ಆಕಾಶದಲ್ಲೇ ಅಮೆರಿಕದ 2 ನೌಕಾಪಡೆಯ ಯುದ್ಧ ವಿಮಾನ ಛಿದ್ರ; ಪೈಲಟ್​ಗಳು ಪ್ರಾಣಾಪಾಯದಿಂದ ಪಾರಾಗಿದ್ದು ಹೀಗೆ..US Navy Jets Crash

US Navy jets collision Idaho air show
US Navy jets collision Idaho air show
Published on

ಪ್ರಮುಖ ಮುಖ್ಯಾಂಶಗಳು

  • ಇಡಾಹೊದ ಮೌಂಟೇನ್ ಹೋಮ್ ಏರ್‌ಫೋರ್ಸ್ ಬೇಸ್‌ನಲ್ಲಿ ನಡೆದ ಏರ್ ಶೋ ಪ್ರದರ್ಶನ
  • ಏರ್ ಶೋ ಪ್ರದರ್ಶನದ ವೇಳೆ ಎರಡು ಯುದ್ಧ ವಿಮಾನ ಮುಖಾಮುಖಿ ಭೀಕರ ಅಪಘಾತ
  • ಅಪಘಾತದ ಬೆನ್ನಲ್ಲೇ ಸುರಕ್ಷಿತವಾಗಿ ಎಜೆಕ್ಟ್ ಆಗಿ ಪ್ಯಾರಾಚೂಟ್ ಮೂಲಕ ಕೆಳಗಿಳಿದ ಪೈಲಟ್​ಗಳು
ವಾಷಿಂಗ್ಟನ್: ಅಮೆರಿಕದ ಪಶ್ಚಿಮ ಇಡಾಹೊದಲ್ಲಿರುವ ಮೌಂಟೇನ್ ಹೋಮ್ ಏರ್‌ಫೋರ್ಸ್ ಬೇಸ್‌ನಲ್ಲಿ ಭಾನುವಾರ ನಡೆದ   ಏರ್ ಶೋ ಪ್ರದರ್ಶನದ ವೇಳೆ ಭೀಕರ ಅಪಘಾತವೊಂದು ಸಂಭವಿಸಿದೆ. ಯುಎಸ್ ನೌಕಾಪಡೆಯ ಎರಡು ಅತ್ಯಾಧುನಿಕ ಯುದ್ಧ ವಿಮಾನಗಳು ಆಕಾಶದಲ್ಲೇ ಒಂದಕ್ಕೊಂದು ಡಿಕ್ಕಿ ಹೊಡೆದು ನೆಲಕ್ಕುರುಳಿದ್ದು, ನಾಲ್ವರು ಪೈಲಟ್​ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗುತ್ತಿದೆ. 
ವಾಷಿಂಗ್ಟನ್‌ನ ವಿಡ್ಬೇ ದ್ವೀಪದ ಎಲೆಕ್ಟ್ರಾನಿಕ್ ಅಟ್ಯಾಕ್ ಸ್ಕ್ವಾಡ್ರನ್ 129 ಗೆ ಸೇರಿದ ಎರಡು 'EA-18G ಗ್ರೋಲರ್' (EA-18G Growler) ಯುದ್ಧ ವಿಮಾನಗಳು ಸಮತೋಲ ಮತ್ತು ಸಮನ್ವಯ ಕಳೆದುಕೊಂಡ ಪರಿಣಾಮ ಪರಸ್ಪರ ಡಿಕ್ಕಿ ಹೊಡೆದುಕೊಂಡು ಆಗಸದಲ್ಲೇ ಛಿದ್ರ ಛಿದ್ರಗೊಂಡಿತು ಎಂದು ಯುಎಸ್ ಪೆಸಿಫಿಕ್ ಫ್ಲೀಟ್‌ನ ನೌಕಾ ವಾಯುಪಡೆಯ ವಕ್ತಾರೆ ಕಮಾಂಡರ್ ಅಮೆಲಿಯಾ ಉಮಾಯಮ್  ಮಾಹಿತಿ ನೀಡಿದ್ದಾರೆ. 

ಪೈಲಟ್​ಗಳು ಪಾರಾಗಿದ್ದು ಹೇಗೆ?

ವೈಮಾನಿಕ ಪ್ರದರ್ಶನದ ವೇಳೆ  ಎರಡು ಯುದ್ಧ ವಿಮಾನ ಹತ್ತಿರಕ್ಕೆ ಬಂದಾಗ ಸ್ಪರ್ಶಿಸಿರುವ ಕಾರಣ, ನಿಯಂತ್ರಣ ತಪ್ಪಿದೆ, ಕೂಡಲೇ ಒಳಗಿದ್ದ ಪೈಲಟ್​ಗಳು ಸಮಯ ಪ್ರಜ್ಞೆ ಮೆರೆದು, ಅಲ್ಲಿಂದ  ಪ್ಯಾರಾಚೂಟ್​ ಮೂಲಕ ಎಕ್ಸಿಟ್ ಆಗಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಬೇಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಮಿಲಿಟರಿ ಬೇಸ್‌ನಲ್ಲಿದ್ದ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಏರ್ ಶೋ ಆಯೋಜನೆಗೆ ನೆರವಾಗಿದ್ದ ಕಿಮ್ ಸೈಕ್ಸ್ ಖಚಿತಪಡಿಸಿದ್ದಾರೆ. 
ಸಾಮಾನ್ಯವಾಗಿ ಆಕಾಶದಲ್ಲಿ ವಿಮಾನಗಳು ಮುಖಾಮುಖಿ ಡಿಕ್ಕಿಯಾದಾಗ ಪೈಲಟ್‌ಗಳಿಗೆ ಅಲ್ಲಿಂದ ಹೊರಬರಲು ಸಾಧ್ಯವಾಗೋದಿಲ್ಲ. ಈ ಬಾರಿ ಪೈಲಟ್​ಗಳು ಬದುಕುಳಿದಿರೋದು ಪವಾಡವೇ ಹೌದು. ಅವು ಒಟ್ಟಿಗೆ ಸಿಲುಕಿಕೊಂಡಂತೆ ಕೆಳಗೆ ಬಿದ್ದಿದ್ದರಿಂದ, ಪೈಲಟ್‌ಗಳಿಗೆ ಹೊರಬರಲು ಸಮಯ ಸಿಕ್ಕಿತು ಎನ್ನಲಾಗಿದೆ.
2018 ರ ನಂತರ ಈ ಬೇಸ್‌ನಲ್ಲಿ ನಡೆಯುತ್ತಿದ್ದ ಮೊದಲ ದೊಡ್ಡ ಏರ್ ಶೋ ಇದಾಗಿತ್ತು. ಈ ಹಿಂದೆ 2018 ರಲ್ಲಿ ಇಲ್ಲಿ ಹ್ಯಾಂಗ್ ಗ್ಲೈಡರ್ ಪೈಲಟ್ ಒಬ್ಬರು ಮೃತಪಟ್ಟಿದ್ದರು. ಹಾಗೆಯೇ 2003 ರಲ್ಲೂ ಇಲ್ಲಿ ಥಂಡರ್‌ಬರ್ಡ್ಸ್ ವಿಮಾನವೊಂದು ಪತನಗೊಂಡಿತ್ತು.ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಏರ್ ಶೋಸ್ ಪ್ರಕಾರ, 1991 ರಿಂದ 2006 ರವರೆಗೆ ವಾರ್ಷಿಕ ಸರಾಸರಿ 3.8 ಸಾವುಗಳು ಸಂಭವಿಸುತ್ತಿದ್ದವು. ಆದರೆ 2017 ರ ನಂತರ ಈ ಪ್ರಮಾಣ ಸರಾಸರಿ 1.1 ಕ್ಕೆ ಇಳಿದಿದೆ. 2023 ಮತ್ತು 2025 ರಲ್ಲಿ ಯಾವುದೇ ಸಾವುಗಳು ವರದಿಯಾಗಿರಲಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net