Golf: ಮೊಹಮ್ಮದ್ ಅಜರ್‌ಗೆ ಕೋಲಾರ ಓಪನ್ ಪ್ರಶಸ್ತಿ

Golf: ಮೊಹಮ್ಮದ್ ಅಜರ್‌ಗೆ ಕೋಲಾರ ಓಪನ್ ಪ್ರಶಸ್ತಿ
Golf: ಮೊಹಮ್ಮದ್ ಅಜರ್‌ಗೆ ಕೋಲಾರ ಓಪನ್ ಪ್ರಶಸ್ತಿ
Published on

ಕೋಲಾರ: ಹೈದರಾಬಾದ್‌ನ 27 ವರ್ಷದ ಗಾಲ್ಫರ್ ಮೊಹಮ್ಮದ್ ಅಜರ್ ಅವರು ತಮ್ಮ ವೃತ್ತಿಜೀವನದ ಚೊಚ್ಚಲ ವೃತ್ತಿಪರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಜಿಯಾನ್ ಹಿಲ್ಸ್ ಗಾಲ್ಫ್ ಕೌಂಟಿಯಲ್ಲಿ ನಡೆದ ಎರಡನೇ ಆವೃತ್ತಿಯ ₹1 ಕೋಟಿ ಬಹುಮಾನ ಮೊತ್ತದ ಕೋಲಾರ ಓಪನ್ (

Kolar Open

) ಟೂರ್ನಿಯಲ್ಲಿ ಅಜರ್ ಒಟ್ಟು 9-ಅಂಡರ್ 279 ಸ್ಕೋರ್‌ನೊಂದಿಗೆ ಎರಡು ಶಾಟ್‌ಗಳ ಅಂತರದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಅಜರ್ (70-68-70-71) ಅಂತಿಮ ಸುತ್ತಿನಲ್ಲಿ ಒಂದು ಅಂಡರ್ 71 ಸ್ಕೋರ್ ಮಾಡಿದರು. ಪ್ರಶಸ್ತಿಯೊಂದಿಗೆ ಅವರು ₹15 ಲಕ್ಷ ಬಹುಮಾನ ಮೊತ್ತ ಪಡೆದಿದ್ದು, 2026ರ DP ವರ್ಲ್ಡ್ PGTI ಆರ್ಡರ್ ಆಫ್ ಮೆರಿಟ್‌ನಲ್ಲಿ ಏಳು ಸ್ಥಾನಗಳ ಏರಿಕೆ ಕಂಡು 10ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಅವರ ಪ್ರಸಕ್ತ ಋತುವಿನ ಒಟ್ಟು ಗಳಿಕೆ ₹35,14,675ಕ್ಕೆ ಏರಿಕೆಯಾಗಿದೆ.
ಚಂಡೀಗಢದ ನಾಲ್ಕು ಬಾರಿ ಚಾಂಪಿಯನ್ ಅಂಗದ್ ಚೀಮಾ (73-68-67-73) ಮತ್ತು ದೆಹಲಿಯ ಮೂರು ಬಾರಿ ವಿಜೇತ ಶೌರ್ಯ ಭಟ್ಟಾಚಾರ್ಯ (68-67-71-75) ತಲಾ 7-ಅಂಡರ್ 281 ಸ್ಕೋರ್‌ನೊಂದಿಗೆ ಜಂಟಿ ಎರಡನೇ ಸ್ಥಾನ ಪಡೆದರು.
ಅಂತಿಮ ಸುತ್ತನ್ನು ಎರಡು ಶಾಟ್‌ಗಳ ಮುನ್ನಡೆಯೊಂದಿಗೆ ಆರಂಭಿಸಿದ್ದ ಭಟ್ಟಾಚಾರ್ಯ, ಕೊನೆಯ ಹಂತದವರೆಗೂ ಉತ್ತಮ ನಿಯಂತ್ರಣದಲ್ಲಿದ್ದರು. ಆದರೆ 17ನೇ ಮತ್ತು 18ನೇ ಹೋಲ್‌ಗಳಲ್ಲಿ ಸತತ ಡಬಲ್ ಬೋಗಿಗಳಿಂದಾಗಿ ಪ್ರಶಸ್ತಿ ಅವರ ಕೈತಪ್ಪಿತು. ಕಳೆದ ವರ್ಷ ನಡೆದ ಮೊದಲ ಆವೃತ್ತಿಯಲ್ಲೂ ಭಟ್ಟಾಚಾರ್ಯ ರನ್ನರ್-ಅಪ್ ಆಗಿದ್ದರು.
2020ರಲ್ಲಿ ವೃತ್ತಿಪರ ಗಾಲ್ಫ್‌ಗೆ ಕಾಲಿಟ್ಟ ಅಜರ್, ಗಾಳಿ ಮತ್ತು ಮಳೆಯ ಕಠಿಣ ಪರಿಸ್ಥಿತಿಯಲ್ಲೂ ತಾಳ್ಮೆ ಕಾಪಾಡಿಕೊಂಡು ನಿರ್ಣಾಯಕ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಎರಡನೇ ಹೋಲ್‌ನಲ್ಲಿ ಎರಡು ಶಾಟ್‌ಗಳಲ್ಲಿ ಗ್ರೀನ್ ತಲುಪಿ ಬರ್ಡಿ ಮಾಡಿದ ಅವರು, ನಾಲ್ಕನೇ ಹೋಲ್‌ನಲ್ಲಿ ಉತ್ತಮ ಅಪ್ರೋಚ್ ಮೂಲಕ ಮತ್ತೊಂದು ಬರ್ಡಿ ದಾಖಲಿಸಿದರು. 12ನೇ ಹೋಲ್‌ನಲ್ಲಿ ಸುಮಾರು 30ರಿಂದ 35 ಅಡಿ ದೂರದಿಂದ ಪಟ್ ಮಾಡಿ ಬರ್ಡಿ ಗಳಿಸಿದ್ದು ಅವರ ಸುತ್ತಿನ ಪ್ರಮುಖ ಕ್ಷಣವಾಗಿತ್ತು.
“ಇಂದು ನಾನು ಉತ್ತಮವಾಗಿ ಆಡಿದ್ದು, ಅತ್ಯಂತ ಸಂತೋಷವಾಗಿದೆ. ಗಾಳಿ ಮತ್ತು ಮಳೆಯಿಂದ ಪರಿಸ್ಥಿತಿ ಕಠಿಣವಾಗಿತ್ತು. ಆದರೆ ತಾಳ್ಮೆ ಕಾಪಾಡಿಕೊಂಡು ಗ್ರೀನ್‌ಗಳನ್ನು ತಲುಪುವತ್ತ ಗಮನಹರಿಸಿದೆ,” ಎಂದು ಅಜರ್ ಹೇಳಿದರು.
ಗುರುಗ್ರಾಮದ ವೀರ್ ಅಹ್ಲಾವತ್ 6-ಅಂಡರ್ 282ರೊಂದಿಗೆ ನಾಲ್ಕನೇ ಸ್ಥಾನ ಪಡೆದರೆ, ಹಾಲಿ ಚಾಂಪಿಯನ್ ಕ್ಷಿತಿಜ್ ನವೀದ್ ಕೌಲ್ ಮತ್ತು ಬಾದಲ್ ಹುಸೇನ್ ತಲಾ 5-ಅಂಡರ್ 283ರೊಂದಿಗೆ ಜಂಟಿ ಐದನೇ ಸ್ಥಾನ ಪಡೆದರು.
DP ವರ್ಲ್ಡ್ PGTI ಆರ್ಡರ್ ಆಫ್ ಮೆರಿಟ್‌ನ ಅಗ್ರಸ್ಥಾನದಲ್ಲಿರುವ ಸಪ್ತಕ್ ತಲ್ವಾರ್ 1-ಅಂಡರ್ 287ರೊಂದಿಗೆ 10ನೇ ಸ್ಥಾನ ಪಡೆದರು. ಅವರಿಗೆ ₹2 ಲಕ್ಷ ಬಹುಮಾನ ದೊರೆತಿದ್ದು, ಋತುವಿನ ಒಟ್ಟು ಗಳಿಕೆ ₹86,33,234ಕ್ಕೆ ಏರಿಕೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net