ಮೊಬೈಲ್ ಗೀಳಿನಿಂದ ಯುವ ಮನಸ್ಸಿಗೆ ಘಾಸಿ

college
ಶಿವಮೊಗ್ಗ ಕಸ್ತೂರಬಾ ಕಾಲೇಜಿನ ವಿದ್ಯಾರ್ಥಿನಿ ಸಂಘ, ಕ್ರೀಡಾ ವೇದಿಕೆ, ಎನ್‌ಎಸ್‌ಎಸ್ ಘಟಕಗಳನ್ನು ಜಿ.ಎಸ್.ನಾರಾಯಣ ರಾವ್ ಉದ್ಘಾಟಿಸಿದರು. ಎಸ್.ಎನ್.ನಾಗರಾಜ, ಡಾ. ವಿನಯಾ ಶ್ರೀನಿವಾಸ, ಎಸ್.ಆರ್.ವೆಂಕಟೇಶ್, ಸಿ.ತಿಪ್ಪೇಸ್ವಾಮಿ ಇತರರಿದ್ದರು.
Published on

ಶಿವಮೊಗ್ಗ: ಆಧುನೀಕರಣದ ಭರಾಟೆಗೆ ಸಿಲುಕಿರುವ ಯುವಪೀಳಿಗೆಯ ಮನಸ್ಸು ಕಲುಷಿತಗೊಳ್ಳುತ್ತಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಕಳವಳ ವ್ಯಕ್ತಪಡಿಸಿದರು.

ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿನಿ ಸಂಘ, ಕ್ರೀಡಾ ವೇದಿಕೆ, ಎನ್‌ಎಸ್‌ಎಸ್ ಘಟಕಗಳಿಗೆ ಚಾಲನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೇ ರಂಗದಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳದವರು ಇನ್ನೊಬ್ಬರಿಗೆ ಎಂದಿಗೂ ಕಲಿಸಲಾರರು. ಭವಿಷ್ಯದ ಪೀಳಿಗೆಯನ್ನು ಮುನ್ನಡೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮೊಬೈಲ್ ಗೀಳು ಯುವ ಮನಸ್ಸಿನ ಹಾದಿ ತಪ್ಪಿಸುತ್ತಿದೆ. ನಾವಿಂದು ಕುಟುಂಬ ಪದ್ಧತಿಯಿಂದ ವಿಮುಖರಾಗಿದ್ದೇವೆ. ವಿಪುಲ ಅವಕಾಶಗಳ ಬೆನ್ನತ್ತಿ ಹೋಗುವಾಗ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ತುಂಬು ಕುಟುಂಬದ ಜೀವನ ಎಂಬ ಕಲ್ಪನೆಯಿಂದ ಹೊರಬಂದಿದ್ದೇವೆ ಎಂದರು.

ಸಂಸ್ಕಾರ ಕಲಿತ ವ್ಯಕ್ತಿ ಎಂದಿಗೂ ಭ್ರಷ್ಟನಾಗುವುದಿಲ್ಲ. ಮಕ್ಕಳನ್ನು ಸರಿ ದಾರಿಗೆ ತರುವ ಪ್ರಯತ್ನದಲ್ಲಿ ತಾಯಿ ಪಾತ್ರ ದೊಡ್ಡದು. ಎಂತಹ ಸವಾಲುಗಳನ್ನೂ ಎದುರಿಸುವ ಶಕ್ತಿ ಮಹಿಳೆಯರು ಹೊಂದಿದ್ದಾರೆ. ಸಂಸ್ಕಾರಕ್ಕೆ ಮತ್ತೊಂದು ಹೆಸರೇ ಸ್ತ್ರೀ ಎಂದು ತಿಳಿಸಿದರು.

ಸುಬ್ಬಯ್ಯ ಸಮೂಹ ಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿನಯಾ ಶ್ರೀನಿವಾಸ ಮಾತನಾಡಿ, ನಮ್ಮ ಸಮಗ್ರ ಜೀವನ ವಿದ್ಯಾರ್ಥಿ ಜೀವನದ ಮೇಲೆ ಅವಲಂಬಿತವಾಗಿದೆ. ಪರಿಶ್ರಮ ವಹಿಸಿ ಮುನ್ನಡೆಯಬೇಕು. ಪ್ರಾಮಾಣಿಕತೆ ಮತ್ತು ಜ್ಞಾನವು ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಾಚಾರ್ಯ ಎಸ್.ಆರ್.ವೆಂಕಟೇಶ್, ಉಪಪ್ರಾಚಾರ್ಯ ಸಿ.ತಿಪ್ಪೇಸ್ವಾಮಿ, ವಿದ್ಯಾರ್ಥಿನಿ ಸಂಘದ ಅಧ್ಯಕ್ಷೆ ಅನನ್ಯಾ, ಕಾರ್ಯದರ್ಶಿ ನಂದಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net