ಜಿಲ್ಲೆಗೊಂದು ಮಾದರಿ ಕಾಲೇಜು: ಪದವಿ, ಇಂಜಿನಿಯರಿಂಗ್ ಕಾಲೇಜು ಉನ್ನತೀಕರಣ; ಹಿಂದಿನ ಬಿಜೆಪಿ ಸರ್ಕಾರದ ಕೆಐಟಿ ಯೋಜನೆಗೆ ಕೊಕ್

Model School
Published on

| ಎನ್.ಎಲ್. ಶಿವಮಾದು ಬೆಂಗಳೂರು 
ಬಿಜೆಪಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಕೆಐಟಿ ಮಾಡೆಲ್ ಯೋಜನೆಯನ್ನು ಕೈಬಿಟ್ಟು ರಾಜ್ಯದ ಪ್ರತಿ ಜಿಲ್ಲೆಗೊಂದು ಪಾಲಿಟೆಕ್ನಿಕ್, ಪದವಿ ಕಾಲೇಜು ಮತ್ತು 10 ಇಂಜಿನಿಯರಿಂಗ್ ಕಾಲೇಜುಗಳನ್ನು ಮಾದರಿ ಕಾಲೇಜುಗಳನ್ನಾಗಿ ಅಭಿವೃದ್ಧಿ ಪಡಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಉತ್ತಮ ಕಟ್ಟಡ, ಮೂಲಸೌಕರ್ಯ, ಬೋಧನಾ ಸಿಬ್ಬಂದಿ, ಗ್ರಂಥಾಲಯ, ಪ್ರಯೋಗಾಲಯ, ಕೌಶಲ ಕೇಂದ್ರ ಸೇರಿ ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡು ಉನ್ನತೀಕರಣ ಮಾಡಲಾಗುತ್ತದೆ. ಆಯಾ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಸಂಪರ್ಕ ಸೌಲಭ್ಯವಿರುವ ಒಂದು ಕಾಲೇಜು ಆಯ್ಕೆ ಮಾಡಿಕೊಂಡು ಅಭಿವೃದ್ಧಿ ಪಡಿಸಲಾಗುತ್ತದೆ. ಆ ಜಿಲ್ಲೆಯ ಹೆಚ್ಚಿನ ಜನರು ಸುಲಭವಾಗಿ ತಲುಪಿ ಓದಲು ಸಹಕಾರಿಯಾಗುವಂಥ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಜಿಲ್ಲೆಗೊಂದು ಕಾಲೇಜು: ರಾಜ್ಯದಲ್ಲಿ ಪ್ರಸ್ತುತ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 102 ಪಾಲಿಟೆಕ್ನಿಕ್ ಮತ್ತು 16 ಇಂಜಿನಿಯರಿಂಗ್ ಕಾಲೇಜುಗಳಿವೆ. ಇದರಲ್ಲಿ ಜಿಲ್ಲೆಗೊಂದರಂತೆ 31 ಪದವಿ ಕಾಲೇಜು, ಪಾಲಿಟೆಕ್ನಿಕ್ ಮತ್ತು 10 ಇಂಜಿನಿಯರಿಂಗ್ ಕಾಲೇಜುಗಳನ್ನು ಮೊದಲ ಹಂತದಲ್ಲಿ ಮಾದರಿ ಕಾಲೇಜುಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.

1,700 ಕೋಟಿ ರೂ. ಯೋಜನೆ: ಯೋಜನೆ ಕೈಗೆತ್ತಿಕೊಳ್ಳುವ ಸಂಬಂಧ ವಿಶ್ವ ಬ್ಯಾಂಕ್ ಪ್ರತಿನಿಧಿಗಳೊಂದಿಗೆ ರ್ಚಚಿಸಲಾಗಿದೆ. ಅಂದಾಜು 1,500 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಮತ್ತೆ 200 ಕೋಟಿ ರೂ. ಜಾಸ್ತಿಯಾಗುವ ಸಾಧ್ಯತೆಗಳಿದ್ದು, 1,700 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ರ್ಚಚಿಸಲಾಗಿದೆ. ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಯೋಜನೆಯನ್ನು ಅಂತಿಮಗೊಳಿಸಿ ಸದ್ಯದಲ್ಲಿಯೇ ಘೋಷಿಸುವ ಸಾಧ್ಯತೆಗಳಿವೆ.

ಗುಣಮಟ್ಟದ ಶಿಕ್ಷಣ ಉದ್ಯೋಗಾವಕಾಶ: ರಾಜ್ಯದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ) ಹೊರತುಪಡಿಸಿ ಉಳಿದ ಕಾಲೇಜುಗಳಲ್ಲಿ ಬೋಧಕರ ಕೊರತೆ, ಪ್ರಯೋಗಾಲಯ, ಉಪಕರಣಗಳು ಮತ್ತು ಪ್ಲೇಸ್​ವೆುಂಟ್ ಇಲ್ಲದ ಕಾರಣ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಗುಣಾತ್ಮಕ ಶಿಕ್ಷಣದ ಜತೆಗೆ ಉದ್ಯೋಗ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ ಎನ್ನುತ್ತಾರೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್.

ಜಿಲ್ಲೆಗೊಂದು ಮಾದರಿ ಕಾಲೇಜು ಅಭಿವೃದ್ಧಿಗೆ ವಿಶ್ವ ಬ್ಯಾಂಕ್ ಸಹಯೋಗದಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ಸರ್ಕಾರಿ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ, ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. | ಡಾ.ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ

ಕೆಐಟಿ ಮಾದರಿ ಕೈಬಿಟ್ಟ ಸರ್ಕಾರ

ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಮಾದರಿಯಲ್ಲಿ ರಾಜ್ಯದ 7 ಇಂಜಿನಿಯರಿಂಗ್ ಕಾಲೇಜುಗಳನ್ನು ಕೆಐಟಿ ಪರಿಕಲ್ಪನೆಯಲ್ಲಿ ಅಭವೃದ್ಧಿಗೊಳಿಸುವ ಹಿಂದಿನ ಬಿಜೆಪಿ ಸರ್ಕಾರದ ಯೋಜನೆಯನ್ನು ಹಾಲಿ ಸರ್ಕಾರ ಕೈಬಿಟ್ಟಿದೆ. 7ರ ಬದಲಾಗಿ 10 ಇಂಜಿನಿಯರಿಂಗ್ ಕಾಲೇಜುಗಳನ್ನು ಮಾದರಿ ಕಾಲೇಜುಗಳನ್ನಾಗಿ ಅಭವೃದ್ಧಿಪಡಿಸಲು ನಿರ್ಧರಿಸಿದೆ. ಪರಿಣಾಮ, ಕೆಐಟಿ ಕನಸು ಕಾಣುತ್ತಿದ್ದ ಕಲಬುರಗಿ, ಹಾವೇರಿ, ಉತ್ತರ ಕನ್ನಡ, ಕೆ.ಆರ್. ಪೇಟೆ, ಕೊಡಗು ಮತ್ತು ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ನಿರಾಸೆಯಾಗಿದೆ. ಹಿಂದಿನ ಸರ್ಕಾರವು ಯೋಜನೆಯನ್ನಷ್ಟೇ ಘೋಷಿಸಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಯಾವುದೇ ರೀತಿಯಲ್ಲಿ ಉಪಯೋಗವಾಗಿರಲಿಲ್ಲ. ನಾವು ಅನುದಾನ ಜತೆಗೆ ಯೋಜನೆ ಘೋಷಿಸುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net