ಶಾಸಕನ ಪುತ್ರ ಬಸವೇಶ್ ಬಂಧನಕ್ಕೆ ಒತ್ತಾಯ

bdvt pro
ಅಕ್ರಮ ಮರಳು ಗಣಿಗಾರಿಕೆ ಸಂಬಂಧ ಗಣಿ ವಿಜ್ಞಾನಿ ಜ್ಯೋತಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಶಾಸಕರ ಪುತ್ರ ಬಸವೇಶ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಭದ್ರಾವತಿ ತಾಲೂಕು ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published on

ಭದ್ರಾವತಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ಅವರಿಗೆ ಅಸಭ್ಯ ಪದಗಳನ್ನು ಬಳಕೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಶಾಸಕರ ಪುತ್ರ ಬಸವೇಶನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಮಂಗಳವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅಕ್ರಮ ಮರಳು ದಂಧೆ ತಡೆಯುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಅಸಭ್ಯ ಮಾತುಗಳನ್ನಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಒತ್ತಾಯಿಸಿದರು.

ಬಸವೇಶನ ದೌರ್ಜನ್ಯ, ದಬ್ಬಾಳಿಕೆ ನಡೆಯಲು ಬಿಜೆಪಿ ಅವಕಾಶ ನೀಡುವುದಿಲ್ಲ. ಭದ್ರಾವತಿಯಲ್ಲಿ ಇಸ್ಪೀಟು, ಓಸಿ, ಜೂಜಾಟ ವ್ಯಾಪಕವಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹಮಂತ್ರಿ ಪರಮೇಶ್ವರ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಗೂಂಡಗಳ ಕೈಯಲ್ಲಿ ಕೊಟ್ಟು ಆಡಳಿತ ನಡೆಸುತ್ತಿದ್ದಾರೆ. ಕರ್ತವ್ಯ ನಿರತ ಮಹಿಳೆಗೆ ಅಸಭ್ಯ ಮಾತುಗಳಿಂದ ನಿಂದಿಸಿರುವ ಪ್ರಕರಣ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ ಎಂದರು.

ಮಹಿಳಾ ಆಯೋಗವು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಮೌನವಾಗಿದೆ. ಅಧಿಕಾರಿ ಜ್ಯೋತಿ ಅವರಿಂದ ದೂರು ದಾಖಲಿಸಿಕೊಳ್ಳದ ಆಯೋಗ ಕೇವಲ ರೀಲ್ಸ್-ಇನ್‌ಸ್ಟಾಗ್ರಾಂ ಕೆಲಸ ಮಾಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಶಾಸಕರು ರಾಜೀನಾಮೆ ನೀಡಬೇಕು ಹಾಗೂ ಅವರ ಪುತ್ರ ಬಸವೇಶನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಹಾಗೂ ಅವರ ಪುತ್ರ ಬಸವೇಶ್ ಕಡೆಯಿಂದ ಓಸಿ. ಇಸ್ಪೀಟು, ಗಾಂಜಾ, ಅಕ್ರಮ ಮರಳು ದಂಧೆ ನಡೆಯುತ್ತಿದೆ. ದಿನ ಸಂಜೆಯಾದರೆ ಗಲ್ಲಿಗಲ್ಲಿಗಳಲ್ಲಿ ಯುವಕರು ಗಾಂಜಾ ಸೇವಿಸಿ ಬೈಕಿನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಾರೆ. ಯಾವೊಬ್ಬ ಅಧಿಕಾರಿಗಳೂ ಅದನ್ನು ಪ್ರಶ್ನೆ ಮಾಡುತ್ತಿಲ್ಲ. ಶಾಸಕರ ಪುತ್ರರು ಸರ್ಕಾರಿ ಅಧಿಕಾರಿಗಳನ್ನು ಕರೆದು ಮನೆಯಲ್ಲೇ ಮೀಟಿಂಗ್ ಮಾಡುತ್ತಾರೆ. ಶಿಷ್ಟಾಚಾರ ಉಲ್ಲಂಘನೆ ಮಾಡಿ ವೇದಿಕೆಯಲ್ಲಿರುತ್ತಾರೆ. ಇದು ಸರ್ಕಾರಿ ಅಧಿಕಾರಿಗಳಿಗೆ ಗೊತ್ತಿಲ್ಲವೆ ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡರಾದ ಮಂಗೋಟೆ ರುದ್ರೇಶ್, ಜಿ.ಆನಂದಕುಮಾರ್, ಸುಲೋಚನಾ ಪ್ರಕಾಶ್, ಚನ್ನೇಶ್, ಅಣ್ಣಪ್ಪ, ಸಿಮೆಂಟ್ ಮಂಜಣ್ಣ, ಅವಿನಾಶ್, ಮಂಜುಳಾ, ಆಶಾ ಪುಟ್ಟಸ್ವಾಮಿ, ಸುಲೋಚನಾ, ಅನ್ನಪೂರ್ಣ, ಕವಿತಾ, ಸುಬ್ಬಣ್ಣ, ಪ್ರಕಾಶ್, ಸುರೇಶಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net