ಸಂಪಾದಕೀಯ| ಹಣದ ದುರುಪಯೋಗ ಸಲ್ಲ

Covid
Published on

ಕರೊನಾ ವಿರುದ್ಧದ ಹೋರಾಟ ಎಂದರೆ ಸುಮ್ಮನೇ ಅಲ್ಲ. ಕಾಲಕಾಲಕ್ಕೆ ತಂತ್ರಗಳನ್ನು ಬದಲಿಸುತ್ತ, ಹೆಚ್ಚೆಚ್ಚು ಪರಿಣಾಮಕಾರಿಯಾಗಿಸುತ್ತ ಸಮಸ್ಯೆಗಳನ್ನು ನೀಗಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತಳೆದಿದೆ. ಕೋವಿಡ್​ ಚಿಕಿತ್ಸೆಗೆ ಬಳಸುವ ಔಷಧ ಮತ್ತು ಪರಿಕರಗಳ ಮೇಲಿನ ತೆರಿಗೆಯನ್ನು ಶೇಕಡ 12ರಿಂದ 5ಕ್ಕೆ ಇಳಿಸಿದ್ದು, ಖಂಡಿತವಾಗಿಯೂ ರೋಗಿಗಳಿಗೆ ಸಮಾಧಾನ ನೀಡುವ ಸಂಗತಿ. ರೆಮ್​ಡೆಸಿವಿರ್​, ವೆಂಟಿಲೇಟರ್​, ಆಮ್ಲಜನಕ ಕಾನ್ಸನ್​ಟ್ರೇಟರ್ಸ್​ ಸೇರಿದಂತೆ ಪ್ರಮುಖ ಔಷಧ ಹಾಗೂ ಚಿಕಿತ್ಸೋಪಕರಣಗಳ ಮೇಲಿನ ಜಿಎಸ್​ಟಿಯನ್ನು ತಗ್ಗಿಸಲಾಗಿದೆ. ಅಲ್ಲದೆ, ಬ್ಲಾ$್ಯಕ್​ ಂಗಸ್​ ಔಷಧವನ್ನು ತೆರಿಗೆಮುಕ್ತಗೊಳಿಸಲಾಗಿರುವುದು ಸ್ವಾಗತಾರ್ಹ ನಿರ್ಧಾರ. ಇದರಿಂದ ರೋಗಿಗಳಿಗೆ ಚಿಕಿತ್ಸಾ ವೆಚ್ಚದ ಹೊರೆ ಒಂದಿಷ್ಟು ಇಳಿಯಲಿದೆ.

ಒಂದೆಡೆ ಸರ್ಕಾರ ಸೌಲಭ್ಯಗಳನ್ನು ಹೆಚ್ಚಿಸುತ್ತಿದೆ, ರೋಗಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ಇವುಗಳ ಸದ್ಬಳಕೆಯಾದರೆ ಅಸಂಖ್ಯ ಜನರ ಚಿಂತೆ, ನೋವು ಕಡಿಮೆಯಾಗುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಕರ್ನಾಟಕದಲ್ಲಿ ಸೋಂಕಿತರ ಹೆಸರಲ್ಲಿ ಸರ್ಕಾರದ ಹಣ ಪೋಲು ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಎರಡನೇ ಅಲೆಯ ಅಬ್ಬರ ತಗ್ಗಿ ಈಗ ಬೆಂಗಳೂರಿನಲ್ಲೂ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿವೆ. ಪರಿಣಾಮ, ಸರ್ಕಾರಿ ಆಸ್ಪತ್ರೆಗಳಲ್ಲೇ ಶೇಕಡ 64ರಷ್ಟು ಹಾಸಿಗೆಗಳು ಖಾಲಿ ಇವೆ. ಪ್ರಕರಣಗಳ ಸಂಖ್ಯೆ ಹೆಚ್ಚಿದ್ದಾಗ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸರ್ಕಾರಿ ಖರ್ಚಿನಲ್ಲೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ ಮಾಡಿಕೊಡಲಾಗಿತ್ತು. ಪ್ರಸಕ್ತ ಸರ್ಕಾರಿ ಆಸ್ಪತ್ರೆಗಳಲ್ಲೇ ಹಾಸಿಗೆ ಲಭ್ಯವಿದ್ದರೂ, ರೋಗಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಅಲ್ಲಿ ಭಾರಿ ಮೊತ್ತದ ಬಿಲ್​ ಮಾಡಿ, ಆ ಹಣವನ್ನು ಸರ್ಕಾರದ ಬೊಕ್ಕಸದಿಂದ ಪಡೆಯಲಾಗುತ್ತಿದೆ. ಬೆಂಗಳೂರಿನ 168ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 18,293 ಹಾಸಿಗೆಗಳು ಚಿಕಿತ್ಸೆಗೆ ಲಭ್ಯ ಇವೆ. ಆದರೂ, ಅನವಶ್ಯಕವಾಗಿ ಖಾಸಗಿ ಆಸ್ಪತ್ರೆಗಳಿಗೆ ಭರ್ತಿ ಮಾಡಿ, ಸರ್ಕಾರದದಿಂದ ಹಣ ಪಡೆಯಲಾಗುತ್ತಿರುವುದು ದುರದೃಷ್ಟಕರ. ಇದು ನಿಯಮಗಳ ಸ್ಪಷ್ಟ ಉಲ್ಲಂನೆಯೂ ಹೌದು. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಭರ್ತಿಯಾಗಿದ್ದರೆ ಮಾತ್ರ ಖಾಸಗಿ ಆಸ್ಪತ್ರೆಗೆ ದಾಖಲಿಸಬಹುದು. ಆಗ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಕ್ಕಾಗಿ ಸರ್ಕಾರದ ಸುವರ್ಣ ಆರೋಗ್ಯ ಟ್ರಸ್ಟ್​ ವತಿಯಿಂದ ಆಸ್ಪತ್ರೆಗಳಿಗೆ ಹಣ ಬಿಡುಗಡೆಯಾಗುತ್ತದೆ.


ಲಾಕ್​ಡೌನ್​, ಉದ್ಯಮ ಸ್ಥಗಿತದಿಂದ ಸರ್ಕಾರದ ಬೊಕ್ಕಸಕ್ಕೂ ಹೊಡೆತ ಬಿದ್ದಿದೆ. ಮಾನವೀಯ ಕಾಳಜಿಯ ದೃಷ್ಟಿಯಿಂದ ಸರ್ಕಾರ ಇಂಥ ಕ್ರಮಗಳನ್ನು ಕೈಗೊಳ್ಳುತ್ತಿರುವಾಗ ಅದರ ಸದುಪಯೋಗವಾಗಬೇಕು. ಇಂಥ ಹೊತ್ತಲ್ಲೂ ಹಣ ಮಾಡುವ, ಲಾಭ ಗಳಿಸುವ ಮಾನಸಿಕತೆಯೇ ಅಪಾಯಕಾರಿ. ಸರ್ಕಾರದ ಹಣವಿರಲಿ, ಇತರ ಸೌಲಭ್ಯಗಳಿರಲಿ ಪ್ರಾಮಾಣಿಕವಾಗಿ ಲಾನುಭವಿಗಳಿಗೆ ತಲುಪಬೇಕು. ಖಾಸಗಿ ಆಸ್ಪತ್ರೆಗಳು ಇನ್ನಾದರೂ ಆತ್ಮಾವಲೋಕನ ಮಾಡಿಕೊಂಡು ಇಂಥ ಪ್ರಕರಣಗಳಿಗೆ ಆಸ್ಪದ ಮಾಡಿಕೊಡಬಾರದು. ಸರ್ಕಾರಿ ಆಸ್ಪತ್ರೆಗಳು ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ, ರೋಗಿಗಳಲ್ಲಿ ಭರವಸೆ ಮೂಡಬೇಕು. ಕರೊನಾದ ಹೆಸರಲ್ಲಿ ಇನ್ನಷ್ಟು ಅಪಸವ್ಯಗಳು ಸೃಷ್ಟಿಯಾದರೆ ಅದರಿಂದ ಸಮಾಜದ ಹಿತಕ್ಕೆ ಹಾನಿಯಾಗುತ್ತದೆ ಎಂಬುದನ್ನು ಮರೆಯಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net