ಅಹಮದಾಬಾದ್ ಸ್ಫೋಟ, ಮೋದಿ ಟಾರ್ಗೆಟ್!; ತೀರ್ಪಿತ್ತ ನ್ಯಾಯಾಧೀಶರ ಟಿಪ್ಪಣಿ

Blast
Published on

ಅಹಮದಾಬಾದ್: ಗುಜರಾತ್​ನ ಅಹಮದಾಬಾದ್​ನಲ್ಲಿ 2008ರ ಜುಲೈ 26ರಂದು ನಡೆದ ಬಾಂಬ್ ಸರಣಿ ಸ್ಪೋಟದ ಗುರಿ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಆಗಿದ್ದರು ಎಂದು ಈ ಪ್ರಕರಣದ ತೀರ್ಪು ಪ್ರಕಟಿಸಿದ ವಿಶೇಷ ಕೋರ್ಟ್ ಟಿಪ್ಪಣಿ ಮಾಡಿದೆ. ವಿವಿಧೆಡೆ ಬಾಂಬ್ ಸ್ಪೋಟಿಸಿದರೆ ಅನೇಕರು ಗಾಯಗೊಳ್ಳುತ್ತಾರೆ. ಇವರನ್ನು ಸಮೀಪದ ಆಸ್ಪತ್ರೆಗಳಿಗೆ ಸೇರಿಸುತ್ತಾರೆ. ಇಂಥವರ ಯೋಗಕ್ಷೇಮ ವಿಚಾರಿಸಲು ಸರ್ಕಾರದ ಪ್ರಮುಖರು, ಶಾಸಕರು, ಅಧಿಕಾರಿಗಳು ಬರುತ್ತಾರೆಂದು ಎಣಿಸಿಯೇ ಎರಡು ಆಸ್ಪತ್ರೆಯ ಬಳಿಯಲ್ಲೂ ಬಾಂಬ್ ಸ್ಪೋಟಿಸಲಾಗಿತ್ತು. ಹೀಗಾಗಿ ಉಗ್ರರ ಗುರಿ ನರೇಂದ್ರ ಮೋದಿ, ಅಮಿತ್ ಷಾ, ಇನ್ನಿತರ ಶಾಸಕರು ಆಗಿದ್ದರು ಎಂದು ನ್ಯಾಯಾಧೀಶ ಎ.ಆರ್. ಪಟೇಲ್ ಅಭಿಪ್ರಾಯ ದಾಖಲಿಸಿದ್ದಾರೆ. ಈ ಬಾಂಬ್ ಸ್ಪೋಟವು ಹಿಂದು ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿದ ದುಷ್ಕೃತ್ಯ. ದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದದ ಆಡಳಿತವೇ ಇರಬೇಕೆಂಬ ಹಠದಿಂದ ಮಾಡಿದ ಹಿಂಸಾಚಾರ ಇದು ಎಂದೂ ಜಡ್ಜ್ ಹೇಳಿದ್ದಾರೆ. ಶುಕ್ರವಾರ ಪ್ರಕಟವಾದ ತೀರ್ಪಿನ ಪ್ರತಿ ಶನಿವಾರ ಲಭ್ಯವಾಗಿದ್ದು, ಅದರಲ್ಲಿ ಜಡ್ಜ್ ಅವರ ಉಲ್ಲೇಖಗಳು ದಾಖಲಾಗಿವೆ. ಈ ಪ್ರಕರಣದಲ್ಲಿ 38 ಅಪರಾಧಿಗಳಿಗೆ ವಿಶೇಷ ಕೋರ್ಟ್ ಶುಕ್ರವಾರ ಮರಣದಂಡನೆ ವಿಧಿಸಿತ್ತು. 11 ತಪ್ಪಿತಸ್ಥರಿಗೆ ಜೀವಿತಾವಧಿ ಸಜೆಯನ್ನು ಪ್ರಕಟಿಸಿತ್ತು. 56 ಮಂದಿಯ ಸಾವಿಗೆ ಕಾರಣವಾದ ಈ ಸ್ಪೋಟವನ್ನು ಇಂಡಿಯನ್ ಮುಜಾಹಿದ್ದೀನ್ (ಐಎಂ) ನಡೆಸಿತ್ತು.

38 ತಪ್ಪಿತಸ್ಥರು ಗಲ್ಲು ಶಿಕ್ಷೆಗೆ ಅರ್ಹರು: ಬಾಂಬ್ ಸ್ಫೋಟ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿದ್ದರೆ ಅಥವಾ ಮರಣದಂಡನೆಗಿಂತ ಕಡಿಮೆ ಶಿಕ್ಷೆ ವಿಧಿಸಿದ್ದರೆ ಅದು ನರಭಕ್ಷಕ ಚಿರತೆಯನ್ನು ಸಾರ್ವಜನಿಕವಾಗಿ ಬಿಟ್ಟಂತೆ ಆಗುತ್ತಿತ್ತು ಎಂದು ಶಿಕ್ಷೆ ಪ್ರಕಟಿಸಿರುವ ವಿಶೇಷ ಕೋರ್ಟ್​ನ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಇವರು ಬಿಡುಗಡೆ ಆಗಿದ್ದರೆ ಸಮಾಜದಲ್ಲಿ ಅಶಾಂತಿ ಏಳುತ್ತದೆ ಮತ್ತೆ ರಾಷ್ಟ್ರ ವಿರೋಧಿ ಚಟುವಟಿಕೆಯನ್ನು ಮುಂದುವರಿಸುತ್ತಾರೆ. ಹೀಗಾಗಿ ಇವರು ನಾಗರಿಕ ಸಮಾಜದಲ್ಲಿ ಜೀವಿಸಲು ಅರ್ಹರಲ್ಲ ಎಂದಿದ್ದಾರೆ.

ಮಾಫಿ ಸಾಕ್ಷಿ ಬಗ್ಗೆ ಅತೃಪ್ತಿ: ಅಹಮದಾಬಾದ್ ಸ್ಫೋಟ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾದ ಆರೋಪಿಯು ನೀಡಿರುವ ಸಾಕ್ಷ್ಯ ಅಸೂಯೆ ಮತ್ತು ದ್ವೇಷದಿಂದ ಕೂಡಿದೆ ಎಂದು ಈ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾದವರ ಪೈಕಿ ಮೂವರು ಆರೋಪಿಸಿದ್ದಾರೆ. ‘ನಾವಿಬ್ಬರು ಇಸ್ಲಾಂ ಧರ್ವಿುಯರಾದರೂ ಬೇರೆ ಬೇರೆ ಪಂಗಡಕ್ಕೆ ಸೇರಿದವರು. ನನಗೆ ಇಂಗ್ಲಿಷ್ ಮೇಲೆ ಇದ್ದ ಹಿಡಿತ, ಕುರಾನ್ ಶ್ಲೋಕಗಳನ್ನು ಹೇಳುತ್ತಿದ್ದ ರೀತಿ, ಜೈಲಿನಲ್ಲಿ ನಡೆಯುತ್ತಿದ್ದ ಆಟೋಟದಲ್ಲಿ ಮೊದಲಿಗನಾಗುತ್ತಿದೆ. ಇದರಿಂದ ಅಯಾಜ್ ಸೈಯದ್ (ಮಾಫಿ ಸಾಕ್ಷಿ) ನನ್ನ ಬಗ್ಗೆ ಅಸೂಯೆ ಪಡುತ್ತಿದ್ದ. ಹೀಗಾಗಿ ಆತ ನಮ್ಮ ಬಗ್ಗೆ ಪ್ರತಿಕೂಲ ಸಾಕ್ಷಿ ಹೇಳಿದ್ದಾನೆ ಎಂದು ಗಲ್ಲು ಶಿಕ್ಷೆಗೆ ಗುರಿಯಾಗಿರುವ ಶಂಷುದ್ದೀನ್ ಸಹಬುದ್ದೀನ್ ಶೇಖ್ ಆರೋಪಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net