ಕರೊನಾ ತಡಗೆ ಏಪ್ರಿಲ್ 5ರ ಸಂಕಲ್ಪ ಏನು- ವಿಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿ ವಿವರಿಸಿದ್ದಾರೆ ನೋಡಿ...

PM MODI 25 MAR 20
Published on

ನವದೆಹಲಿ: ಕರೊನಾ ವೈರಸ್​ ನಿಯಂತ್ರಣಕ್ಕೆ ಸಂಬಂಧಿಸಿ ಲಾಕ್​ಡೌನ್ ಘೋಷಿಸಿದ ಬಳಿಕ ಗುರುವಾರ ಸಂಜೆ ಮಾಡಿದ ಟ್ವೀಟ್ ಇಡೀ ದೇಶದ ಕುತೂಹಲ ಕೆರಳಿಸಿತ್ತು. ಇದೀಗ ಒಂಭತ್ತು ಗಂಟೆಗೆ ವಿಡಿಯೋ ಅಪ್ಲೋಡ್ ಮಾಡ್ತೇನೆ ನೋಡಿ ಎಂದು ಮತ್ತೆ ಟ್ವೀಟ್ ಮಾಡುವ ಮೂಲಕ ಕೌಂಟ್ ಡೌನ್ ಆರಂಭಿಸಿದ್ದರು. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಅವರ ಮಾತಿನ ಸಾರ ಇಲ್ಲಿದೆ.

ಕರೊನಾ ಮಹಾಮಾರಿ ವಿರುದ್ದ ದೇಶ ಹೋರಾಟ ನಡೆಸುತ್ತಿದೆ.‌ ಲಾಕ್​ಡೌನ್ ಜಾರಿಯಾಗಿ 9 ದಿನಗಳಾಗಿವೆ. ಜನತೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.  ಕರೊನಾ ವಾರಿಯರ್ಸ್ ಗೆ ದೇಶದ ಜನತೆ ನೀಡಿದ ಬೆಂಬಲ ವಿಶ್ವದ ಇತರೆ ದೇಶಗಳಿಗೆ ಹೊಸ ಸಂದೇಶ ರವಾನಿಸಿದೆ. 130 ಕೋಟಿ ಜನರು ಒಂದಾಗಿ ಕೊರೊನಾ ಹೆಮ್ಮಾರಿ ವಿರುದ್ಧ ಹೋರಾಡೋಣ.

ಲಾಕ್​ಡೌನ್ ಸಂದರ್ಭದಲ್ಲಿ ದೇಶದ ಕೋಟ್ಯಂತರ ಜನ ಮನೆಯಲ್ಲಿದ್ದಾರೆ. ನಾವು ನಮ್ಮ ಮನೆಯಲ್ಲಿ ಇದ್ದೇವೆ. 130 ಕೋಟಿ ಜನರ ಸಾಮೂಹಿಕ ಶಕ್ತಿ ವಿಶ್ವದ ಇತರೆ ದೇಶಗಳಿಗೆ ಮಾದರಿಯಾಗಿದೆ. ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ಕರೊನಾ ಸವಾಲಾಗಿಯೇ ಇದೆ. ಕರೊನಾ ವಿರುದ್ಧ ಏಕ ವ್ಯಕ್ತಿ ಹೋರಾಟ ಸಾಧ್ಯವೇ ಇಲ್ಲ. ಲಾಕ್​ಡೌನ್ ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸೋಣ.

ಕರೊನಾ ತಂದಿರುವ ಸಂಕಷ್ಟದಿಂದಾಗಿ ಬಡವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅವರಲ್ಲಿ ಹೊಸ ಬೆಳಕು ಮೂಡಿಸುವ ಅಗತ್ಯವಿದೆ. ಕರೊನಾ ಅಂಧಕಾರವನ್ನು ಹೋಗಲಾಡಿಸಲು ಇದೇ ಭಾನುವಾರ ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ ಕೇವಲ ಒಂಭತ್ತು ನಿಮಿಷ ಕೊಡಿ. 130 ಕೋಟಿ ಭಾರತೀಯರು ಮನೆಯ ಎಲ್ಲ ಲೈಟ್​ಗಳನ್ನೂ ಆರಿಸಿ, ಮೊಂಬತ್ತಿ, ದೀಪ, ಟೋರ್ಚ್​, ಮೊಬೈಲ್​ನ ಫ್ಲ್ಯಾಶ್ ಲೈಟನ್ನು ಹಿಡಿದು ಮನೆಯ ಮೇಲೆ ಬಾಲ್ಕನಿಗೋ, ಜಗುಲಿಗೋ ಬನ್ನಿ. ನಾವೆಲ್ಲ ಒಟ್ಟಾಗಿ ಒಂದು ಸಂದೇಶವನ್ನು ಸಾರೋಣ. ನಾವು ಒಂಟಿಯಲ್ಲ, ಈ ಜಗತ್ತಿನಲ್ಲಿ ಯಾರೂ ಒಂಟಿಯಲ್ಲ. ನಾವೆಲ್ಲರೂ ಜತೆಗಿದ್ದೇವೆ ಎಂಬ ಸಂದೇಶವದು. ಆ ಮೂಲಕ ಎಲ್ಲರ ಆತ್ಮಸ್ಥೈರ್ಯವನ್ನು ಹೆಚ್ಚಿಸೋಣ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಎಲ್ಲೇ ಇದ್ದರೂ ಯಾರೂ ಎಲ್ಲೂ ಗುಂಪುಗೂಡಬಾರದು. ರಸ್ತೆಗಿಳಿದು ಅಡ್ಡಾಡಬಾರದು. ಮನೆಯ ಎದುರಿನ ಬೀದಿಗೂ ಇಳಿಯಬಾರದು. ಅಥವಾ ನಿಮ್ಮ ಮನೆಯ ಸುತ್ತಮುತ್ತ ಬೀದಿಗಳಲ್ಲಿ ಓಡಾಡಲೂ ಬಾರದು. ನಿಮ್ಮ ಮನೆಯ ಬಾಗಿಲಿಗೆ ನಿಂತುಕೊಳ್ಳಿ. ಅದುವೇ ನಿಮಗೆ ಸೋಷಿಯಲ್ ಡಿಸ್ಟೆನ್ಸಿಂಗ್​ಗೆ ಸಂಬಂಧಿಸಿದ ಲಕ್ಷ್ಮಣ ರೇಖೆ. ಈ ಸೋಂಕು ಹರಡದಂತೆ ತಡೆಯಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದ ಹೊರತು ಬೇರೆ ಮಾರ್ಗವೇ ಇಲ್ಲ. ಸೋಷಿಯಲ್ ಡಿಸ್ಟೆನ್ಸಿಂಗ್​ ವಿಚಾರವನ್ನು ಎಂಥದ್ದೇ ಪರಿಸ್ಥಿತಿಯಲ್ಲೂ ಕೈ ಬಿಡಬೇಡಿ.

ಹಾಗಾಗಿ, ಏಪ್ರಿಲ್ 5 ರಂದು ರಾತ್ರಿ 9 ಗಂಟೆಯ ಸಂಕಲ್ಪವನ್ನು ಮರೆಯಬೇಡಿ. ಅಂದು ರಾತ್ರಿ ಕೆಲಕಾಲ ಕಣ್ಮುಚ್ಚಿ ಕುಳಿತು ತಾಯಿ ಭಾರತಿಯನ್ನು ಧ್ಯಾನಿಸಿ, ದೇಶದ 130 ಕೋಟಿ ಭಾರತೀಯರ ಮುಖಗಳನ್ನು ಕಣ್ಣೆದುರು ತಂದುಕೊಳ್ಳಿ. 130 ಕೋಟಿ ಜನರ ಸಂಘಟಿತ ಶಕ್ತಿಯನ್ನು ಅನುಭವಿಸಿ. ಈ ಹೊತ್ತಿನ ಸಂಕಷ್ಟದಿಂದ ಪಾರಾಗಲು ಇದು ಶಕ್ತಿ ಕೊಡುತ್ತದೆ. ಈ ಸಂದರ್ಭದಲ್ಲೊಂದು ಮಾತು ನೆನಪಾಗುತ್ತಿದೆ -

ಉತ್ಸಾಹೋ ಬಲವಾನ್ ಆರ್ಯ,

ನಾ ಅಸ್ತಿ ಉತ್ಸಾಹ್ ಪರಂ ಬಲಂ|

ಸಹ್ ಉತ್ಸಾಹಸ್ಯ ಲೋಕೇಶು,

ನಾ ಕಿಂಚಿತ್​ ಅಪಿ ದುರ್ಲಭಂ||

ಅರ್ಥಾತ್​, ನಮ್ಮ ಉತ್ಸಾಹ ಮತ್ತು ಆತ್ಮಕ್ಕಿಂತ ದೊಡ್ಡ ಶಕ್ತಿ ಈ ಜಗತ್ತಿನಲ್ಲಿ ಬೇರೊಂದಿಲ್ಲ. ಈ ಜಗತ್ತಿನಲ್ಲಿ ಬಲ ಪ್ರಯೋಗಿಸಿ ಏನನ್ನಾದರೂ ಸಾಧಿಸಬಲ್ಲೆ ಎನ್ನುವಂಥದ್ದೂ ಯಾವುದೂ ಇಲ್ಲ. ನಾವೆಲ್ಲರೂ ಜತೆಯಾಗೋಣ, ಒಟ್ಟಾಗಿ ಕರೊನಾ ವೈರಸ್ ಸೋಂಕು ತಡೆಯೋಣ. ಭಾರತವನ್ನು ಗೆಲ್ಲಿಸೋಣ ಎಂದು ಹೇಳಿದರು.

ಗುರುವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕರೊನಾ ಕುರಿತು ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ಬಳಿಕ ಮಾಡಿದ ಟ್ವೀಟ್​ ಕುತೂಹಲ ಹುಟ್ಟಿಸಿತ್ತು. ಮಾ.24ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಅಂದು ರಾತ್ರಿ 12 ಗಂಟೆಯಿಂದಲೇ ಭಾರತ ಲಾಕ್​ಡೌನ್​ ಆಗಲಿದೆ ಎಂದು ಘೋಷಿಸಿದ್ದರು. ಹಾಗೇ ಮೊನ್ನೆ ಮನ್​ ಕೀ ಬಾತ್​​ನಲ್ಲಿ ಮಾತನಾಡಿ, ಕರೊನಾ ವೈರಸ್​ ಬಗ್ಗೆ ಅರಿವು ಮೂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net