್ನಗಳು ನಡೆದಿವೆ. ಪದಶಃ ಅನುವಾದಿಸಿ ‘ಸಂವೃತ ಸಂಚಾರಮಾರ್ಗದ ದೂರದರ್ಶನ’ ಎಂದು ಕೆಲವರು ಸೂಚಿಸಿದ್ದಾರೆ. ‘ಆವರ್ತ ವಲಯ ವೀಕ್ಷಕ’, ‘ಸಮೀಪ ಪರಿಧಿ ದರ್ಶಕ’, ‘ಸೀಮಿತ ವ್ಯಾಪ್ತಿಯ ಚಿತ್ರದರ್ಶಕ’, ‘ಮುಚ್ಚಿದ ಪರಿಧಿ ದೂರದರ್ಶನ’, ‘ನಿಗಾವಹಿಸುವ ದೃಶ್ಯಗ್ರಾಹಕ ಸಾಧನ’, ‘ಪತ್ತೇದಾರಿ ಕಿರುತೆರೆ’, ‘ಚಲನವಲನ ಛಾಯಾಚಿತ್ರ ಸಂಗ್ರಾಹಕ’ ಇನ್ನು ಕೆಲವು. ಸಿಸಿಟಿವಿಯೆಂದರೆ ವಿಶೇಷವಾದೊಂದು ಕಣ್ಣು ಇದ್ದಂತೆ ಎಂಬ ತರ್ಕದಿಂದ ‘ಕಾವಲು ಕಣ್ಣು’, ‘ಯಾಂತ್ರಿಕ ಕಣ್ಣು’, ‘ಭದ್ರತಾ ಕಣ್ಣು’, ‘ಮರೆಗಣ್ಣು’, ‘ನಿಗಾನೇತ್ರ’, ‘ಲಕ್ಷ ್ಯೇತ್ರ ಗುಪ್ತಚಕ್ಷು’, ‘ಗುಪ್ತಾಕ್ಷಿ’, ‘ಗೂಢನಯನ’ ಎಂಬ ಪ್ರವೇಶಿಕೆಗಳೂ ಬಂದಿವೆ. ‘ಕಣ್ಗಾವಲು’ ಎಂದು, ಅದಕ್ಕೆ ಗೂಢ, ಗೌಪ್ಯ, ಯಾಂತ್ರಿಕ, ಸೂಕ್ಷ್ಮಗ್ರಾಹಿ, ದೂರದರ್ಶಿ, ಗುಪ್ತಚಿತ್ರ ಮುಂತಾದ ವಿಶೇಷಣಗಳನ್ನು ಸೇರಿಸಿದವು ಕೂಡ ಇವೆ. ಇಷ್ಟೊಂದು ವೈವಿಧ್ಯಮಯ ಉತ್ತರಗಳು ಬಂದಿರುವುದು ಬಹುಶಃ ಇದೇ ಮೊದಲು. ಸ್ಥಳಮಿತಿಯಿಂದಾಗಿ ಹೆಸರುಗಳನ್ನೆಲ್ಲ ಸೇರಿಸಿಕೊಳ್ಳಲಾಗದಷ್ಟು!

ಆದರೂ ಪ್ರಾತಿನಿಧಿಕವಾಗಿ ಮೂರು ಪ್ರವೇಶಿಕೆಗಳನ್ನು ವಿಶೇಷವಾಗಿ ಉಲ್ಲೇಖಿಸುವುದಾರೆ- ‘ಸೀಮಿತ ಸೀಮೆಯ ಕಣ್ಗಾವಲಿನ ವಿಲೋಚನ’ ಮತ್ತು ಇದರ ಹ್ರಸ್ವ ರೂಪ ‘ಸೀಸೀಕವಿ’ ಇಂಗ್ಲಿಷ್​ನದಕ್ಕೆ ಸರಿಸಾಟಿಯಾಗುತ್ತದೆ ಎಂದವರು ಮೈಸೂರಿನ ಗಿರೀಶ್ ಕೆ.ಎಸ್; ‘ನಿಕಟ ನಿಗಾವಣೆ ದರ್ಶಕ’ (ನಿನಿದ) ಎಂದು ಸಿಸಿಟಿವಿಯ ಕಾರ್ಯವಿಧಾನವನ್ನು ಸಮರ್ಥವಾಗಿ ಪ್ರತಿಬಿಂಬಿಸಿದವರು ಬೆಂಗಳೂರಿನ ಎ.ವಿ.ಗಿರೀಶ್; ಇವೆರಡೂ ಬಳಕೆಗೆ ಅಷ್ಟೇನೂ ಒದಗಿಬರಲಿಕ್ಕಿಲ್ಲ. ಆದರೆ ಇದರಲ್ಲಿನ ಕಣ್ಗಾವಲು ಮತ್ತು ನಿಗಾವಣೆ ಎಂಬ ಭಾಗಗಳು ಗಮನಾರ್ಹ. ಇಂಗ್ಲಿಷ್​ನಲ್ಲೂ ಈಗ CCTVಎನ್ನುವ ಬದಲಿಗೆSurveillance Camera ಎಂಬ ಬಳಕೆಯೇ ಹೆಚ್ಚು. Surveillance ಎಂದರೇನು? ಕಣ್ಗಾವಲು ಅಥವಾ ನಿಗಾವಣೆ. ಸಿಸಿಟಿವಿ ಇರುವುದೇ ನಿಗಾ ಇಡಲಿಕ್ಕೆ. ನಿಗಾ ಎಂದರೆ ಲಕ್ಷ ್ಯ ಗಮನ, ಹೊಣೆ, ಜವಾಬ್ದಾರಿ ಇತ್ಯಾದಿ ಅರ್ಥಗಳು. ಕನ್ನಡದ್ದೇ ಎಂಬಂತಾಗಿರುವ, ಆಡುಮಾತಿನಲ್ಲೂ ಆಧುನಿಕ ಸಾಹಿತ್ಯದಲ್ಲೂ ವ್ಯಾಪಕವಾಗಿ ಬಳಕೆಯಾಗುವ ನಿಗಾ ಪದ ಕನ್ನಡಕ್ಕೆ ಮರಾಠಿಯ ಮೂಲಕ ಪಾರ್ಸೀ ಭಾಷೆಯ ‘ನಿಗಾಹ್’ನಿಂದ ಬಂದದ್ದು. ನಿಗಾ ಇಡಲಿಕ್ಕೆ ಮಾಡಿಕೊಂಡ ವ್ಯವಸ್ಥೆಯನ್ನು ಸರಳವಾಗಿ ‘ನಿಗಾವಳಿ’ ಎನ್ನಬಹುದೆಂದು ಸೂಚಿಸಿದ್ದಾರೆ ಗಿರಿಜಾ ಲಕ್ಷ್ಮೀಕಾಂತ್. ಜಾಣ ಆಯ್ಕೆಯಿದು.

ಕಳೆದಸಲ ಕೇಳಿದ್ದ ಎರಡನೆಯ ಪದ Flash Cards. ಮಕ್ಕಳಿಗೆ ಅಕ್ಷರ ಪರಿಚಯ, ಚಿತ್ರ ಜೋಡಣೆ ಮೂಲಕ ಕಲಿಕೆ, ದೊಡ್ಡವರಿಗೂ ಕಂಠಸ್ಥೀಕರಣಕ್ಕೆ ಅನುಕೂಲವಾಗುವಂತೆ

ಚಿಕ್ಕ ಸುಳಿವುಗಳು ಹೀಗೆ ಒಟ್ಟಾರೆಯಾಗಿ ಕಲಿಕೆಯಲ್ಲಿ ಬಳಕೆಯಾಗುವ ಸಾಧನ. ಪಾಶ್ಚಾತ್ಯ ಶಿಕ್ಷಣವಿಧಾನದಿಂದ ಬಂದಿರುವಂಥದು, ಈಗಿನ ಕಲಿ-ನಲಿ ಪದ್ಧತಿಯಲ್ಲಿ ಪರಿಣಾಮಕಾರಿಯಾಗಿ ಉಪಯೋಗ ಆಗುತ್ತಿರುವಂಥದು. ಓದುಗರೊಬ್ಬರು ಮಾರ್ವಿುಕವಾಗಿ ಹೀಗೆ ಬರೆದಿದ್ದಾರೆ: ‘ಚಿಕ್ಕವರಿದ್ದಾಗ ಶಾಲೆಯಲ್ಲಿ ನಾಗರಬೆತ್ತವೇ ನಮ್ಮ ಫ್ಲಾಷ್ ಕಾರ್ಡ್. ಮನೆಯಲ್ಲಿ ಅಮ್ಮನ ಹಿಡಿಸೂಡಿ(ಪೊರಕೆ) ಕಡ್ಡಿ ಅಥವಾ ಹುಣಿಸೆಮರದ ಚಾಟಿಯೇ ಫ್ಲಾಷ್ ಕಾರ್ಡ್. ಅವುಗಳನ್ನು ಕಂಡಾಗಲೇ ನಮಗೆ ಥಟ್ ಅಂತ ಎಲ್ಲ ನೆನಪಿಗೆ ಬರೋದು!’ ನಿಜ ಅಲ್ಲವೇ? Flash cards ಎನ್ನುವುದಕ್ಕೆ ‘ಮಿಂಚುಪಟ್ಟಿ’ ಎಂಬ ಪದ ಈಗಾಗಲೇ ಬಳಕೆಯಲ್ಲಿದೆಯೆಂದು ಸೂಚಿಸಿದ್ದಾರೆ ಶಾರದಾ ರವೀಂದ್ರ, ವನಜಾಕ್ಷಿ ಮತ್ತೂರು, ಶಶಿರೇಖಾ ಪರಾಂಜಪೆ, ನಾರಾಯಣ ಭಟ್ ಕಂಚನಳ್ಳಿ, ಜಿ.ಕೆ.ಶಶಿಕಲಾ, ಶೋಭಾ ಎಸ್.ಕೆ, ಭಾರ್ಗವ ಎಚ್.ಜಿ, ಗೋಪಾಲ ಹೆಗಡೆ, ದಾವಲಸಾಬ ಎನ್.ಡಿ, ಸುರೇಂದ್ರ ಪೈ ಮುಂತಾದವರು. ಇವರಲ್ಲಿ ಹೆಚ್ಚಿನವರು ಶಿಕ್ಷಕವೃತ್ತಿಯಲ್ಲಿರುವವರು ಮತ್ತು ತಮ್ಮ ಕೆಲಸದ ಭಾಗವಾಗಿ ಮಿಂಚುಪಟ್ಟಿ ಬಳಸುವವರೇ ಇರಬಹುದು. ಹೀಗೆ ಕನ್ನಡಪದ ಈಗಾಗಲೇ ಬಳಕೆಯಲ್ಲಿದೆಯಾದರೆ ಒಳ್ಳೆಯದೇ. ಓದುಗರಿಂದ ಬಂದ ಹೊಸ ಆಯ್ಕೆಗಳು: ‘ತೋರೆಲೆ’ (ಗಿರೀಶ ಫಡ್ಕೆ, ಬಿ.ಕೆ.ಶಿವಕುಮಾರ್, ಮೀನಾಕ್ಷಿ ಟಕ್ಕಳಕಿ, ಎನ್.ಎಚ್.ದೇಶಪಾಂಡೆ, ರಶ್ಮಿ ಉಳಿಯಾರು, ಭವಾನಿ ಜೋಶಿ, ಎಸ್.ಕೆ.ಶಿವಪ್ಪ, ಷಡಕ್ಷರಮುನಿ ಸ್ವಾಮೀಜಿ, ಭ.ನಿಂ.ಗೋಪಿನಾಥ್, ಮನೋನ್ಮಣಿ ಕೆ.ವಿ, ಸಂಜೀವ ಜೋಶಿ, ಕೆ.ವಿ.ಶ್ರೀನಿವಾಸ ಮೂರ್ತಿ, ವಿಲಾಸಿನಿ ಭಟ್); ‘ಮಿನುಗೆಲೆ’ (ನಿತ್ಯಾನಂದ ಬ್ರಹ್ಮಾವರ), ‘ಮಿಂಚಿಕೆ’ (ಚಂದ್ರಿಕಾ ಮತ್ತಿಹಳ್ಳಿ), ‘ಮಿಂಚೀಟಿ’ (ಸಣ್ಣಪ್ಪ ನಾಯಕ್), ‘ಹೊಳಹುಪತ್ರ’ (ಸತ್ಯ ಹರಿಹಳ್ಳಿ); ‘ಬೋಧಪಟ’ (ಡಾ.ಜಿ.ಎಸ್.ವೇಣುಗೋಪಾಲ್), ‘ದರ್ಶಕ ಪತ್ರ’ (ಕೃಷ್ಣ ಬರ್ವೆ), ‘ಸ್ಪುರಣ ಪತ್ರ’ (ದಿನೇಶ ಭಟ್) ಇವು ಕೂಡ ಚೆನ್ನಾಗಿವೆ. ಗಂಜೀಫಾ ಇದ್ದಂತೆ ‘ಮನನೀಫಾ’ ಆಗಬಹುದೆಂಬ ಗಿರೀಶ್ ಎ.ವಿ ಅವರ ಸಲಹೆಯೂ ಚೆನ್ನಾಗಿದೆ. ನಿಮಗೆ ಗೊತ್ತಿರಬಹುದಾದಂತೆ ಗಂಜೀಫಾ ಪರ್ಷಿಯನ್ ಮೂಲದ ಆಟ. ಪಾರ್ಸೀ ಭಾಷೆಯಲ್ಲಿ ಗಂಜ್ ಎಂದರೆ ನಿಧಿ, ಈಫಾ ಎಂದರೆ ಆಟದ ಎಲೆ/ಕಾರ್ಡ್. ಅದೇರೀತಿ ಮನನಕ್ಕೆ

ಬಳಸಬಹುದಾದ ಎಲೆ/ಕಾರ್ಡ್ ಮನನೀಫಾ!

ಕೊನೆಯದಾಗಿ Seat Belt.. ಇದಕ್ಕೆ ಬಹುಮತದ ಆಯ್ಕೆ ‘ಆಸನ ಪಟ್ಟಿ’ (ಅಂಜನಾ ಗುರುರಾಜ್, ಶೈಲಾ ಬಾಲಕೃಷ್ಣ, ಶೋಭಾ ಕುಮಾರಸ್ವಾಮಿ, ಧೀರೇಂದ್ರ ಬೀಳಗಿ, ಗೋಪಾಲ ಜೋಶಿ, ನಾರಾಯಣ ಶರ್ಮ, ಡಾ.ಟಿ.ಸುರೇಂದ್ರ ಭಟ್, ನಾಗರಾಜ ಶರ್ಮ, ಗುರುರಾಜ ಇಲ್ಲಾಳ, ಡಾ.ವೇದಾ. ವಿ. ಪುರೋಹಿತ, ಶ್ರೀನಿವಾಸ ಎಸ್, ರಮ್ಯ ಸೋಮಶೇಖರ್, ಶ್ರೀದೇವಿ ಸುರೇಶ ಏಕಬೋಟೆ, ಅನಿತಾ ಭಟ್, ರೇವತಿ ಜೋಶಿ, ಚಿದಾನಂದ ಪಡದಾಳೆ, ಬಾಬು ಎಸ್.ಗೌಡ, ಶಿವರಂಜನ್ ಕೆ.ಆರ್, ಬಾಬು ತಳವಾರ, ಗುರನಗೌಡ ಪಾಟೀಲ, ಲಕ್ಷಿ ್ಮನಾರಾಯಣ ಕಾರಂತ, ಗಗನ ಶಿವಮೊಗ್ಗ, ಡಾ.ದಯಾನಂದ ಭಟ್ಟ, ಅನಸೂಯಾ ಜಗದೀಶ್, ವಸುಮತಿ ಮೈಸೂರು, ಎಸ್.ಎನ್.ಮಂಜುಳಾ, ಶ್ರೀಹರ್ಷ ಕೆ.ಎ, ನಾಗಮಣಿ ಎನ್.ಶಾಂಪೂರ್ ಮುಂತಾದವರು). ‘ಸುರಕ್ಷಾ ಪಟ್ಟಿ’ (ಮಧುರ ಸುಬ್ರಹ್ಮಣ್ಯ, ಜಯಲಕ್ಷ್ಮಿ ಭಟ್, ರತ್ನಾ ಹೆಗಡೆ, ಸ್ನೇಹಶ್ರೀ ಕೋಲ್ಹಟ್ಕರ್, ಮಂಜುನಾಥ ಹೆಗಡೆ, ದೇವರಾಜ ಗಾಂವ್ಕರ್, ಪ್ರಕಾಶ ಉಮರಾಣಿ, ವಾಸುದೇವ ಭಟ್, ನರಸಿಂಹಯ್ಯ ಬಾಳಿಲ, ವಿಜಯಲಕ್ಷಿ ್ಮ ಎಸ್, ಸಂಜಯ ಕುಲಕರ್ಣಿ, ಕೇಶವಚಂದ್ರ ಕೊಂಬ್ರಾಜೆ, ಹೆಮ್ಮಿಗೆ ಗೋಪಾಲಕೃಷ್ಣ ಮುಂತಾದವರು) ಸಹ ಯೋಗ್ಯವಾಗಿದೆ.

ಹೊಸದಾಗಿ ಕನ್ನಡ ಪದಗಳನ್ನು ಕಟ್ಟುವುದು ಒಂದು ಆಯಾಮವಾದರೆ ಅದಕ್ಕಿಂತಲೂ ಮುಖ್ಯವಾಗುವುದು ಅವುಗಳ ಬಳಕೆ ಆರಂಭಿಸುವುದು. ಅಂಕಣದ ನಿಯತ ಓದುಗ ಶಿವಶಂಕರ ಪ್ರಭು ಮುಂಡ್ಕೂರು ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಜನಪ್ರಿಯ ದಾಸರಪದಗಳನ್ನು ವಾರಕ್ಕೊಂದರಂತೆ ಎತ್ತಿಕೊಂಡು ಅದರ ಆಳವಾದ ಅರ್ಥ, ವ್ಯಾಖ್ಯಾನಗಳನ್ನು ಸರಳವಾಗಿ ಜನಸಾಮಾನ್ಯರಿಗೂ ತಿಳಿಯುವಂತೆ ಅಂತರಜಾಲದಲ್ಲಿ ಬರೆಯುತ್ತಾರೆ. ಇತ್ತೀಚಿನ ವ್ಯಾಖ್ಯಾನ ಪುರಂದರದಾಸರ ‘ಕಲ್ಲುಸಕ್ಕರೆ ಕೊಳ್ಳಿರೋ’ ಕೀರ್ತನೆಯ ಬಗೆಗೆ. ಅದರಲ್ಲಿ ‘ನಷ್ಟ ಬೀಳುವುದಿಲ್ಲ ನಾತ ಹುಟ್ಟುವುದಿಲ್ಲ...’ ಸಾಲನ್ನು ವಿಶ್ಲೇಷಿಸುತ್ತ ಹೀಗೆ ಬರೆದಿದ್ದಾರೆ: ‘ಕೃಷ್ಣನಾಮವೆಂಬ ಕಲ್ಲುಸಕ್ಕರೆಯ ಗುಣಮಟ್ಟ ಎಷ್ಟು ಸಮಯ ಹೋದರೂ ಹಾಳಾಗುವುದಿಲ್ಲ. ಅದಕ್ಕೆ ತೀರುತೇದಿ ಎಂಬುದಿಲ್ಲ. ಅದು ಕೊಳೆತು ನಾರುವಂತಹದ್ದಲ್ಲ. ಮೌಲ್ಯವೂ ಕಡಿಮೆಯಾಗುವುದಿಲ್ಲ...’ ಎಂದು. ಇಲ್ಲಿ ಗಮನಿಸಬೇಕಾದ್ದು Expiry Date ಎನ್ನಲಿಕ್ಕೆ ಅವರು ಬಳಸಿದ ‘ತೀರುತೇದಿ’ ಪದ. ಇದು ಒಂದೆರಡು ಕಂತುಗಳ ಹಿಂದೆಯಷ್ಟೇ ಈ ಅಂಕಣದಲ್ಲಿ ಓದುಗರೊಬ್ಬರು ಕಟ್ಟಿಕೊಟ್ಟಿದ್ದ ಹೊಚ್ಚಹೊಸ ಪದ! ಈವತ್ತಿನ ಕಂತನ್ನು ಮುಗಿಸುವ ಮುನ್ನ ಇನ್ನೊಂದು ವಿಚಾರ. ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂದ ಹುಯಿಲಗೋಳ ನಾರಾಯಣರಾಯರ ಜನ್ಮದಿನ ಇಂದು (ಅಕ್ಟೋಬರ್ 4). ಅವರು ಹೇಳಿರುವ ಸದಭಿಮಾನವು ನಾವೆಲ್ಲರೂ ಮಾತಿನಲ್ಲಿ, ಬರಹದಲ್ಲಿ ಅನಗತ್ಯವಾಗಿ ಆಂಗ್ಲ ಪದಗಳಿಗಿಂತ ಕನ್ನಡ ಪದಗಳನ್ನೇ ಬಳಸುವುದರಲ್ಲೂ ಇದೆ!

ಈ ವಾರದ ಮೂರು ಪದಗಳು:

1. Bullet Point : ಗುಂಡುಬಿಂದು ಎಂದರೆ ಸರಿಯಾದೀತೇ? ಭಾಷಣದ/ ಪ್ರಬಂಧದ ಮುಖ್ಯಾಂಶಗಳ ಪಟ್ಟಿಗೆ ಬೇರೆ ಪದಪುಂಜ ಇದೆಯೇ?

2. Gavel : ನ್ಯಾಯಾಧೀಶರು ಅಥವಾ ಸಭಾಧ್ಯಕ್ಷರು ಗಮನ ಸೆಳೆಯಲೆಂದು ಮೇಜಿಗೆ ಬಡಿಯುವ, ಸುತ್ತಿಗೆಯನ್ನು ಹೋಲುವ ವಸ್ತು. ಇದನ್ನು

ಕನ್ನಡದಲ್ಲಿ ಏನನ್ನೋಣ?

3. Twilight: ಸೂರ್ಯೋದಯದ ಮೊದಲು ಅಥವಾ ಸೂರ್ಯಾಸ್ತದ ಬಳಿಕದ ಬೆಳಕು. ಈ ಚೆಲುವಿಗೆ ಚೆಲುವಗನ್ನಡದ್ದೊಂದು ಪದ ಬೇಕು!

ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ ಆಪ್ ಸಂಖ್ಯೆ: +12404010945

(ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಮತ್ತು ಅಂಕಣ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net