ಶಾಸಕರ ಅಮಾನತು ವಾಪಸ್: ಸ್ಪೀಕರ್‌ಗೆ ಅಶೋಕ್ ಪತ್ರ | Not an intentional incident

R Ashok
Published on

ಬೆಂಗಳೂರು: ಚುನಾಯಿತ ಜನಪ್ರತಿನಿಧಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ 18 ಶಾಸಕರ ಅಮಾನತು ಆದೇಶ ಹಿಂಪಡೆಯಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ಗೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮನವಿ ಮಾಡಿದ್ದಾರೆ.

ಸ್ಪೀಕರ್‌ಗೆ ಈ ಕುರಿತು ಮಂಗಳವಾರ ಪತ್ರ ಬರೆದಿರುವ ಅವರು, ಜನಸಾಮಾನ್ಯರ ಹಿತದೃಷ್ಟಿಯಿಂದ ಮನವಿಗೆ ಸ್ಪೀಕರ್ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ. ಆ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ಆಶಯಗಳನ್ನು ಎತ್ತಿ ಹಿಡಿಯುತ್ತಾರೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಸದನದಲ್ಲಿ ಮಾ.21ರಂದು ನಡೆದ ಘಟನೆ ಉದ್ದೇಶಪೂರ್ವಕವಾದುದು ಅಲ್ಲ ಅಥವಾ ಸ್ಪೀಕರ್ ಪೀಠಕ್ಕೆ ಅಗೌರವ ತರುವ ಉದ್ದೇಶವೂ ಯಾವ ಶಾಸಕರಿಗೆ ಇರಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಕಲಾಪ ನಿರ್ವಹಿಸುವುದನ್ನು ಅತ್ಯಂತ ಹತ್ತಿರದಿಂದ ನೋಡಿದ್ದು, ಸ್ಪೀಕರ್ ಬಗ್ಗೆ ನಮಗೆ ಅಪಾರ ಗೌರವವಿದೆ.

ಕೆಲಸಕ್ಕೆ ನಿರ್ಬಂಧ

ಒಂದು ವೇಳೆ ತಾವು (ಸ್ಪೀಕರ್) ಅಂದೆ ನಮ್ಮ ಎಲ್ಲ ಶಾಸಕರನ್ನು ತಮ್ಮ ಕೊಠಡಿಗೆ ಕರೆದು ವಿವರಣೆ ಕೇಳಿದ್ದರೆ, ಖಂಡಿತ ಘಟನೆ ಬಗ್ಗೆ ಸ್ಪಷ್ಟೀಕರಣ ಕೊಡುತ್ತಿದ್ದೆವು. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಈಗ ಒಂದಿಷ್ಟ ಕಠೋರ ಎನ್ನುವಂತಹ ನಿರ್ಧಾರ ಪ್ರಕಟವಾಗಿದ್ದು, 18 ಶಾಸಕರಿಗೆ ಕೆಲಸ ಮಾಡಲು ನಿರ್ಬಂಧ ವಿಧಿಸಿದಂತಾಗಿದೆ.

ಸದನ ದೊಡ್ಡದು, ಸಭಾಧ್ಯಕ್ಷರು ದೊಡ್ಡವರು ಎಂಬ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಅನುಗುಣವಾಗಿ ನಾವೆಲ್ಲರೂ ಸೇರಿಕೊಂಡು ಈ ಸಂಸ್ಥೆಯ ಘನತೆ ಹಾಗೂ ಗೌರವವನ್ನು ಉಳಿಸಬೇಕಾಗಿದೆ. ಈ ತತ್ವದಲ್ಲಿ ನಂಬಿಕೆಯಿರಿಸಿ 18 ಶಾಸಕರ ಅಮಾನತು ಆದೇಶವನ್ನು ಮರು ಪರಿಶೀಲಿಸಿ ಹಿಂಪಡೆಯಬೇಕು ಎಂದು ಆರ್.ಅಶೋಕ್ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net