ನಾಮಪತ್ರ ಸಲ್ಲಿಸಿ ಒಗ್ಗಟ್ಟು ಪ್ರದರ್ಶನ: ಸ್ಥಳೀಯ ಸಂಸ್ಥೆ ಚುನಾವಣೆಗೆ ಮೂರು ಪಕ್ಷದ ಅಭ್ಯರ್ಥಿಗಳಿಂದ ಉಮೇದುವಾರಿಕೆ

23-klr-1
Published on

ಕೋಲಾರ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಡಿ.10ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದ ಮಂಗಳವಾರ ಆಡಳಿತಾರೂಢ ಬಿಜೆಪಿಯ ಅಭ್ಯರ್ಥಿ ಡಾ.ವೇಣುಗೋಪಾಲ್, ಪ್ರತಿ ಪಕ್ಷವಾದ ಕಾಂಗ್ರೆಸ್ಸಿನಿಂದ ಎಂಎಸ್‌ಐಎಲ್ ಮಾಜಿ ಅಧ್ಯಕ್ಷ ಎಂ.ಎಲ್.ಅನಿಲ್ ಕುಮಾರ್, ಜೆಡಿಎಸ್ ಅಭ್ಯರ್ಥಿ ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮಚಂದ್ರ ಉಮೇದುವಾರಿಕೆ ಸಲ್ಲಿಸಿದರು.

ಜೆಡಿಎಸ್‌ನ ವಕ್ಕಲೇರಿ ರಾಮಚಂದ್ರ ನಾಮಪತ್ರ ಸಲ್ಲಿಕೆಗೆ ಮುನ್ನ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ, ಬಂಗಾರಪೇಟೆ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಕ್ಲಾಕ್ ಟವರ್‌ನಲ್ಲಿರುವ ದರ್ಗಾಕ್ಕೆ ಭೇಟಿ ನೀಡಿದ ಬಳಿಕ ಕೋಲಾರ ನಗರದ ಅದಿದೇವತೆ ಶ್ರೀ ಕೋಲಾರಮ್ಮ ದೇವಿ ದರ್ಶನ ಪಡೆದು ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿ ಡಾ.ಆರ್.ಸೆಲ್ವಮಣಿಗೆ ನಾಮಪತ್ರ ಸಲ್ಲಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮುಖಂಡರಾದ ಸಮೃದ್ಧಿ ಮಂಜುನಾಥ್, ಮಲ್ಲೇಶ್‌ಬಾಬು ಹಾಜರಿದ್ದರು. ಜೆಡಿಎಸ್ ಮಾಜಿ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಕೋಲಾರ ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜ ರಾಜೇಶ್ವರಿ, ಜಿಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿ, ಮಾಲೂರು ಜೆಡಿಎಸ್ ಮುಖಂಡ ಜಿ.ರಾಮೇಗೌಡ, ಗೌರಿಬಿದನೂರಿನ ನರಸಿಂಹಮೂರ್ತಿ ಸೇರಿದಂತೆ 250ಕ್ಕೂ ಹೆಚ್ಚು ಕಾರ್ಯಕರ್ತರು ವಕ್ಕಲೇರಿ ರಾಮು ಅವರಿಗೆ ಬೆಂಬಲ ಸೂಚಿಸಿದರು.

ಗೆಲ್ಲುವ ಅವಕಾಶ ಹೆಚ್ಚಿದೆ: ನಮ್ಮ ಪಕ್ಷದ ಅಭ್ಯರ್ಥಿ ವಕ್ಕಲೇರಿ ರಾಮು ಅವರಿಗೆ ಗೆಲ್ಲುವ ಅವಕಾಶ ಹೆಚ್ಚಿದೆ, ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆ, ಭಿನ್ನಮತ ನಮಗೆ ವರದಾನವಾಗಲಿದೆ, ಬಿಜೆಪಿ ಜತೆ ಹೊಂದಾಣಿಕೆ ವಿಚಾರವಾಗಿ ಈವರೆಗೆ ಯಾವುದೇ ತೀರ್ಮಾನವಾಗಿಲ್ಲ, ನಮ್ಮ ನಾಯಕರು ಈ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಲಿದ್ದು, ಕೋಲಾರ ಕ್ಷೇತ್ರವನ್ನು ಉಳಿಸಿಕೊಳ್ಳುತ್ತೇವೆ ಎಂದು ಎಂಎಲ್‌ಸಿ ಇಂಚರ ಗೋವಿಂದರಾಜು ತಿಳಿಸಿದರು.

ಕಾಂಗ್ರೆಸ್‌ನಿಂದ ಒಗ್ಗಟ್ಟು ಪ್ರದರ್ಶನ: ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಅನಿಲ್ ಕುಮಾರ್ ಪರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಒಗ್ಗಟ್ಟು ಪ್ರದರ್ಶಿಸಿದರು. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ತೋಟದ ಮನೆಯಲ್ಲಿ ಶಾಸಕ ಕೆ.ಆರ್.ರಮೇಶ್‌ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ಶಾಸಕರಾದ ಎನ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಸುಬ್ಬಾರೆಡ್ಡಿ, ಕೃಷ್ಣಬೈರೇಗೌಡ, ವಿ.ಮುನಿಯಪ್ಪ, ಶಿವಶಂಕರರೆಡ್ಡಿ ಅನಿಲ್ ಕುಮಾರ್ ಗೆಲುವಿಗೆ ಶ್ರಮಿಸುವುದಾಗಿ ಪ್ರತಿಜ್ಞೆ ಮಾಡಿದರು. ಜೆಡಿಎಸ್‌ನಿಂದ ಶಾಸಕರಾಗಿ ಪಕ್ಷದ ಜತೆಗೆ ಅಂತರ ಕಾಯ್ದುಕೊಂಡಿರುವ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಜತೆಗಿದ್ದರು.

ಅನಿಲ್ ಕುಮಾರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತರಲ್ಲಿ ಒಬ್ಬರಾಗಿದ್ದು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಿಸಿರುವುದರಿಂದ ಶಾಸಕರು ಬಂಡಾಯ ಏಳುವುದಕ್ಕೆ ಧೈರ್ಯವಿಲ್ಲದೆ ಹಾಗೂ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಬೆಂಬಲ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅನಿಲ್ ಕುಮಾರ್‌ಗೆ ಟಿಕೆಟ್ ನೀಡಲು ವಿರೋಧಿಸಿದ್ದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಗೈರಾಗಿದ್ದರು, ಕೆಜಿಎಫ್ ಶಾಸಕಿ ಎಂ.ರೂಪಕಲಾ ಗೈರು ಅನುಮಾನಕ್ಕೆ ಎಡೆ ಮಾಡಿತು. ಟಿಕೆಟ್‌ಗೆ ಪೈಪೋಟಿ ನಡೆಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಸಹ ದೂರ ಉಳಿದಿದ್ದರು.

ಅನಿಲ್ ಎರಡು ನಾಮಪತ್ರ ಸಲ್ಲಿಕೆ: ಕೈ ಅಭ್ಯರ್ಥಿ ಎಂ.ಎಲ್.ಅನಿಲ್ ಕುಮಾರ್ ಎರಡು ನಾಮಪತ್ರ ಸಲ್ಲಿಸಿದರು. ಶಾಸಕರಾದ ಶಿವಶಂಕರರೆಡ್ಡಿ, ಕೆ.ವೈ.ನಂಜೇಗೌಡ. ಎಸ್.ಎನ್.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ನಾಸೀರ್ ಅಹಮ್ಮದ್ ಸಾಥ್ ನೀಡಿದರು.

ಬಿಜೆಪಿಯಿಂದ ಶಕ್ತಿ ಪ್ರದರ್ಶನ: ಅಭ್ಯರ್ಥಿ ಡಾ.ವೇಣುಗೋಪಾಲ್ ಪಕ್ಷದ ನೂರಾರು ಕಾರ್ಯಕರ್ತರ ಜತೆ ಶಕ್ತಿ ಪ್ರದರ್ಶನ ನಡೆಸಿ ನಾಮಪತ್ರ ಸಲ್ಲಿಸಿದರು. ಸಚಿವರಾದ ಡಾ.ಸುಧಾಕರ್, ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ ಜತೆಗಿದ್ದರು. ಬಂಗಾರಪೇಟೆ ವೃತ್ತದ ಮೂಲಕ ಡಿಸಿ ಕಚೇರಿವರೆಗೆ ರೋಡ್ ಶೋ ನಡೆಸಲು ಭರ್ಜರಿ ಸಿದ್ಧತೆ ನಡೆದಿತ್ತು, ಕಾರ್ಯಕರ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿ ವಾಹನ ಸವಾರರು ಪರದಾಡಿದರು.

ಸಚಿವದ್ವಯರ ಆಗಮನ ವಿಳಂಬದಿಂದಾಗಿ ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿ ಡಿಸಿ ಕಚೇರಿಗೆ ದೌಡಾಯಿಸಿದ್ದರಿಂದ ರೋಡ್ ಶೋ ನಂತರ ನಡೆಯಿತು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಬಿಜೆಪಿ ಮುಖಂಡರು, ಗ್ರಾಪಂ ಸದಸ್ಯರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಕೂಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ಬಿಜೆಪಿ ದಲಿತ ಮೋರ್ಚಾದ ಮುಖಂಡ ಡಾ.ವೆಂಕಟೇಶ ಮೌರ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಹಿರಿಯ ಮುಖಂಡರಾದ ರಘುನಾಥ್, ಹನುಮಪ್ಪ, ವಕೀಲ ಮಾಗೇರಿ ನಾರಾಯಣಸ್ವಾಮಿ, ಮಹಿಳಾ ಮೋರ್ಚಾದ ಅರುಣಮ್ಮ, ಮಮತಾ, ಮಂಜುಳ,ರಾಜೇಶ್ವರಿ ಇನ್ನಿತರರು ಉಪಸ್ಥಿತರಿದ್ದರು.

ಅಪಸ್ವರ: ಪಕ್ಷದ ಕಾರ್ಯಕ್ರಮಗಳಿಗೆ ಕರೆದರೆ ಬಿಡುವಿಲ್ಲ, ಊರಿನಲ್ಲಿ ಇಲ್ಲ ಎಂದು ಸಬೂಬು ಹೇಳುವ ಕಾರ್ಯಕರ್ತರು ಚುನಾವಣೆ ಬಂದಾಗ ಕಾಣಿಸಿಕೊಳ್ಳುತ್ತಾರೆ, ಇವರನ್ನು ಸಾಕುವುದು ಕಷ್ಟವೆಂದು ಕೆಲ ಮುಖಂಡರು ಪಿಸುಗುಟ್ಟಿದ್ದು ಕೇಳಿ ಬಂತು.

ಪೊಲೀಸರ ವಿರುದ್ಧ ಗರಂ: ನಾಮಪತ್ರ ಸಲ್ಲಿಕೆ ವೇಳೆ ನೂಕುನುಗ್ಗಲು ಉಂಟಾಗದಂತೆ ಜಿಲ್ಲಾಡಳಿತ ಭವನದ ಎಲ್ಲ ದಿಕ್ಕುಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಅಭ್ಯರ್ಥಿಯೊಂದಿಗೆ 5 ಜನ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಿಜೆಪಿ ಅಭ್ಯರ್ಥಿ ಡಾ.ವೇಣುಗೋಪಾಲ್ ಸಚಿವರಾದ ಡಾ.ಸುಧಾಕರ್, ಮುನಿರತ್ನ, ಸಂಸದರೊಂದಿಗೆ ಕಾರಿನಲ್ಲಿ ಬಂದು ಜಿಲ್ಲಾ ಆಡಳಿತ ಭವನದ ಮುಖ್ಯದ್ವಾರ ಪ್ರವೇಶಿಸಿದರು. ಇದಕ್ಕೂ ಮುನ್ನ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮತ್ತವರ ಬೆಂಬಲಿಗರು ಕಾರಿನಲ್ಲಿ ಬಂದಾಗ, ಪೊಲೀಸರು ಅವಕಾಶ ನೀಡಿರಲಿಲ್ಲ, ಇದರಿಂದ ಆಕ್ರೋಶ ವ್ಯಕ್ತಪಡಿಸಿದ ಶಾಸಕರು ನಾನೂ ಜನರಿಂದ ಆಯ್ಕೆಯಾಗಿದ್ದೇನೆ, ಸಚಿವರು, ಸಂಸದರಿಗೆ ಒಂದು ನ್ಯಾಯ ನನಗೊಂದು ನ್ಯಾಯವೇ ಎಂದು ಸಿಡಿಮಿಡಿಗೊಂಡರು. ಜಿಲ್ಲಾಡಳಿತ ಭವನಕ್ಕೆ ವಾಹನ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ, ಮೇಲಧಿಕಾರಿಗಳ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ ಎಂದು ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದರು. ಜಗ್ಗದ ಶಾಸಕರು, ನಾನೂ ಜನಪ್ರತಿನಿಧಿಯೇ, ಅವರನ್ನು ಬಿಟ್ಟ ರೀತಿಯಲ್ಲೇ ನನ್ನನ್ನು ಒಳಗೆ ಬಿಡಿ ಎಂದರೂ ಪೊಲೀಸರು ವಿನಯದಿಂದಲೇ ನಿರಾಕರಿಸಿದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುವೆ ಎಂದು ಕೆಲವೇ ಹೆಜ್ಜೆಗಳ ಅಂತರದಲ್ಲಿರುವ ಡಿಸಿ ಕಚೇರಿಗೆ ನಡೆದುಕೊಂಡು ಹೋದರು.

ಎಲ್ಲರ ಬೆಂಬಲ ಕೇಳುತ್ತೇವೆ: ಡಾ.ವೇಣುಗೋಪಾಲ್ ಸಜ್ಜನ ವ್ಯಕ್ತಿ, ಉನ್ನತ ಶಿಕ್ಷಣದ ಮೂಲಕ ವೈದ್ಯರಾಗಿದ್ದಾರೆ, ಜತೆಗೆ ಶಿಕ್ಷಣ ಸಂಸ್ಥೆ ಮೂಲಕ ನೂರಾರು ಮಕ್ಕಳಿಗೆ ವಿದ್ಯೆ ನೀಡುತ್ತಿದ್ದಾರೆ, ಇವರನ್ನು ಅಭ್ಯರ್ಥಿ ಮಾಡಿರುವುದಕ್ಕೆ ಎಲ್ಲರಿಂದ ಹರ್ಷ ವ್ಯಕ್ತವಾಗಿದೆ, ಎಲ್ಲರ ಬೆಂಬಲದೊಂದಿಗೆ ನಮ್ಮ ಅಭ್ಯರ್ಥಿ ಜಯ ಖಚಿತ ಎಂದು ಸಚಿವ ಡಾ.ಸುಧಾಕರ್ ನುಡಿದರು.

ಡಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್ ಜತೆ ಮೈತ್ರಿ ಬಗ್ಗೆ ಇನ್ನೂ ನಮ್ಮ ನಾಯಕರಿಂದ ಯಾವುದೇ ಸಂದೇಶ ಬಂದಿಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು, ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದರು.

ಬೆಂಬಲ ನೀಡಿದರೆ ಸ್ವಾಗತ: ಬಿಜೆಪಿಗೆ ಬೆಂಬಲ ನೀಡಲು ಈವರೆಗೆ ನಮ್ಮೊಂದಿಗೆ ಯಾವೊಬ್ಬ ಕಾಂಗ್ರೆಸ್ ಮುಖಂಡರೂ ಸಂಪರ್ಕಿಸಿಲ್ಲ, ಒಂದು ವೇಳೆ ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಿದರೆ ಸ್ವಾಗತಿಸುತ್ತೇವೆ, ಈ ಚುನಾವಣೆ ಪಕ್ಷದ ಚಿಹ್ನೆಯಡಿ ನಡೆಯದಿರುವುದರಿಂದ ನಮ್ಮ ಅಭ್ಯರ್ಥಿ ಎಲ್ಲ ಪಕ್ಷಗಳ ಮುಖಂಡರು ಹಾಗೂ ಗ್ರಾಪಂ ಸದಸ್ಯರ ಬೆಂಬಲ ಪಡೆಯಬಹುದಾಗಿದೆ. ಎರಡೂ ಜಿಲ್ಲೆಗಳಲ್ಲಿ ನಮಗೆ ಶಕ್ತಿ ಏನಿದೆ ಎಂದು ಗೊತ್ತಿದೆ. ಅಭ್ಯರ್ಥಿ ಗೆಲುವಿಗೆ ಶಕ್ತಿ ಮೀರಿ ಶ್ರಮಿಸುತ್ತೇವೆ. ಚುನಾವಣೆಯಲ್ಲಿ ಎಲ್ಲ ತಂತ್ರ, ರಾಜಕಾರಣದ ಪಾಠ ಕಲಿತಿದ್ದೇವೋ ಅದೆಲ್ಲವನ್ನೂ ಬಳಸುತ್ತೇವೆ. ನಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಎಲ್ಲ ಪಕ್ಷದ ನಾಯಕರಿಗೆ ಮನವಿ ಮಾಡಿದ್ದೇವೆ ಎಂದು ಸಚಿವ ಡಾ.ಸುಧಾಕರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net