ರೌಡಿಗಳ ಅಡ್ಡವಾಯಿತೇ ಎಕ್ಸ್‌ಪ್ರೆಸ್‌ವೇ? ಹೆಂಡತಿ, ಮಕ್ಕಳ ಕಣ್ಣೆದುರೇ ಚಾಲಕನನ್ನು ಹೊರಗೆಳೆದು ಥಳಿಸಿದ ಯುವಕರ ಗ್ಯಾಂಗ್! Road Rage Bengaluru

 Road Rage Bengaluru(ಚಿತ್ರ X)
Road Rage Bengaluru(ಚಿತ್ರ X)
Published on
ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ರೌಡಿಸಂ ಹಾಗೂ ಪುಂಡಾಟಿಕೆಯ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಎಕ್ಸ್‌ಪ್ರೆಸ್‌ವೇನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದನ್ನು ಹಿಂಬಾಲಿಸಿಕೊಂಡು ಬಂದ ಪುರುಷರ ಗುಂಪೊಂದು, (Road Rage Bengaluru) ಅವರ ವಾಹನವನ್ನು ಅಡ್ಡಗಟ್ಟಿ ತಡೆದು, ಕುಟುಂಬದ ಸದಸ್ಯರ ಮೇಲೆ ದೈಹಿಕವಾಗಿ ಭೀಕರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮೃಗಗಳಂತೆ ವರ್ತಿಸಿದ ಈ ಪುಂಡರ ಕೃತ್ಯವು ಕಾರಿನ ಡ್ಯಾಶ್​ಕ್ಯಾಮ್​ನಲ್ಲಿ ಸೆರೆಹಿಡಿಯಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 

52 ಸೆಕೆಂಡ್‌ನ ವೀಡಿಯೊದಲ್ಲೇನಿದೆ?

ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳು ಎಂದಿನಂತೆ ಚಲಿಸುತ್ತಿರುತ್ತವೆ. ಈ ವೇಳೆ ಇದ್ದಕ್ಕಿದ್ದಂತೆ ಸಂತ್ರಸ್ತ ಕುಟುಂಬ ಪ್ರಯಾಣಿಸುತ್ತಿದ್ದ ಆಲ್ಟೋ ಕಾರು ರಸ್ತೆಯಲ್ಲೇ ನಿಲ್ಲುತ್ತದೆ. ಕಾರು ನಿಂತ ಕೆಲವೇ ಕ್ಷಣಗಳಲ್ಲಿ, ಪುರುಷರ ಗುಂಪೊಂದು ಆ ಕಾರಿನತ್ತ ಧಾವಿಸಿ, ಕಾರಿನ ಚಾಲಕನಿಗೆ ಜೋರಾಗಿ ಕೂಗಾಡಿ ಹೆದರಿಸಿ ನಂತರ ಅತ್ಯಂತ ಬಲವಂತವಾಗಿ ಕಾರಿನ ಬಾಗಿಲನ್ನು ತೆರೆಯುತ್ತಾರೆ. ಬಾಗಿಲು ತೆರೆಯುತ್ತಿದ್ದಂತೆ ಚಾಲಕನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಆರಂಭಿಸುತ್ತಾರೆ.
ಹಲ್ಲೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ, ಹಿಂದೆ ಬರುತ್ತಿದ್ದ ಮತ್ತೊಂದು ವಾಹನದಲ್ಲಿದ್ದ ಪ್ರಯಾಣಿಕರೊಬ್ಬರು ಜಗಳ ಬಿಡಿಸಲು ಕಾರಿನಿಂದ ಕೆಳಗಿಳಿದು ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಾರೆ. ಆದರೂ ಆ ಯುವಕರು ಹಲ್ಲೆಯನ್ನು ನಿಲ್ಲಿಸದೆ, ಚಾಲಕನನ್ನು ಕಾರಿನಿಂದ ಹೊರಗೆ ಎಳೆದೊಯ್ಯುತ್ತಾರೆ. ಈ ವೇಳೆ ಆಲ್ಟೋ ಕಾರಿನಲ್ಲಿದ್ದ ಮಹಿಳೆಯೊಬ್ಬರು ಕೂಡ ಹೊರಗೆ ಬಂದು, ಹಲ್ಲೆಕೋರರಿಂದ ತಮ್ಮ ಕುಟುಂಬದ ಸದಸ್ಯನನ್ನು ರಕ್ಷಿಸಲು ಹತಾಶ ಪ್ರಯತ್ನ ನಡೆಸುವುದು ವೀಡಿಯೊದಲ್ಲಿ ದಾಖಲಾಗಿದೆ.
ಈ ಭೀಕರ ರಸ್ತೆ ದೌರ್ಜನ್ಯದ ವೀಡಿಯೊ ಇಂಟರ್ನೆಟ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದರೂ, ಪೊಲೀಸರು ಈವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಘಟನೆಗೆ ಸಂಬಂಧಿಸಿದಂತೆ ಯಾರನ್ನಾದರೂ ಬಂಧಿಸಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಇಲಾಖೆಯಿಂದ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಸದ್ಯ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮಕ್ಕಾಗಿ ಸಾರ್ವಜನಿಕರು ಒತ್ತಾಯಿಸುತ್ತಿದ್ದು, ಪೊಲೀಸರ ಮುಂದಿನ ಕ್ರಮಕ್ಕಾಗಿ ಕಾಯಲಾಗುತ್ತಿದೆ (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net