

ನವದೆಹಲಿ: ಮೋದಿ ಸರ್ಕಾರದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಹಕಾರ ಒಪ್ಪಂದವು ಪಶ್ಚಿಮ ಏಷ್ಯಾ ಯುದ್ಧಕ್ಕಾಗಿ ಇಸ್ರೇಲ್ ಸೇನೆಗೆ ಸುಮಾರು 15,000 ಭಾರತೀಯರನ್ನು ನೇಮಕ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ.
ಈ ಹಿಂದೆ ದೇಶದ ಹಲವು ಯುವಕರ ವಂಚಕ ಏಜೆಂಟರುಗಳ ಮಾತನ್ನು ನಂಬಿ ರಷ್ಯಾ ಪರ ಉಕ್ರೇನ್ ಯುದ್ಧದಲ್ಲಿ ಪಾಲ್ಗೊಂಡು ಪ್ರಾಣ ಕಳೆದುಕೊಂಡರು ಎಂದು ಅವರು ಹೇಳಿದ್ದಾರೆ.
ಇದು ಮೋದಿ ಸರ್ಕಾರದ ಯುವಕರ ವಿರೋಧಿ ನೀತಿಗಳಿಂದ ಸೃಷ್ಟಿಯಾಗಿರುವ ದೇಶದ ನಿರುದ್ಯೋಗವನ್ನು ಬಿಂಬಿಸುತ್ತದೆ ಎಂದು ಮಲ್ಲಿಕಾರ್ಜುನ್ ಖರ್ಗೆ ಪೋಸ್ಟ್ ಮಾಡಿದ್ದಾರೆ.
"ಕೌಶಲ್ಯವಿಲ್ಲದ, ಅರೆ-ಕುಶಲ ಮತ್ತು ವಿದ್ಯಾವಂತ ಯುವಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಯುದ್ಧಪೀಡಿತ ದೇಶಗಳಲ್ಲಿ ಹೆಚ್ಚಿನ ಸಂಬಳಕ್ಕಾಗಿ ಸೇವೆ ಸಲ್ಲಿಸಲು ಸಿದ್ಧರಿದ್ದಾರೆ ಎನ್ನುತ್ತಿವೆ ವರದಿಗಳು. ಇದರರ್ಥ ಉದ್ಯೋಗ ಸೃಷ್ಟಿ ಕುರಿತಾದ ನಿಮ್ಮ ಹೇಳಿಕೆಗಳು ನಿಮ್ಮ ವೈಫಲ್ಯಗಳನ್ನು ಮರೆಮಾಚಲು ಸೃಷ್ಟಿಸಿದ ಸುಳ್ಳುಗಳಲ್ಲದೆ ಬೇರೇನು ಎಂಬುದಾಗಿದೆ ವಾಗ್ದಾಳಿ ನಡೆಸಿದ್ದಾರೆ.
ಯುದ್ಧಪೀಡಿತ ದೇಶಗಳಲ್ಲಿ ಬಲವಂತವಾಗಿ ಉದ್ಯೋಗಕ್ಕೆ ಸೇರುವಂತೆ ಹರಿಯಾಣದ ಯುವಕರಿಗೆ ಒತ್ತಡ ಹಾಕಲಾಗಿದೆ. ಮುಂಬರುವ ಚುನಾವಣೆಯಲ್ಲಿ ಹರಿಯಾಣದ ಜನರು ಸೂಕ್ತ ಉತ್ತರ ಕೊಡಲಿದ್ದಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಅಕ್ಟೋಬರ್ 5 ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಯ ಪ್ರಚಾರ ಗುರುವಾರ ಸಂಜೆ ಮುಕ್ತಾಯಗೊಂಡಿದೆ. 8,821 ಶತಾಯುಷಿಗಳು ಸೇರಿದಂತೆ ಎರಡು ಕೋಟಿಗೂ ಹೆಚ್ಚು ಮತದಾರರು ಮತದಾನ ಮಾಡಲು ಸಜ್ಜಾಗಿದ್ದಾರೆ. ಬಿಜೆಪಿಯು ಸತತ ಮೂರನೇ ಬಾರಿಗೆ ಅಧಿಕಾರದ ಗುರಿಯನ್ನು ಹೊಂದಿದೆ, ಆದರೆ ಕಾಂಗ್ರೆಸ್ ಒಂದು ದಶಕದ ನಂತರ ವಿರೋಧ ಪಕ್ಷದ ನಂತರ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ.‘
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಮತದಾರರ ಓಲೈಕೆಗೆ ಕೊನೆಯ ಕ್ಷಣದಲ್ಲಿ ಪ್ರಯತ್ನ ನಡೆಸಿದವು. ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಪ್ರಚಾರದ ನೇತೃತ್ವ ವಹಿಸಿದ್ದರು, ನಾಲ್ಕು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ರಾಮ ಮಂದಿರ ವಿವಾದ ಸೇರಿದಂತೆ ಪ್ರಮುಖ ರಾಷ್ಟ್ರೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಟೀಕಿಸಿದರು.
ಗುರುವಾರ ಎಲ್ಲಾ 90 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಚುನಾವಣೆಗಾಗಿ 20,000 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಪಂಕಜ್ ಅಗರ್ವಾಲ್ ತಿಳಿಸಿದ್ದಾರೆ.