

ನವದೆಹಲಿ: ಫ್ರಾನ್ಸ್ನಿಂದ ಖರೀದಿಸಲಾಗಿರುವ ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್ನ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮಾರಂಭದ ಅಧಿಕೃತ ದಿನಾಂಕ ಇನ್ನೂ ಘೊಷಣೆಯಾಗಿಲ್ಲ. ಆಗಸ್ಟ್ ಕೊನೆ ವಾರ ಅಥವಾ ಸೆಪ್ಟೆಂಬರ್ನ ಮೊದಲ ವಾರದಲ್ಲಿ ಅಂಬಾಲಾ ವಾಯುನೆಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ. ಈ ವೇಳೆ ವಾಯುಪಡೆಯ ಗೋಲ್ಡನ್ ಏರೋಸ್ ಸ್ಕಾ್ವಡ್ರನ್ಗೆ ರಫೇಲ್ ವಿಮಾನಗಳನ್ನು ಸೇರ್ಪಡೆಗೊಳಿಸ ಲಾಗುತ್ತದೆ. ಕಳೆದ ಜುಲೈ 29ರಂದು ಐದು ರಫೇಲ್ ಜೆಟ್ಗಳು ಫ್ರಾನ್ಸ್ನಿಂದ ಭಾರತಕ್ಕೆ ಬಂದಿಳಿದಿವೆ. ಅವುಗಳ ಪ್ರಾಯೋಗಿಕ ಕಾರ್ಯಾಚರಣೆಯೂ ನಡೆಯುತ್ತಿದೆ.
ಕೇಂದ್ರ ಸರ್ಕಾರ 2016ರಲ್ಲಿ ಫ್ರಾನ್ಸ್ನಿಂದ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ರಫೇಲ್ ಜೆಟ್ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಈ ವರ್ಷದ ಆರಂಭದಲ್ಲೇ ರಫೇಲ್ ಜೆಟ್ಗಳ ಮೊದಲ ಬ್ಯಾಚ್ ಭಾರತಕ್ಕೆ ಬರಬೇಕಾಗಿತ್ತು. ಕರೊನಾ ಬಿಕ್ಕಟ್ಟು ಪರಿಸ್ಥಿತಿಯಿಂದಾಗಿ ಹಸ್ತಾಂತರ ಪ್ರಕ್ರಿಯೆ ವಿಳಂಬಗೊಂಡಿತ್ತು.