

ವಾಷಿಂಗ್ಟನ್: ಚೀನಾ-ಭಾರತ ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸುವುದಕ್ಕಾಗಿ ಮಧ್ಯಸ್ಥಿಕೆ ವಹಿಸಲು ಅಮೆರಿಕ ಮತ್ತೊಮ್ಮೆ ಪ್ರಯತ್ನ ಮಾಡಿರುವುದನ್ನು ಸ್ವತಃ ಅಧ್ಯಕ್ಷ ಟ್ರಂಪ್ ಅವರೇ ಬಹಿರಂಗಪಡಿಸಿದ್ದಾರೆ.
ಈಗಾಗಲೇ ಕೆಲವು ದಿನಗಳ ಹಿಂದೆ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಲು ಉತ್ಸುಕವಿರುವುದಾಗಿ ಅಮೆರಿಕ ಹೇಳಿತ್ತು. ಇದನ್ನು ಭಾರತ ನಯವಾಗಿಯೇ ತಿರಸ್ಕರಿಸಿತ್ತು. ಅದೇ ವಿಷಯವನ್ನು ಟ್ರಂಪ್ ಇವತ್ತಿನ ತಮ್ಮ ಸುದ್ದಿಗೋಷ್ಠಿಯಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ.
‘‘ಚೀನಾ-ಭಾರತ ಗಡಿ ವಿವಾದ ಕುರಿತು ಮೋದಿ ಅವರೊಂದಿಗೆ ಸಂಭಾಷಣೆ ನಡೆಸಿದೆ. ಆದರೆ ಈ ಬಗ್ಗೆ ಹೆಚ್ಚು ಮಾತನಾಡಲು ಮೋದಿ ಇಷ್ಟಪಡಲಿಲ್ಲ. (ಚೀನಾಕ್ಕೆ ಸಂಬಂಧಿಸಿದಂತೆ) ಅವರು ಒಳ್ಳೆಯ ಮೂಡ್‌ನಲ್ಲಿ ಇಲ್ಲ’’ ಎಂದು ಟ್ರಂಪ್ ಹೇಳಿದರು.
ಈ ಮಧ್ಯೆ ಅಮೆರಿಕ ಮಧ್ಯಪ್ರವೇಶದ ಕುರಿತು ಮೊದಲ ಬಾರಿಗೆ ಶುಕ್ರವಾರ ಚೀನಾ ಕೂಡ ಅಧಿಕೃತ ಪ್ರತಿಕ್ರಿಯೆ ನೀಡಿದೆ. ‘‘ಈ ಗಡಿವಿವಾದವು ಚೀನಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವಿಷಯವಾಗಿದ್ದು, ಅಮೆರಿಕ ಮಧ್ಯಸ್ಥಿಕೆ ಅಗತ್ಯವಿಲ್ಲ’’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.