ನಮ್ಮ ಕುಮ್ಮಕ್ಕು ಇಲ್ಲ ಎಂದ ಎಂಎಲ್ಸಿ ಅನಿಲ್‌ಕುಮಾರ್

anil kumar,webp
ಅನಿಲ್‌ಕುಮಾರ್
Published on

ಕೋಲಾರ: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಅವರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಂ.ಎಲ್.ಸಿ. ಎಂ.ಎಲ್‌.ಅನಿಲ್ ಕುಮಾರ್ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಭೆಯಲ್ಲಿ ಕೆಲ ಕಾರ್ಯಕರ್ತರು ಉಸ್ತುವಾರಿ ನಾರಾಯಣಸ್ವಾಮಿ ಅವರನ್ನು ಪ್ರಶ್ನಿಸುವ ವೇಳೆ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು ನನ್ನ ವಿರುದ್ಧವೇ ಪ್ರಶ್ನಿಸುತ್ತಿದ್ದಾರೆ ಎಂದು ತಪ್ಪಾಗಿ ಗ್ರಹಿಸಿ, ಅದಕ್ಕೆ ಪ್ರತಿಕ್ರಿಯಿಸಲು ಹೋಗಿ ಗದ್ದಲವಾಗಿದೆ. ನಂತರ ಎಲ್ಲರನ್ನೂ ಸಮಾಧಾನ ಮಾಡಿ ಶಿಸ್ತಿನಿಂದ ಸಭೆ ನಡೆದಿದೆ ಎಂದರು.
ಗದ್ದಲ ನಡೆದ ನಂತರ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ ಮತ್ತು ಜಿಲ್ಲಾಧ್ಯಕ್ಷ ಲಕ್ಷ್ಮೀ ನಾರಾಯಣ ಇಬ್ಬರೂ ಒಟ್ಟಿಗೆ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್‌ನಲ್ಲಿ ಸಹಜ ಎಂದು ಹೇಳಿಕೆ ನೀಡಿ, ಬಳಿಕ ಜಿಲ್ಲಾಧ್ಯಕ್ಷರು ಗ್ರಾಮಾಂತರ ಠಾಣೆಯಲ್ಲಿ ಕೋಲಾರದ ಬಾಲು ಮತ್ತು ಅಮರನಾರಾಯಣ ಎಂಬುವವರು ಸಭೆಯಲ್ಲಿ ಗದ್ದಲ ಎಬ್ಬಿಸಿ, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದರು. ಇದಕ್ಕೆ ಎಂಎಲ್‌ಸಿ ಅನಿಲ್‌ಕುಮಾರ್ ಕಾರಣ ಎಂದು ದೂರು ದಾಖಲಿಸಿದ್ದಾರೆ.
ಭಾನುವಾರ ಬಾಲು ಮತ್ತು ಅಮರನಾರಾಯಣ ಪ್ರತಿ ದೂರು ನೀಡಿ, ಈ ಘಟನೆಗೆ ಸಚಿವ ಕೆ.ಎಚ್.ಮುನಿಯಪ್ಪ ಕಾರಣ ಎಂದು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಎರಡು ದೂರುಗಳನ್ನು ತನಿಖÉ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದ ಅವರು, ವಿನಾ ಕಾರಣ ನನ್ನ ಮತ್ತು ಕೆ.ಎಚ್.ಮುನಿಯಪ್ಪ ಅವರ ಹೆಸರನ್ನು ಮುನ್ನಲೆಗೆ ತರಲಾಗುತ್ತಿದೆ ಎಂದರು.
ರಾಜ್ಯ ಕಾಂಗ್ರೆಸ್ ನಾಯಕರು, ಎಲ್ಲ ಬೆಳವಣಿಗೆಗಳ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತಾರೆ. ಈ ಸಂಬAಧ ಪೊಲೀಸ್ ಠಾಣೆಗೆ ಹೋಗಿದ್ದೇ ತಪ್ಪು. ಇದು ಪಕ್ಷದ ಆಂತರಿಕ ವಿಚಾರವಾಗಿದೆ. ಜಿಲ್ಲೆ ಮತ್ತು ರಾಜ್ಯದಲ್ಲಿ ಅನೇಕ ಬಾರಿ ಈ ರೀತಿಯ ಘಟನೆಗಳು ಪಕ್ಷದಲ್ಲಿ ಜರುಗಿವೆ. ಅದು ಪಕ್ಷದ ವೇದಿಕೆಯಲ್ಲಿ ಚರ್ಚೆಗಳು ನಡೆದು ಇತ್ಯರ್ಥಪಡಿಸಿಕೊಂಡು ಬಗೆಹರಿಸಿಕೊಳ್ಳಲಾಗುತ್ತದೆ ಎಂದರು.

ಮೇಲಿಂದ ಒತ್ತಡ?
ಘಟನೆಯ ಬಗ್ಗೆ ಜಿಲ್ಲಾಧ್ಯಕ್ಷರ ಜತೆ ಶನಿವಾರ ರಾತ್ರಿ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ ಮತ್ತು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದ್ದಾರೆ. ನನಗೆ ಮೇಲಿಂದ ಒತ್ತಡಗಳು ಹೆಚ್ಚಾಗಿವೆ. ನಾನೇನು ಮಾಡಲಿ. ಆದ್ದರಿಂದ ದೂರು ನೀಡಿದ್ದೇನೆ. ನಾನು ಒತ್ತಡದಲ್ಲಿ ಸಿಕ್ಕಿಕೊಂಡು ಇದನ್ನೆಲ್ಲ ಮಾಡಬೇಕಾಗಿದೆ. ದಯವಿಟ್ಟು ಕ್ಷಮಿಸಿ ಎಂದು ತಿಳಿಸಿರುವುದಾಗಿ ಅನಿಲ್ ಕುಮಾರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net