ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ ಮಾಕ್ ಡ್ರಿಲ್

Raksha University Mock Drill
ಶಿವಮೊಗ್ಗ ರಾಗಿಗುಡ್ಡದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಾಕ್ ಡ್ರಿಲ್ ನಡೆಸಿದರು.
Published on

ಶಿವಮೊಗ್ಗ: ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಯುದ್ಧ ಸನ್ನದ್ಧ ಭಾಗವಾಗಿ ರಾಗಿಗುಡ್ಡದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಕ್ ಡ್ರಿಲ್ ನಡೆಯಿತು.

ಶತ್ರುಗಳ ದಾಳಿ ಬಗ್ಗೆ ಎಚ್ಚರಿಕೆಯ ಸೈರನ್ ಮೊಳಗುತ್ತಿದ್ದಂತೆ ವಿವಿ ನಿರ್ದೇಶಕಿ ಕಾವೇರಿ ಟಂಡನ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ವರಕ್ಷಣೆ ತಾಲೀಮು ನಡೆಸಿದರು. ವೈರಿಗಳ ದಾಳಿ ವೇಳೆ ಅಡಗುವಿಕೆ, ಗಾಯಗೊಂಡವರ ತೆರವುಗೊಳಿಸುವುದು, ಹಿರಿಯರು, ಮಕ್ಕಳನ್ನು ರಕ್ಷಿಸುವುದು, ಬಯಲು ಪ್ರದೇಶದಲ್ಲಿ ದಾಳಿಯಿಂದ ರಕ್ಷಣೆ ಬಗ್ಗೆ ಭರ್ಜರಿ ತಾಲೀಮು ನಡೆಯಿತು. ದಾಳಿ ವೇಳೆ ಗಾಯಗೊಂಡವರನ್ನು ಹೊತ್ತು ತರುವುದು, ಪ್ರಾಥಮಿಕ ಚಿಕಿತ್ಸೆ ನೀಡುವ ಜತೆಗೆ ರಾತ್ರಿ ವೇಳೆ ಬಾಂಬ್ ದಾಳಿ ನಡೆದರೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಸ್ವರಕ್ಷಣೆ ತಾಲೀಮು ಮಹಾಭಾರತದಲ್ಲಿನ ಪರಿಕಲ್ಪನೆ. ಇಸ್ರೇಲ್ನಲ್ಲಿ ಶಾಲಾ ಹಂತದಲ್ಲೇ ಸ್ವರಕ್ಷಣೆ ತಾಲೀಮು ಮಾಡಿಸಲಾಗುತ್ತದೆ. ಅಲ್ಲಿ ಸದಾ ಯುದ್ಧ ಭೀತಿ ಇರುತ್ತದೆ. ಯುದ್ಧದ ಸಂದರ್ಭದಲ್ಲಿ ನಾಗರಿಕರ ರಕ್ಷಣೆಗೆ ತಾಲೀಮು ಅನಿವಾರ್ಯ. ನಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಜತೆಗೆ ಜತೆಯಲ್ಲಿರುವವರನ್ನು ರಕ್ಷಿಸಲು ಇದು ನೆರವಾಗುತ್ತದೆ. ಮಹಾಭಾರತದಲ್ಲಿ ಇದು ನಕುಲ ನೀತಿ ಎಂದು ಬಳಕೆಯಲ್ಲಿತ್ತು ಎಂದು ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ರಕ್ಷಣಾ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಿದ್ಧಾರ್ಥ ತಿಳಿಸಿದರು. ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಲಿಂಗಪ್ಪ ಅಂಗಡಿ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡಿದರು. ಯುದ್ಧ ಸಂದರ್ಭದಲ್ಲಿ ಸೈನಿಕರಿಗೆ ಪರೋಕ್ಷವಾಗಿ, ಗಾಯಾಳುಗಳಿಗೆ ಚಿಕಿತ್ಸೆ ಕೊಡಲು ನೆರವಾಗುವುದು, ರಾತ್ರಿ ವೇಳೆ ಬಾಂಬ್ ದಾಳಿಯಿಂದ ರಕ್ಷಣೆಗೆ ಸಾಮೂಹಿಕವಾಗಿ ವಿದ್ಯುತ್ ಬೆಳಕು ಆರಿಸುವ ಬಗ್ಗೆಯೂ ತಿಳಿಸಿಕೊಡಲಾಯಿತು.

ದೇಶಾದ್ಯಂತ ಮಾಕ್ ಡ್ರಿಲ್ ನಡೆಯುತ್ತಿದೆ. ಸೈರನ್ ಕೂಗುತ್ತಿದ್ದಂತೆ ತರಗತಿಯಲ್ಲಿ ಕುಳಿತ ವಿದ್ಯಾರ್ಥಿಗಳು ರಕ್ಷಣೆ ಪಡೆದರು. ಗಾಯಾಳುಗಳ ರಕ್ಷಣೆ, ಸುರಕ್ಷಿತ ಸ್ಥಳಗಳಿಗೆ ಅವರನ್ನು ರವಾನಿಸುವುದು, ತುರ್ತು ಸಂದರ್ಭ ಬಯಲಿನಲ್ಲಿ ರಕ್ಷಣೆ ಪಡೆಯುವ ವಿಧಾನಗಳ ತಾಲೀಮು ನಡೆಸಲಾಯಿತು. -ಡಾ. ಕಾವೇರಿ ಟಂಡನ್, ರಾಷ್ಟ್ರೀಯ ರಕ್ಷಾ ವಿವಿ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net