ಬೆಂಗಳೂರು : ಪ್ರಮೋದ್ ಪಂಜು, ಅಮೃತಾ ಅಯ್ಯಂಗಾರ್ ಮುಖ್ಯಭೂಮಿಕೆಯಲ್ಲಿರುವ, ಕೆ.ಪಿ. ಶ್ರೀಕಾಂತ್ ನಿರ್ಮಾಣದಲ್ಲಿ ಯುವನಿರ್ದೇಶಕ ಚಲ ಆ್ಯಕ್ಷನ್-ಕಟ್ ಹೇಳುತ್ತಿರುವ ‘ಹಲ್ಕಾ ಡಾನ್’ ತಾರಾಗಣ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ಈಗಾಗಲೇ ತಮಿಳಿನ ಡಾನ್ ವಿಜಯ್, ಕನ್ನಡದ ನಟಿಯರಾದ ಚೈತ್ರಾ ಹಳ್ಳಿಕೇರಿ, ಜ್ಯೋತಿ ಪೂರ್ವಜ್, ನಟರಾದ ರೂಪೇಶ್ ಶೆಟ್ಟಿ, ಅರವಿಂದ್ ಬೋಳಾರ್ ತಂಡ ಸೇರಿಕೊಂಡಿದ್ದಾರೆ. ಇದೀಗ ಮಲಯಾಳಂ ನಟಿ ದಿವ್ಯಾ ಪಿಳ್ಳೈ ‘ಹಲ್ಕಾ ಡಾನ್’ ಗ್ಯಾಂಗ್ ಸೇರಿದ್ದಾರೆ. ದುಬೈ ಮೂಲದ ಅವರು ಮಲಯಾಳಂನ ‘ಆಯಲ್ ನಿಂಜಲ್’ (2015) ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ಬಳಿಕ ‘ಮಾಸ್ಟರ್‌ಪೀಸ್’, ‘ಮೈ ಗ್ರೇಟ್ ಗ್ರ್ಯಾಂಡ್ ಫಾದರ್, ತಮಿಳಿನ ‘ರಾಯನ್’, ‘ಏಸ್’, ತೆಲುಗಿನ ‘ಮಂಗಳವಾರಂ’, ‘ತಾಂಡೇಲ್’, ‘ಭೈರವಂ’ ಸೇರಿ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ, ತೆಲುಗು, ತಮಿಳು ಚಿತ್ರರಂಗಗಳನ್ನು ಸುತ್ತು ಹಾಕಿರುವ ದಿವ್ಯಾ ಇದೀಗ ‘ಹಲ್ಕಾ ಡಾನ್’ ಮೂಲಕ ಸ್ಯಾಂಡಲ್‌ವುಡ್‌ಗೆ ಡೆಬ್ಯೂ ಮಾಡುತ್ತಿದ್ದಾರೆ. ಮಂಗಳೂರು ಹಿನ್ನೆಲೆಯಲ್ಲಿ ಅವರ ಪಾತ್ರ ಸಾಗಲಿದೆ. ನಟಿಯ ಆಯ್ಕೆಯ ಬಗ್ಗೆ ನಿರ್ದೇಶಕ ಚಲ, ‘ದಿವ್ಯಾ ಪಿಳ್ಳೈ ಸೇರ್ಪಡೆಯಿಂದ ‘ಹಲ್ಕಾ ಡಾನ್’ ತಾರಾಗಣ ಹಿಗ್ಗಿದೆ. ಅವರದು ಸೆಕೆಂಡ್ ಹೀರೋಯಿನ್ ಪಾತ್ರ ಎನ್ನಬಹುದು. ದಿವ್ಯಾ ನಟಿಸಿರುವ ಕೆಲ ಸಿನಿಮಾಗಳನ್ನು ನೋಡಿದ್ದೆವು. ಅವರ ನಟನೆ ಇಷ್ಟವಾಗಿತ್ತು. ನಮ್ಮ ಚಿತ್ರದ ಪಾತ್ರಕ್ಕೂ ಅವರೇ ಸೂಕ್ತವಾಗುತ್ತಾರೆ ಎಂದು ಆಯ್ಕೆ ಮಾಡಿದೆವು. ಈ ಹಿನ್ನೆಲೆಯಲ್ಲಿ ಅವರನ್ನು ಸಂಪರ್ಕಿಸಿದಾಗ ಕಥೆ ಕೇಳಿ ಅವರು ಕೂಡ ಒಪ್ಪಿಕೊಂಡರು. ಒಟ್ಟು 22 ದಿನಗಳ ಡೇಟ್ ನೀಡಿದ್ದು, ಇಂದಿನಿಂದ (ಜೂ. 27) ಶೂಟಿಂಗ್ ಆರಂಭವಾಗಲಿದೆ. ಈಗಾಗಲೇ ‘ಹಲ್ಕಾ ಡಾನ್’ ಚಿತ್ರದ ಶೇ.70ರಷ್ಟು ಶೂಟಿಂಗ್ ಪೂರ್ಣಗೊಂಡಿದೆ. ಒಂದು ಹಂತದ ಚಿತ್ರೀಕರಣವಷ್ಟೇ ಬಾಕಿಯಿದೆ. ಆ ನಂತರ ಪೋಸ್ಟ್-ಪ್ರೊಡಕ್ಷನ್ ಕಾರ್ಯ ಆರಂಭವಾಗಲಿವೆ. ಶೂಟಿಂಗ್ ಪೂರ್ಣಗೊಂಡ ಬಳಿಕ ರಿಲೀಸ್ ಡೇಟ್ ಅನೌನ್ಸ್ ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು.