ಮೇಲ್ಮನೆ ಚುನಾವಣೆ; ಅಭ್ಯರ್ಥಿ ಆಯ್ಕೆಗೆ ಜೂ.2 ರಂದು ಜೆಡಿಎಸ್ ಸಭೆ

JDS
Published on

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಅಭ್ಯರ್ಥಿ ಆಯ್ಕೆಗೆ ಜೂ.2ರಂದು ನಡೆಯಲಿದೆ.

ಜೂ.3 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವುದರಿಂದ ಜೂ.2 ರಂದು ಸಭೆ ನಡೆಸಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುತ್ತದೆ.

ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ನಾಲ್ವರು ಆಕಾಂಕ್ಷಿಗಳು ಜೆಡಿಎಸ್‌ನಲ್ಲಿದ್ದು, ವಿಧಾನಸಭೆ ಸದಸ್ಯರ ಬಲದ ಆಧಾರದ ಮೇಲೆ ಒಬ್ಬರನ್ನು ಆಯ್ಕೆ ಮಾಡಲು ಅವಕಾಶವಿದೆ. ಹಾಗಾಗಿ ಭಾನುವಾರ ಒಬ್ಬ ಅಭ್ಯರ್ಥಿ ಆಯ್ಕೆ ಮಾಡಿ ಬಿ ಫಾರಂ ನೀಡಲಾಗುತ್ತದೆ.

ನಾಲ್ವರು ಆಕಾಂಕ್ಷಿಗಳಿದ್ದರೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಟಿ.ಎನ್.ಜವರಾಯಿಗೌಡ ಅವರ ಹೆಸರು ಮುಂಚೂಣಿಯಲ್ಲಿದೆ. ಸತತ ಮೂರು ಬಾರಿ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಹಾಗೂ ಪಕ್ಷದಲ್ಲಿ ನಿಷ್ಠೆಯಿಂದಿರುವ ಕಾರಣ ಜವರಾಯಿಗೌಡ ಆಯ್ಕೆ ಸಾಧ್ಯತೆ ಹೆಚ್ಚಿವೆ ಎನ್ನಲಾಗಿದೆ.

ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿರುವುದರಿಂದ ಮುಂದಿನ ಚುನಾವಣೆಗಳಲ್ಲೂ ಬಿಜೆಪಿ ಜತೆ ಮೈತ್ರಿ ಮುಂದುವರಿದರೆ ಆ ಕ್ಷೇತ್ರವನ್ನು ಸ್ವಾಭಾವಿಕವಾಗಿ ಬಿಜೆಪಿಗೆ ಬಿಟ್ಟುಕೊಡಬೇಕಾಗುತ್ತದೆ. ಹಾಗೇನಾದರೂ ಆದರೆ ಜವರಾಯಿಗೌಡ ಅವರ ಸ್ಪರ್ಧೆಗೆ ಅವಕಾಶವಿಲ್ಲದಂತಾಗುತ್ತದೆ ಎಂಬ ದೂರ ದೃಷ್ಟಿಯ ಹಿನ್ನೆಲೆಯೂ ಜವರಾಯಿಗೌಡ ಆಯ್ಕೆಯ ಹಿಂದಿದೆ ಎಂದೂ ಮೂಲಗಳು ಹೇಳಿವೆ.

ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಮರು ಸ್ಪರ್ಧೆ ಮಾಡಲು ಒಲವು ತೋರಿದ್ದಾರೆ. ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರರೆಡ್ಡಿ ಅವರೂ ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜತೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಬೆಂಗಳೂರು ಮಹಾನಗರ ಜೆಡಿಎಸ್ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್‌ಗೌಡ ಹೆಸರು ಚಾಲ್ತಿಯಲ್ಲಿದೆ.

ಬಿ.ಎಂ. ಫಾರೂಕ್ ಮತ್ತು ಕುಪೇಂದ್ರ ರೆಡ್ಡಿ ಅವರು ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಒತ್ತಡ ತಂತ್ರ ಅನುಸರಿಸಿದ್ದಾರೆ.

ಒಟ್ಟಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ದೇವೇಗೌಡರ ಜತೆ ಸಮಾಲೋಚನೆ ನಡೆಸಿಯೇ ಅಂತಿಮ ತೀರ್ಮಾನ ಕೈಗೊಳ್ಳುವುದರಿಂದ ಅಭ್ಯರ್ಥಿ ಆಯ್ಕೆ ಕುತೂಹಲ ಕೆರಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net