ಏರುತ್ತಿದೆ ಬಿಬಿಸಿ, ಮೋದಿ ಕ್ವೆಶ್ಚನ್ ಬಿಸಿ; ಸಾಕ್ಷ್ಯಚಿತ್ರಕ್ಕೆ ಕೇಂದ್ರ ಸರ್ಕಾರ ತಡೆ, ವಿದ್ಯಾರ್ಥಿಗಳಿಂದ ಪ್ರದರ್ಶನ

BBC
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕುರಿತು ಬ್ರಿಟಿಷ್ ಬ್ರಾಡ್​ಕಾಸ್ಟಿಂಗ್ ಕಾರ್ಪೆರೇಷನ್ (ಬಿಬಿಸಿ) ನಿರ್ವಿುಸಿರುವ ಸಾಕ್ಷ್ಯಚಿತ್ರದ ವಿವಾದ ಇನ್ನಷ್ಟು ಕಾವೇರುತ್ತಿದೆ. ವಿವಾದಾತ್ಮಕ ಡಾಕ್ಯುಮೆಂಟರಿಯ ಲಿಂಕ್​ಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿ, ಆನ್​ಲೈನ್ ಕಂಟೆಂಟ್​ಗಳನ್ನು ತಡೆಹಿಡಿದಿರುವುದರ ಹೊರತಾಗಿಯೂ ಕೆಲವೆಡೆ ವಿದ್ಯಾರ್ಥಿಗಳು ಚಿತ್ರವನ್ನು ಬಿತ್ತರಿಸಿದ್ದಾರೆ; ಇನ್ನು ಕೆಲವರು ಪ್ರದರ್ಶಿಸುವುದಾಗಿ ಹೇಳಿದ್ದಾರೆ. ಈ ನಡುವೆ, ಡಾಕ್ಯುಮೆಂಟರಿಯ 2ನೇ ಭಾಗ ಮಂಗಳವಾರ ಬ್ರಿಟನ್​ನಲ್ಲಿ ಸ್ಥಳೀಯ ಕಾಲಮಾನ ರಾತ್ರಿ 9 ಗಂಟೆಗೆ ಪ್ರಸಾರವಾಗಲು ನಿಗದಿಯಾಗಿದೆ. ಮೊದಲನೇ ಡಾಕ್ಯುಮೆಂಟರಿಯನ್ನು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದ್ದಾರೆ. ದೆಹಲಿಯ ಜವಾಹರಲಾಲ್ ನೆಹರೂ ವಿವಿ (ಜೆಎನ್​ಯುು) ವಿದ್ಯಾರ್ಥಿ ಸಂಘ ಚಿತ್ರ ಪ್ರದರ್ಶನ ಮಾಡುವುದಾಗಿ ಘೋಷಿಸಿದೆ. ಕೇರಳದಲ್ಲಿ ಗಣರಾಜ್ಯ ದಿನದಂದು ಇದನ್ನು ಪ್ರದರ್ಶಿಸುವುದಾಗಿ ಹಲವು ಸಂಘಟನೆಗಳು ಹೇಳಿವೆೆ. ಕೆಲ ದಿನಗಳ ಹಿಂದೆ ಡಾಕ್ಯುಮೆಂಟರಿಯ ಲಿಂಕ್ ಅನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದ ತೃಣಮೂಲ ಕಾಂಗ್ರೆಸ್​ನ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರ, ಮಂಗಳವಾರ ಮತ್ತೊಂದು ಲಿಂಕ್ ಶೇರ್ ಮಾಡಿದ್ದಾರೆ. ಆಖೆರ್ೈವ್.ಆರ್ಗ್​ನಿಂದ ಅವರು ಶೇರ್ ಮಾಡಿದ್ದ ಲಿಂಕ್ ಭಾನುವಾರ ನಿಷ್ಕ್ರಿಯವಾಗಿತ್ತು.

ಅಮೆರಿಕ ನಿಲುವು: ವಿವಾದದ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೖೆಸ್ ಹೇಳಿದ್ದಾರೆ. ಭಾರತ ಮತ್ತು ಅಮೆರಿಕ ಸಮಾನ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಉಭಯ ದೇಶಗಳ ನಡುವೆ ನಿಕಟ ರಾಜಕೀಯ ಸಂಬಂಧವಿದೆ, ಆರ್ಥಿಕ ಬಾಂಧವ್ಯಗಳಿವೆ. ಅಮೆರಿಕ ಮತ್ತು ಭಾರತದ ಜನರ ನಡುವೆ ಆಳವಾದ ಬಾಂಧವ್ಯವಿದೆ ಎಂದು ಹೇಳಿದರು.

ಕೇರಳದಲ್ಲಿ ರಾಜಕೀಯ ಬಿರುಗಾಳಿ: ನಿಷೇಧವಿದ್ದರೂ ಡಾಕ್ಯುಮೆಂಟರಿಯನ್ನು ರಾಜ್ಯದಾದ್ಯಂತ ಪ್ರದರ್ಶಿಸುವುದಾಗಿ ಸಿಪಿಐ(ಎಂ) ಯುವ ಘಟಕ ಡಿವೈಎಫ್​ಐ ಘೋಷಿಸಿದೆ. ಡಿವೈಎಫ್​ಐ ಫೇಸ್​ಬುಕ್ ಪೇಜ್​ನಲ್ಲಿ ತನ್ನ ಉದ್ದೇಶವನ್ನು ಪ್ರಕಟಿಸಿದೆ. ಇದರ ಬೆನ್ನಲ್ಲೇ, ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಎಸ್​ಎಫ್​ಐ, ಕಾಂಗ್ರೆಸ್ ಪಕ್ಷದ ಯುವ ವಿಭಾಗವಾದ ಯೂತ್ ಕಾಂಗ್ರೆಸ್, ಅಲ್ಪಸಂಖ್ಯಾತ ಘಟಕ ಮತ್ತಿತರ ಸಂಘಟನೆಗಳು ಕೂಡ ಗಣರಾಜ್ಯ ದಿನದಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಬಿಸಿ ಚಿತ್ರ ಪ್ರದರ್ಶಿಸುವುದಾಗಿ ಘೋಷಿಸಿವೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯ ಘಟಕ, ಇಂಥ ಸಾಹಸವನ್ನು ನಿಲ್ಲಿಸಲು ಮಧ್ಯಪ್ರವೇಶಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಮನವಿ ಮಾಡಿದೆ.

ಏನಿದು ವಿವಾದ?: ಬಿಬಿಸಿ ಜ.17ರಂದು ‘ದಿ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರದ ಮೊದಲ ಭಾಗವನ್ನು ಪ್ರಸಾರ ಮಾಡಿತ್ತು. 2002ರಲ್ಲಿ ಗುಜರಾತ್​ನಲ್ಲಿ ಗೋಧ್ರಾ ಹತ್ಯಾಕಾಂಡದ ನಂತರ ರಾಜ್ಯದಾದ್ಯಂತ ನಡೆದ ಹಿಂಸಾಚಾರ ಕುರಿತ 59 ನಿಮಿಷದ ಡಾಕ್ಯುಮೆಂಟರಿ ಇದಾಗಿದ್ದು, ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪಾತ್ರದತ್ತ ಅದು ಬೆರಳು ಮಾಡಿದೆ.

ಕೆಲವರಿಗೆ ಇನ್ನೂ ಬಿಳಿಯ ಆಡಳಿತಗಾರರೇ ಯಜಮಾನರಂತೆ ಕಾಣುತ್ತಿದೆ. ವಸಾಹತುಶಾಹಿ ಅಮಲಿನಿಂದ ಇನ್ನೂ ಹೊರಬಂದಿಲ್ಲ. | ಕಿರಣ್ ರಿಜಿಜು ಕೇಂದ್ರ ಕಾನೂನು ಸಚಿವ

ವಾಪಸ್ ಪಡೆದ ಆರ್ಖೈವ್: ಅಮೆರಿಕದ ಎನ್​ಜಿಒ ದಿ ಇಂಟರ್​ನೆಟ್ ಆರ್ಖೆವ್ ಡಾಕ್ಯುಮೆಂಟರಿಯ ಮೊದಲ ಭಾಗ ವಾಪಸ್ ಪಡೆದಿದೆ. ಇದೊಂದು ‘ಭಾರತ-ವಿರೋಧಿ ಕಸ’ ಹಾಗೂ ‘ಪ್ರಚಾರದ ಸರಕು’ ಎಂದಿದ್ದ ಭಾರತ ಸಾಮಾಜಿಕ ್ಜಾಲತಾಣಗಳಿಂದ ತೆಗೆಯುವಂತೆ ನಿರ್ದೇಶನ ನೀಡಿತ್ತು.

ಸತ್ಯ ಬಹಿರಂಗವಾಗಲೇ ಬೇಕು: ಸತ್ಯ ಯಾವತ್ತಿದ್ದರೂ ಸತ್ಯವೇ. ಅದು ಒಂದಲ್ಲ ಒಂದು ದಿನ ಬಹಿರಂಗ ವಾಗಲೇಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ. ಬಿಬಿಸಿ ಸಾಕ್ಷ್ಯಚಿತ್ರವನ್ನು ಅವರು ಬೆಂಬಲಿಸಿದ್ದಾರೆ. ‘ಮಾಧ್ಯಮವನ್ನು ಎಷ್ಟೇ ನಿಷೇಧಿಸಿದರೂ ಹಾಗೂ ಇ.ಡಿ. ಮತ್ತು ಸಿಬಿಐನಂಥ ಸಂಸ್ಥೆಗಳನ್ನು ಜನರ ವಿರುದ್ಧ ಬಳಸುವದರಿಂದ ಸತ್ಯ ಹೊರಬರುವುದನ್ನು ದಮನಿಸಲಾಗದು. ಸತ್ಯವನ್ನು ಎಲ್ಲ ಕಾಲಕ್ಕೂ ಬಚ್ಚಿಡಲು ಸಾಧ್ಯವಿಲ್ಲ ಎನ್ನುವುದು ಭಗವದ್ಗೀತೆ, ಉಪನಿಷತ್​ಸಹಿತ ನಮ್ಮ ಧಾರ್ವಿುಕ ಗ್ರಂಥಗಳನ್ನು ಓದಿದವರಿಗೆ ಗೊತ್ತಾಗುತ್ತದೆ’ ಎಂದಿದ್ದಾರೆ. ಈ ನಡುವೆ, ಬಿಬಿಸಿ ಡಾಕ್ಯುಮೆಂಟರಿಗೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೇರಳದ ಮಾಜಿ ಸಿಎಂ ಎ.ಕೆ. ಆಂಟನಿ ಪುತ್ರ ಅನಿಲ್ ವಿರೋಧ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net