ಒಂದು ದೇಶ ಒಂದು ಕಾನೂನು: ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಮೋದಿ ಸುಳಿವು

narendra modi
Published on

ನವದೆಹಲಿ: ಮುಂದಿನ ವರ್ಷದ ಲೋಕಸಭೆ ಚುನಾವಣೆ ಹಾಗೂ ವರ್ಷಾಂತ್ಯದಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿರುವ ಮಧ್ಯೆ, ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದಾರೆ. ಜತೆಗೆ, ವಿಪಕ್ಷಗಳು ಚುನಾವಣೆ ಗೆಲ್ಲಲು ಉಚಿತ ಗ್ಯಾರಂಟಿ ಸ್ಕೀಮ್ಳ ಮೊರೆಹೋಗುತ್ತಿರುವುದನ್ನು ಟೀಕಿಸಿದ್ದಾರೆ.

‘ಮೇರಾ ಬೂತ್ ಸಬ್ ಸೇ ಮಜ್ಬೂತ್’ ಅಭಿಯಾನ ಅಂಗವಾಗಿ ಮಧ್ಯಪ್ರದೇಶದ ಭೋಪಾಲ್​ದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ ಮೋದಿ, ಮುಸ್ಲಿಂ ತುಷ್ಟೀಕರಣ ರಾಜಕೀಯ, ವಿಪಕ್ಷಗಳ ಮಹಾಮೈತ್ರಿ ಮತ್ತು ವಂಶಾವಳಿ ರಾಜಕೀಯದ ವಿರುದ್ಧ ಹರಿಹಾಯ್ದರು. ‘ಒಂದು ಮನೆಯಲ್ಲಿ ಒಬ್ಬ ಸದಸ್ಯನಿಗೆ ಒಂದು ಕಾನೂನು, ಇನ್ನೊಬ್ಬ ಸದಸ್ಯನಿಗೆ ಇನ್ನೊಂದು ಕಾನೂನು ಇರಲು ಸಾಧ್ಯವೇ? ಇದರಿಂದ ಮನೆಯು ಕಾರ್ಯನಿರ್ವಹಿಸಲಾಗುತ್ತದೆಯೇ? ಇಂತಹ ದ್ವಂದ್ವ ವ್ಯವಸ್ಥೆಯಿಂದ ದೇಶ ಹೇಗೆ ಕಾರ್ಯ ನಿರ್ವಹಿಸಲು ಸಾಧ್ಯ? ಎಂದು ಪ್ರಶ್ನಿಸಿದರು.

ಸಂವಿಧಾನದಲ್ಲಿಯೂ ಎಲ್ಲರಿಗೂ ಸಮಾನ ಹಕ್ಕು ಎಂಬ ಉಲ್ಲೇಖವಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಮದುವೆ, ವಿಚ್ಛೇದನ, ವಾರಸುದಾರಿಕೆ, ನಿರ್ವಹಣೆ ಮತ್ತು ಎಲ್ಲಾ ನಾಗರಿಕರಿಗೆ ಆಸ್ತಿಯ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಏಕರೂಪ ನಾಗರಿಕ ಸಂಹಿತೆ ವಿಷಯವನ್ನು ಪ್ರತಿಪಕ್ಷಗಳು ಮುಸ್ಲಿಂ ಸಮುದಾಯವನ್ನು ತಪ್ಪುದಾರಿಗೆಳೆಯಲು ಮತ್ತು ಪ್ರಚೋದಿಸಲು ಬಳಸುತ್ತಿವೆ. ವಿಪಕ್ಷಗಳದ್ದು ಮುಸ್ಲಿಂ ತುಷ್ಟೀಕರಣ ರಾಜಕಾರಣ. ನಮ್ಮ ವಿರೋಧಿಗಳು ಮುಸಲ್ಮಾನ್ ಮುಸಲ್ಮಾನ್ ಎಂದು ಜಪಿಸುತ್ತಾರೆ. ನಿಜವಾಗಿಯೂ ಅವರಲ್ಲಿ ಮುಸ್ಲಿಮರ ಹಿತಾಸಕ್ತಿ ಕಾಪಾಡಬೇಕು ಎಂಬ ಭಾವನೆಯಿದ್ದರೆ ಮುಸ್ಲಿಂ ಕುಟುಂಬಗಳು ಶಿಕ್ಷಣ-ಉದ್ಯೋಗದಲ್ಲಿ ಹಿಂದುಳಿದಿರುತ್ತಿರಲಿಲ್ಲ’ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಸಂವಿಧಾನದ 44ನೇ ವಿಧಿ ಏಕರೂಪ ನಾಗರಿಕ ಸಂಹಿತೆಯ ಅಗತ್ಯದ ಬಗ್ಗೆ ರ್ಚಚಿಸುತ್ತದೆ. 2019ರಲ್ಲಿ ಈ ನಿಲುವು ಹೊರಹಾಕಿದ್ದ ಸುಪ್ರೀಂಕೋರ್ಟ್​ನ ಪೀಠ, ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಅನುಷ್ಠಾನಗೊಳಿಸಲು ಯತ್ನಿಸಬೇಕು ಎಂದಿತ್ತು. 1956ರಲ್ಲಿ ಹಿಂದೂ ಕಾನೂನನ್ನು ಸಮಗ್ರಗೊಳಿಸಿದ ಹೊರತಾಗಿಯೂ ಏಕರೂಪ ನಾಗರಿಕ ಸಂಹಿತೆ ಖಾತರಿಪಡಿಸಲು ಸರ್ಕಾರಗಳು ವಿಫಲವಾಗಿವೆ. 1985 ರಲ್ಲಿ ಶಾ ಬಾನೋ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಹೊರತಾಗಿಯೂ, ಏಕರೂಪ ಸಂಹಿತೆ ಜಾರಿಗೆ ಸರ್ಕಾರಗಳು ಏನೂ ಮಾಡಿಲ್ಲ. ಮುಸ್ಲಿಂ ಮಹಿಳೆಯರ ಜೀವನಾಂಶದ ಹಕ್ಕನ್ನು ಎತ್ತಿ ಹಿಡಿದ ಶಾ ಬಾನೋ ಪ್ರಕರಣ, ಯುಸಿಸಿ ಅನುಷ್ಠಾನದ ದಿಕ್ಕಿನಲ್ಲಿ ಒಂದು ಹೆಜ್ಜೆ ಎಂದು ಪರಿಗಣಿಸಲಾಗಿದೆ.

ಕಾಂಗ್ರೆಸ್​ನಿಂದ ಭ್ರಷ್ಟಾಚಾರ ಗ್ಯಾರಂಟಿ: ಕರ್ನಾಟಕ ಮಾದರಿಯಲ್ಲೇ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢದಲ್ಲೂ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಭರವಸೆ ನೀಡಲು ಚಿಂತನೆ ನಡೆಸಿದೆ. ಇದು ಬಿಜೆಪಿ ಪ್ರಬಲ ಸವಾಲೊಡ್ಡುವ ಲಕ್ಷಣಗಳಿವೆ. ಹೀಗಾಗಿ, ಈ ವಿಷಯ ಪ್ರಸ್ತಾಪಿಸಿದ ಮೋದಿ, ‘ಗ್ಯಾರಂಟಿ ಸ್ಕೀಮ್ಳೇನಿದ್ದರೂ ಕಾಂಗ್ರೆಸ್ ನಾಯಕರು ಮತ್ತವರ ಕುಟುಂಬಗಳ ಅಭಿವೃದ್ಧಿಗಷ್ಟೇ. ಅವರು ನೀಡುವುದು ಭ್ರಷ್ಟಾಚಾರದ ಗ್ಯಾರಂಟಿ’ ಎಂದು ಮೋದಿ ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net