ಮೊಬೈಲ್​ಫೋನ್​ ಸಂದೇಶವೂ ಡೆತ್​ನೋಟ್!

Death note
Published on

ಬೆಂಗಳೂರು: ಸಾಯುವ ಮುನ್ನ ಬರೆದ ಮರಣಪತ್ರ ಬರವಣಿಗೆಯಲ್ಲೇ ಇರಬೇಕೆಂದೇನಿಲ್ಲ. ಮೊಬೈಲ್ ಸಂದೇಶವೂ ಡೆತ್​ನೋಟ್ ಎಂದೇ ಪರಿಗಣಿಸಬೇಕಾಗುತ್ತದೆ. ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡು, ಸಂದೇಶದ ಸತ್ಯಾಸತ್ಯತೆ ಪೊಲೀಸರ ತನಿಖೆಯಲ್ಲಿ ಸಾಬೀತಾಗಬೇಕಾಗುತ್ತದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಕಾನೂನು ತಜ್ಞರು ಹೇಳಿದ್ದಾರೆ. ವ್ಯಕ್ತಿ ಸಾಯುವ ಮುನ್ನ ತನ್ನ ಮೊಬೈಲ್​ನಿಂದ ಮತ್ತೊಬ್ಬರಿಗೆ ಸಂದೇಶ ಕಳುಹಿಸಿದ್ದಾನೆ ಎಂದಾಗ ಅದನ್ನೂ ಡೆತ್​ನೋಟ್ ಎಂದೇ ಪರಿಗಣಿಸಬಹುದಾಗಿದೆ. ಅದು ಮೃತ ವ್ಯಕ್ತಿಯ ಅಂತಿಮ ಹೇಳಿಕೆಯಾಗಿದ್ದು, ಅದನ್ನು ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 32ರ ಅನುಸಾರ ಅಂಗೀಕರಿಸಬಹುದಾಗಿದೆ. ಇಂಥ ಸಂದರ್ಭಗಳಲ್ಲಿ ಮೃತ ವ್ಯಕ್ತಿ ಆರೋಪಿಸಿರುವ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆ ಪ್ರಚೋದನೆ) ಪ್ರಕರಣ ದಾಖಲಿಸಿಕೊಳ್ಳಬೇಕಾಗುತ್ತದೆ. ಮೃತನ ಸಂದೇಶದ ಮೇಲೆಯೇ ಪ್ರಕರಣ ನಿಂತಿರುವುದರಿಂದ ಅದನ್ನು ಸಾಕ್ಷಿಯಾಗಿ ಪರಿಗಣಿಸಿ, ಅದರ ಆಧಾರದಲ್ಲಿಯೇ ತನಿಖೆ ನಡೆಸಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕ್ರಮಬದ್ಧ ಸಾಕ್ಷಿ: ವಾಟ್ಸ್​ಆಪ್ ಸಂದೇಶವನ್ನು ಖಂಡಿತವಾಗಿಯೂ ಸಾಕ್ಷಿಯಾಗಿ ಪರಿಗಣಿಸಬಹುದು. ಆದರೆ, ಆ ಸಂದೇಶ ಯಾರು ಕಳುಹಿಸಿದ್ದಾರೆ, ಹೇಗೆ ಕಳುಹಿಸಿದ್ದಾರೆ, ನಿಜಕ್ಕೂ ಮೃತ ವ್ಯಕ್ತಿಯೇ ಕಳುಹಿಸಿರುವ ಸಂದೇಶವೇ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬರಬೇಕಾಗುತ್ತದೆ. ವ್ಯಕ್ತಿ ಸಾಯುವ ಮುನ್ನ ನಡೆಸಿದ್ದಾನೆ ಎನ್ನಲಾದ ಸಂವಹನವನ್ನು (ಬರವಣಿಗೆ ಅಥವಾ ಧ್ವನಿ ರೂಪದಲ್ಲಿ) ಕ್ರಮಬದ್ಧ ಸಾಕ್ಷಿ ಎಂದು ಪರಿಗಣಿಸಬಹುದು. ಸಂದೇಶದ ಸತ್ಯಾಸತ್ಯತೆ ಏನಿದ್ದರೂ ಪೊಲೀಸ್ ತನಿಖೆಯಲ್ಲಿ ಸಾಬೀತಾಗಬೇಕಾಗುತ್ತದೆ ಎಂದು ಹೈಕೋರ್ಟ್ ಹಿರಿಯ ವಕೀಲ ಡಿ.ಆರ್.ರವಿಶಂಕರ್ ಮಾಹಿತಿ ನೀಡುತ್ತಾರೆ.

ಸುಮೋಟೋ ಕೇಸ್: ಮೃತ ವ್ಯಕ್ತಿ ಕಳುಹಿಸಿದ್ದಾನೆ ಎನ್ನಲಾದ ಸಂದೇಶವನ್ನು ದೂರು ಎಂದು ಪರಿಗಣಿಸಿ ಪೊಲೀಸರೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬಹುದು. ವ್ಯಕ್ತಿಯ ಮರಣಪೂರ್ವ ಹೇಳಿಕೆ ಅಥವಾ ಡೆತ್​ನೋಟ್​ನಲ್ಲಿ ಯಾರ ವಿರುದ್ಧವಾದರೂ ಆರೋಪ ಮಾಡಿದ್ದರೆ, ಅದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವಾಗುತ್ತದೆ. ಅದೊಂದು ಕಾಗ್ನಿಜಬಲ್ (ಸಂಜ್ಞೇಯ) ಅಪರಾಧ ಕೃತ್ಯವಾಗುತ್ತದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೆತ್ತಿಕೊಳ್ಳಬಹುದು. ಆದರೆ ಬಂಧಿಸುವ ಮುನ್ನ ಆ ಸಂದೇಶದ ನೈಜತೆಯ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸಬಹುದು ಎನ್ನುತ್ತಾರೆ ಖ್ಯಾತ ವಕೀಲ ಸಿ.ಎಚ್.ಹನುಮಂತರಾಯ.

ಸಾಬೀತು ಕಷ್ಟಸಾಧ್ಯ: ಮೊಬೈಲ್​ನಲ್ಲಿ ಕಳುಹಿಸಿರುವ ಸಂದೇಶಗಳನ್ನು ಆತನೇ ಬರೆದಿದ್ದಾನೆ ಎಂದು ದೃಢವಾಗಿ ಹೇಳಲಾಗುವುದಿಲ್ಲ. ಹೀಗಾಗಿ ಪ್ರಚೋದನೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದನ್ನು ಸಾಬೀತುಪಡಿಸುವುದು ಸುಲಭದ ಮಾತಲ್ಲ ಎಂದು ಎಫ್​ಎಸ್​ಎಲ್ ತಜ್ಞ ದಿನೇಶ್ ಹೇಳುತ್ತಾರೆ. ರೂಮ್ಲ್ಲಿ ಪತ್ತೆಯಾದ ವಸ್ತುಗಳು, ಮೃತನ ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ. ನಾನು ಸಾವಿರಾರು ಆತ್ಮಹತ್ಯೆ ಪ್ರಕರಣಗಳನ್ನು ಗಮನಿಸಿದ್ದೇನೆ. ಕೊಲೆ ಮಾಡಿಯೂ ಆತ್ಮಹತ್ಯೆ ಎಂದು ಬಿಂಬಿಸಿರುವ ಹಲವು ಕೇಸ್​ಗಳಿವೆ. ಹೀಗಾಗಿ ತನಿಖೆ ನಡೆಸಿ ಸಾವಿಗೆ ನಿಖರ ಕಾರಣ ತಿಳಿದುಕೊಳ್ಳಬೇಕಾಗುತ್ತದೆ. ಇಂತಹ ಪ್ರಕರಣದಲ್ಲಿ ವೈಜ್ಞಾನಿಕವಾಗಿ ಎಲ್ಲ ಆಯಾಮಗಳಲ್ಲೂ ಪರಿಶೀಲಿಸಿ ಹೇಳಬೇಕಾಗುತ್ತದೆ ಎಂದವರು ತಿಳಿಸುತ್ತಾರೆ.

ಜಾಮೀನು ರದ್ದುಗೊಳಿಸಿದ್ದ ಹೈಕೋರ್ಟ್: ವರದಕ್ಷಿಣೆಗಾಗಿ ಕೊಲೆ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರು ಸಾಯುವ ಮುನ್ನ ನೆರೆಮನೆಯವರಿಗೆ ಕಳುಹಿಸಿದ್ದ ಧ್ವನಿ ಸಂದೇಶವನ್ನು ಪರಿಗಣಿಸಿದ್ದ ಹೈಕೋರ್ಟ್, ಮೃತಳ ಪತಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನನ್ನು ಇತ್ತೀಚೆಗಷ್ಟೇ ರದ್ದುಪಡಿಸಿತ್ತು. ನನಗೆ ಯಾವುದೇ ರೀತಿಯ ಅಪಾಯವಾದರೂ ಅದಕ್ಕೆ ನನ್ನ ಪತಿಯೇ ಹೊಣೆ ಎಂದು ವಾಯ್್ಸ ನೋಟ್ ಕಳುಹಿಸಿದ್ದ ಮಹಿಳೆ, ಅದೇ ದಿನ ಸುಟ್ಟಗಾಯಗಳಿಂದ ಮೃತಪಟ್ಟಿದ್ದರು. ಸಾಯುವ ಮುನ್ನ ನೆರೆಮನೆಯವರಿಗೆ ಮಹಿಳೆ ಧ್ವನಿ ಸಂದೇಶ ಕಳುಹಿಸಿದ್ದಾಳೆ ಎಂದಾಗ ಅದು ಡೈಯಿಂಗ್ ಡಿಕ್ಲರೇಷನ್ ಎನಿಸಿಕೊಳ್ಳುತ್ತದೆ ಎಂದು ಹೈಕೋರ್ಟ್ ಹೇಳಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net