'ನಿನಗೆ ಇಂಗ್ಲಿಷ್​ ಬರಲ್ಲ! ಮೊದಲು ಕಲಿ'; ಟೀಕಿಸಿದವರಿಗೆ ಕಡೆಗೂ ಖಡಕ್ ಉತ್ತರ ಕೊಟ್ಟ ಕ್ಯಾಪ್ಟನ್​ ರಿಜ್ವಾನ್​ | Mohammad Rizwan

ವಿಜಯವಾಣಿ - 2025-04-12T134349.586
Published on

Mohammad Rizwan: ಭಾರತದಲ್ಲಿ ನಡೆಯುತ್ತಿರುವ ಐಪಿಎಲ್​ಗೆ ಸರಿಯಾದ ಟಕ್ಕರ್​ ಕೊಡಬೇಕು ಎಂಬ ನಿಟ್ಟಿನಲ್ಲಿ ಪಿಎಸ್​ಎಲ್​ ಆಯೋಜನೆ ಮಾಡಿರುವ ಪಾಕಿಸ್ತಾನ ಕ್ರಿಕೆಟ್​ ಮಂಡಳಿ, ಐಪಿಎಲ್​ ನಡೆಯುವ ಸಮಯಕ್ಕೆ ಅನುಗುಣವಾಗಿ ಪಿಎಸ್​ಎಲ್​ನ ಪ್ರಾರಂಭಿಸಿದೆ. ಇದೆಲ್ಲದರ ಮಧ್ಯೆ ಈ ಹಿಂದಿನಿಂದಲೂ ಪಾಕಿಸ್ತಾನ ಕ್ರಿಕೆಟ್​ ತಂಡದ ಕ್ಯಾಪ್ಟನ್​ ಮೊಹಮ್ಮದ್​ ರಿಜ್ವಾನ್​ರನ್ನು ಹಿಗ್ಗುಮುಗ್ಗಾ ಟೀಕಿಸಿ, ಟ್ರೋಲ್​ ಮಾಡುತ್ತಿದ್ದ ನೆಟ್ಟಿಗರು, ಇಂಗ್ಲಿಷ್​ ಮಾತನಾಡಲು ಬಾರದ ನಾಯಕ ನೀನು. ಮೊದಲು ಆಂಗ್ಲ ಭಾಷೆ ಕಲಿ ಎಂದಿದ್ದರು. ಕಡೆಗೂ ಈ ಎಲ್ಲ ಟೀಕೆಗಳಿಗೆ ಇದೀಗ ರಿಜ್ವಾನ್​ ಖಡಕ್​ ಉತ್ತರವನ್ನೇ ಕೊಟ್ಟಿದ್ದಾರೆ.

ವ್ಯಾಪಕ ಟ್ರೋಲ್​

ವೈಟ್​ ಬಾಲ್ ಕ್ಯಾಪ್ಟನ್​ ಆಗಿ ಪಾಕಿಸ್ತಾನ ತಂಡವನ್ನು ಮುನ್ನಡೆಸುತ್ತಿರುವ ಮೊಹಮ್ಮದ್ ರಿಜ್ವಾನ್​, ಯಾವುದೇ ಪಂದ್ಯಗಳನ್ನಾಡಲಿ, ಅಲ್ಲಿ ಅವರಿಗೆ ಆಂಗ್ಲ ಭಾಷೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ ಮತ್ತು ಮುಗಿದ ಬಳಿಕ ಮಾಧ್ಯಮಗಳಿಗೆ ಮಾತನಾಡುವಾಗ ರಿಜ್ವಾನ್​ ಇಂಗ್ಲಿಷ್​ ಪದಗಳನ್ನು ಸ್ಪಷ್ಟವಾಗಿ ಉಚ್ಚರಿಸುವುದಿಲ್ಲ. ಇದರ ಜತೆಗೆ ವಾಕ್ಯ ರಚನೆ ಅಲ್ಲಲ್ಲಿ ತಪ್ಪುತ್ತದೆ. ಇದನ್ನೇ ಗುರಿಯಾಗಿಸಿಕೊಂಡ ನೆಟ್ಟಿಗರು, ರಿಜ್ವಾನ್​ ಮಾತನಾಡುವ ಇಂಗ್ಲಿಷ್​​ ಭಾಷೆಯ ವಿಡಿಯೋವನ್ನು ಮುಂದಿಟ್ಟು ಲೇವಡಿ, ವ್ಯಾಪಕ ಟ್ರೋಲ್​ ಮಾಡುತ್ತಿದ್ದಾರೆ.

ಶಿಕ್ಷಣವನ್ನು ಪೂರ್ಣ....

ಇನ್ನೂ ಕೆಲವರು ಒಂದು ಹೆಜ್ಜೆ ಮುಂದೋಗಿ, 'ಮೊದಲು ನೀನು ಸರಿಯಾಗಿ ಆಂಗ್ಲ ಭಾಷೆಯನ್ನು ಮಾತನಾಡುವುದು ಕಲಿ' ಎಂದು ಟೀಕಿಸಿದ್ದಾರೆ. ಕಡೆಗೂ ಇದಕ್ಕೆ ಪ್ರತಿಕ್ರಿಯಿಸಿರುವ ರಿಜ್ವಾನ್​, "ನನ್ನ ಶಿಕ್ಷಣವನ್ನು ಪೂರ್ಣಗೊಳಿಸದಿದ್ದಕ್ಕೆ ನನಗೆ ಬಹಳ ಬೇಸರವಿದೆ. ಚೆನ್ನಾಗಿ ಓದಿಕೊಂಡಿದ್ದರೆ ಖಂಡಿತ ನಾನು ಇಂಗ್ಲಿಷ್​ ಮಾತನಾಡುತ್ತಿದ್ದೆ. ಆದರೆ, ಆಗಲಿಲ್ಲ. ಇದರಿಂದಲೇ ನನಗೆ ಇಂಗ್ಲಿಷ್ ಗೊತ್ತಿಲ್ಲ. ಪಾಕಿಸ್ತಾನದ ಕ್ಯಾಪ್ಟನ್ ಆಗಿ​ ನನಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದು ಹೇಳಲು ನನಗೇನು ನಾಚಿಕೆ ಇಲ್ಲ" ಎಂದಿದ್ದಾರೆ.

ಪಾಕ್​ಗೆ ಬೇಕಿರುವುದು ಕ್ರಿಕೆಟ್​!

"ನನ್ನಿಂದ ತಂಡಕ್ಕೆ ಮತ್ತು ದೇಶಕ್ಕೆ ಬೇಕಿರುವುದು ಕ್ರಿಕೆಟ್ ಆಡುವುದೇ ಹೊರತು ಇಂಗ್ಲಿಷ್ ಮಾತನಾಡುವುದಲ್ಲ. ಇದನ್ನೇ ಪಿಸಿಬಿ ಕೂಡ ಬಯಸಿದೆ. ಪಾಕಿಸ್ತಾನಕ್ಕೆ ಇಂಗ್ಲಿಷ್ ಬೇಕಾದರೆ, ಖಂಡಿತ ನಾನು ಪ್ರಾಧ್ಯಾಪಕನಾಗ್ತೀನಿ ಅಥವಾ ಇಂಗ್ಲಿಷ್​ ಕಲಿತು ವಾಪಾಸ್ ಆಗ್ತೀನಿ. ಅಸಲಿಗೆ ಪಾಕಿಸ್ತಾನ ಇದ್ಯಾವುದನ್ನು ನನ್ನಿಂದ ಕೇಳಿಲ್ಲ. ಕಾರಣ, ಅವರಿಗೆ ಬೇಕಿರುವುದು ಕ್ರಿಕೆಟ್, ಇಂಗ್ಲಿಷ್ ಅಲ್ಲ" ಎಂದರು.

"ತಂಡವನ್ನು ಟೀಕಿಸುವುದು ಸರಿ. ಆದರೆ, ನಾವು ಮಾಡಿದ ತಪ್ಪೇನು ಎಂಬುದನ್ನು ಸರಿಯಾಗಿ ಹೇಳಿದರೆ ಅಥವಾ ಮಾರ್ಗದರ್ಶನ ನೀಡಿದರೆ ಖಂಡಿತ ಅದನ್ನು ತಿದ್ದಿಕೊಳ್ಳುತ್ತೀವಿ. ಇತ್ತೀಚೆಗೆ, ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ, ಪಾಕ್ ದಿಗ್ಗಜ ವಾಸಿಮ್ ಅಕ್ರಮ್ ಅವರು ನಮಗೆ ಸಲಹೆ ನೀಡಿದರು. ಆಗ ನಾನು ಅವರೊಂದಿಗೆ ಹೆಚ್ಚು ಮಾತನಾಡಲು ಬಯಸಿದ್ದೆ. ಆದ್ರೆ, ಸಮಯ ಕೂಡಿ ಬರಲಿಲ್ಲ" ಎಂದು ಹೇಳಿದರು.

"ನಾವು ಪಂದ್ಯ ಸೋತಾಗ ಅಭಿಮಾನಿಗಳು ತಮ್ಮ ಕೋಪ, ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಅವರಿಗೆ ನಮ್ಮನ್ನು ಛೇಡಿಸಲು ಎಲ್ಲ ಹಕ್ಕು ಇದೆ. ಕಾರಣ, ಅವರೆಲ್ಲ ನಮ್ಮನ್ನು ತುಂಬ ಪ್ರೀತಿಸುತ್ತಾರೆ. ಪ್ರಸ್ತುತ ಪಿಎಸ್​ಎಲ್​ ನಡೆಯುತ್ತಿದೆ. ಈಗ ನಮಗೆ ಲೀಗ್ ಆನಂದಿಸುವ ಸಮಯ" ಎಂದು ರಿಜ್ವಾನ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net