ಭಾರತದತ್ತ ವಿಶ್ವವೇ ತಿರುಗುವಂತೆ ಮಾಡಿದ ಮೋದಿ

_uwretouch
_uwretouch
Published on

ಪಿರಿಯಾಪಟ್ಟಣ: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯ ಕಾರಣದಿಂದ ಇಂದು ಭಾರತ ವಿಶ್ವದ ಅನೇಕ ದೇಶಗಳ ನಡುವೆ ಗಮನ ಸೆಳೆದಿದೆ ಎಂದು ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿ.ರಾಜೇಂದ್ರ ಅಭಿಪ್ರಾಯಪಟ್ಟರು.

ನರೇಂದ್ರ ಮೋದಿ ಅವರ 74ನೇ ಜನ್ಮದಿನದ ಅಂಗವಾಗಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಒಳ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಮಾತನಾಡಿದರು.

ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಗ್ಗೆ ವಿಶ್ವದ ಮುಂದುವರಿದ ರಾಷಟ್ರೆಗಳಾದ ಅಮೆರಿಕಾ, ರಷ್ಯಾ, ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನರೇಂದ್ರ ಮೋದಿ ಜನಪ್ರಿಯತೆ ಗಳಿಸಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ ಎಂದರು.

ಸಮಾನತೆ ಮತ್ತು ಭ್ರಾತೃತ್ವ ಕಲ್ಪನೆಯೊಂದಿಗೆ ದೇಶದಲ್ಲಿರುವ ಪ್ರತಿಯೊಬ್ಬರೂ ಸಮಾನರು ಎಂಬ ಧ್ಯೇಯದೊಂದಿಗೆ ದಿಟ್ಟ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಅವರು ಹಲವು ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಪಣತೊಟ್ಟಿದ್ದಾರೆ ಎಂದರು.

ಭಾರತೀಯರ ಬಹು ವರ್ಷಗಳ ಕನಸಾದ ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣವನ್ನು ಯಶಸ್ವಿಯಾಗಿ ಪೂರೈಸಿರುವ ಮೋದಿಯವರು, ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದರು. ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ಯಾವುದೇ ರೀತಿಯ ತೊಂದರೆ ಆಗದಂತೆ ಭಾರತದ ಮಿಲಿಟರಿ ಶಕ್ತಿಯನ್ನು ಸದೃಢಗೊಳಿಸುವ ಮೂಲಕ ನಾವೆಲ್ಲರೂ ನೆಮ್ಮದಿಯುತವಾದ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.

ಮಾಜಿ ಶಾಸಕ ಎಚ್.ಸಿ.ಬಸವರಾಜ್ ಮಾತನಾಡಿ, ದೇಶವನ್ನು ಕಾಯುವ ಸೈನಿಕ ಮತ್ತು ದೇಶಕ್ಕೆ ಅನ್ನ ನೀಡುವ ರೈತ ವರ್ಗಕ್ಕೆ ವಿಶೇಷ ಶಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ ಎಂದರು. ದೇಶವನ್ನು ಸದೃಢಗೊಳಿಸುವ ಜತೆಗೆ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಮುಖ್ಯ ಗುರಿಯಾಗಿದೆ ಎಂದರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅನಿಲ್, ಜಿಲ್ಲಾ ಬಿಜೆಪಿ ಪದಾಧಿಕಾರಿ ಕಿರಣ್, ನಳಿನಿ, ಟಿ.ರಮೇಶ್, ಪಿ.ಜೆ.ರವಿ, ಲೋಕಪಾಲಯ್ಯ, ಹೆಮ್ಮಿಗೆ ರವಿ, ಅರುಣ್ ಚನ್ನಬಸವರಾಜ್, ಮಾಗಳಿ ಸ್ವಾಮಿ, ಶುಭ ಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net