ನಿಮಗೆ ತಾಕತ್ತಿದ್ದರೆ ಕಾಂಗ್ರೆಸ್ ಬಗ್ಗೆ ಅಂಬೇಡ್ಕರ್​ ಏನು ಹೇಳಿದ್ದಾರೆ ಅದನ್ನೂ ಪಠ್ಯದಲ್ಲಿ ಸೇರಿಸಿ: ಎಂಎಲ್​ಸಿ ರವಿಕುಮಾರ್​ ಚಾಲೆಂಜ್​

MLC ravikumar
Published on

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪಠ್ಯಪುಸ್ತಕ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಪಠ್ಯವನ್ನು ಪರಿಷ್ಕರಣೆ ಮಾಡುವ ಅಗತ್ಯವಿದೆ ಎಂದು ರಾಜ್ಯ ಸರ್ಕಾರವು ಹೇಳುತ್ತಲೇ ಬಂದಿತ್ತು. ಈ ನಡುವೆ ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷದ ನಾಯಕರು ಕೆಲವು ಪಠ್ಯಗಳ ವಿಚಾರವಾಗಿ ಪರಸ್ಪರ ವಾಗ್ದಾಳಿಯನ್ನು ನಡೆಸಿದ್ದರು.

ಸದ್ಯ ಈ ಕುರಿತು ಬಿಜೆಪಿ ಎಂಎಲ್​ಸಿ ರವಿಕುಮಾರ್​ ಮಾತನಾಡಿದ್ದು, ಟಿಪ್ಪು ಸುಲ್ತಾನ್ ವಿಚಾರವಾಗಿ ಬೇಕಂತಲೇ ತುಷ್ಟೀಕರಣ‌ ಮಾಡಲಾಗುತ್ತಿದೆ. ಮತಾಂತರವಾಗದ ವೇಳೆ ಆತ ರಕ್ತದ‌ ಕೋಡಿ ಹರಿಸಿದ್ದ. ಇಂತಹವರ ಪಾಠವನ್ನು ಪುಸ್ತಕದಲ್ಲಿ ಇಡುತ್ತಿದ್ದೀರಾ ಎಂದು ಸರ್ಕಾರಕ್ಕೆ ಪ್ರಶ್ನೆಯನ್ನು ಕೇಳಿದ್ದಾರೆ.

ಹೆಡ್ಗೆವಾರ್ ದೇಶದ್ರೋಹಿ ಸಂಸ್ಥಾನದವರಾ, ಅವರು ಏನು ದೇಶದ್ರೋಹ ಮಾಡಿದ್ದಾರೆ. ಟಿಪ್ಪು ಸುಲ್ತಾನ್​ ತರಹ ದೇಶದ್ರೋಹ ಮಾಡಿದ್ದಾರಾ ಎಂದು ಪ್ರಶ್ನಿಸಿದ್ದು, ಈ ಎಲ್ಲಾ ವಿಚಾರಗಳನ್ನು ಬಗ್ಗೆ ಜನರ ಬಳಿ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ. ನಿಮಗೆ ತಾಕತ್ತಿದ್ದರೆ ಅಂಬೇಡ್ಕರ್​ರು ಕಾಂಗ್ರೆಸ್ ಬಗ್ಗೆ ಏನು ಹೇಳಿದ್ದಾರೆ ಅದನ್ನೂ ಸೇರಿಸಿ. ನನ್ನ‌ ಜೀವ ಇರುವವರೆಗೂ ಕಾಂಗ್ರೆಸ್ ಸೇರಲ್ಲ ಅಂತ ಅಂಬೇಡ್ಕರ್ ಹೇಳಿದ್ದರು. ಇದನ್ನೂ ಪಠ್ಯದಲ್ಲಿ ಸೇರಿಸಿ ಎಂದು ಎಂಎಲ್​ಸಿ ರವಿಕುಮಾರ್ ಚಾಲೆಂಜ್ ಹಾಕಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ವಾಪಾಸ್‌ ವಿಚಾರವಾಗಿ ಮಾತನಾಡಿದ ಅವರು, ಟಿಪ್ಪು ಜನರನ್ನು ಮತಾಂತರ ಮಾಡಿ ಚರ್ಚ್​ಗಳನ್ನ ಬೀಳಿಸಿದ್ದ. ಹಾಗಾದರೆ ಮಂತಾಂತರ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್​ನವರು ಯಾಕೆ ತೆಗೆಯುತ್ತಿದ್ದಾರೆ. ಇದರ ವಿರುದ್ಧವೂ ಜನರ ಬಳಿ ಹೋಗುತ್ತೇನೆ ಎಂದು ರವಿಕುಮಾರ್ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net