

ಬೆಂಗಳೂರು: ಅಧಿಕಾರ ವಹಿಸಿಕೊಂಡ ಕೇವಲ 2 ದಿನದಲ್ಲಿ 40 ಸಾವಿರ ರೈತರ ಖಾತೆಗಳಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣ ಹಾಕಲಿದ್ದು, ಈತನಕ ಒಟ್ಟಾರೆ 2706.93 ಕೋಟಿ ರೂ. ಜಮಾ ಮಾಡಿದಂತಾಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಈ ಯೋಜನೆಗೆ ರಾಜ್ಯದಲ್ಲಿ 53,81,272 ರೈತರು ನೋಂದಾಯಿಸಿಕೊಂಡಿದ್ದು, 49,05,076 ರೈತರಿಗೆ ಕೇಂದ್ರದಿಂದ 4 ಸಾವಿರ ರೂ. ಅನ್ನು ಎರಡು ಕಂತುಗಳಲ್ಲಿ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿದೆ.
ತಹಸೀಲ್ದಾರ್ ಲಾಗಿನ್ ಹಂತದಲ್ಲಿ ಬಾಕಿ ಉಳಿದಿದ್ದ ಹಣವನ್ನು ಕೂಡಲೇ ರೈತರಿಗೆ ವರ್ಗಾವಣೆ ಮಾಡುವ ಕೆಲಸ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯದಿಂದ ಪಿಎಂ ಕಿಸಾನ್ ಕರ್ನಾಟಕ ಯೋಜನೆಯಲ್ಲಿ 4 ಸಾವಿರ ರೂ. ನೆರವಿನಲ್ಲಿ ಮೊದಲ ಕಂತಿನಲ್ಲಿ ತಲಾ 2 ಸಾವಿರದಂತೆ 41,27,932 ರೈತರ ಖಾತೆಗಳಿಗೆ 825.58 ಕೋಟಿ ರೂ. ಜಮಾ ಮಾಡಲಾಗಿದೆ. ಆಧಾರ್ ಜೋಡಣೆ ಆಗದ ಮತ್ತು ಇನ್ನಿತರ ತಾಂತ್ರಿಕ ಕಾರಣಗಳಿಗಾಗಿ ಕೆಲವರಿಗೆ ಹಣ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು. ಕೃತಕ ಗೊಬ್ಬರ ಅಭಾವ ಸೃಷ್ಟಿ ಮಾಡುವವರ ಮೇಲೆ ಕಣ್ಣಿಡಲಾಗಿದೆ. ನಕಲಿ ಬಿತ್ತನೆ ಬೀಜ ಮಾರಾಟ ತಡೆಯಲು ಜಿಲ್ಲಾ ಮಟ್ಟದಲ್ಲಿ ಜಾಗೃತ ದಳವನ್ನು ರಚನೆ ಮಾಡಲಾಗಿದೆ ಎಂದು ಬಿ.ಸಿ. ಪಾಟೀಲ್ ತಿಳಿಸಿದರು.