ನಿಗಮ ಅಧ್ಯಕ್ಷ ಸ್ಥಾನ ಒಲ್ಲೆ; ಮುಗಿಯದ ಬಿಜೆಪಿ ಶಾಸಕರ ಅಸಮಾಧಾನ

page 10 3
Published on

ಬೆಂಗಳೂರು: ಬಿಜೆಪಿ ಸರ್ಕಾರದ ವರ್ಷಾಚರಣೆ ಸಂದರ್ಭದಲ್ಲಿ ಶಾಸಕರ ಅಸಮಾಧಾನ ತಣಿಸಲು 20 ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆ ನೀಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಅಧ್ಯಕ್ಷರ ನೇಮಕದ ಪಟ್ಟಿ ಪ್ರಕಟವಾದ ದಿನವೇ ಕೆಲವರು ವಿರೋಧ ಸೂಚಿಸಿದ್ದರು. ಇದೀಗ ಆ ಸಾಲಿಗೆ ಮತ್ತಷ್ಟು ಹಿರಿಯ ಶಾಸಕರು ಸೇರುತ್ತಿದ್ದಾರೆ. ಎಲ್ಲರೂ ಪರೋಕ್ಷವಾಗಿ ಮಂತ್ರಿಗಿರಿ ಆಸೆ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಲಕ್ಷ್ಮಣ ಸವದಿ ನವದೆಹಲಿ ಭೇಟಿ ನಾನಾ ಊಹಾಪೋಹ ಹುಟ್ಟುಹಾಕಿದೆ. ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ, ವಿಸ್ತರಣೆಯಂಥ ತರಹೇವಾರಿ ವಿಷಯಗಳು ರಾಜ್ಯ ರಾಜಕೀಯದಲ್ಲಿ ಗರಿಗೆದರಿರುವುದರಿಂದ ಕೆಲವರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ನಿಗಮ-ಮಂಡಳಿ ಬೇಡ ಎನ್ನುತ್ತಿದ್ದಾರೆ. ಹಾಗಾಗಿ ಅಧ್ಯಕ್ಷ ಹುದ್ದೆ ಬೇಡ ಎನ್ನುವವರ ಪಟ್ಟಿ ಬೆಳೆಯುತ್ತಲೇ ಇದೆ. ಇದು ಮುಖ್ಯಮಂತ್ರಿಗೆ ಮಾತ್ರವಲ್ಲ, ಬಿಜೆಪಿ ಹೈಕಮಾಂಡ್​ಗೂ ಬಿಡಿಸಲಾಗದ ಗಂಟಾಗಿದೆ.

ಶಾಸಕರಿಂದ ಹೊಸ ಬೇಡಿಕೆ: ಸಿಎಂ ಮುಂದೆ ಶಾಸಕ ನೆಹರೂ ಓಲೇಕಾರ್ ಹೊಸ ಬೇಡಿಕೆ ಇಟ್ಟಿದ್ದಾರೆ. ನನಗೆ ಈಗ ಕೊಟ್ಟಿರುವ ಬಾಬು ಜಗಜೀವನ್ ರಾಮ್ ಅಭಿವೃದ್ಧಿ ನಿಗಮ ಬೇಡ. ಮಂತ್ರಿಗಿರಿ ನೀಡಿ, ಸಾಧ್ಯವಾಗದಿದ್ದರೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಥವಾ ಬಿಡಿಎ ಕೊಟ್ಟರೆ ಮಾತ್ರ ತೆಗೆದುಕೊಳ್ಳುತ್ತೇನೆ. ಇಲ್ಲವಾದರೆ ಶಾಸಕನಾಗಿ ಮುಂದುವರಿಯುವೆ ಎಂದು ಹೇಳಿದ್ದಾರೆ. ತೇರದಾಳ ಶಾಸಕ ಸಿದ್ದು ಸವದಿ, ಕೈಮಗ್ಗ ಅಭಿವೃದ್ಧಿ ನಿಗಮ ಬೇಡ, ಅದನ್ನು ನೇಕಾರ ಸಮುದಾಯಕ್ಕೆ ನೀಡಿ ಎಂದಿದ್ದಾರೆ.

ಅಧಿಕಾರ ಸ್ವೀಕಾರಕ್ಕೆ ಹಿಂದೇಟು: ನಿಗಮ-ಮಂಡಳಿಯಲ್ಲಿ ಸ್ಥಾನ ನೀಡಿ ಮೂರು ದಿನ ಕಳೆದರೂ ಈವರೆಗೆ ಒಬ್ಬರೂ ಅಧಿಕಾರ ಸ್ವೀಕರಿಸಿಲ್ಲ. ಹಾಗಾಗಿ ಶಾಸಕರ ಅಸಮಾಧಾನದ ಬೆಂಕಿ ಆರಿದಂತಿಲ್ಲ.

ಬಿಎಸ್​ವೈ ಶಮನ ಯತ್ನ: ನಮಗೆ ನಿಗಮ-ಮಂಡಳಿ ಬೇಡವೇ ಬೇಡ ಎನ್ನುತ್ತಿದ್ದ ಕೆಲ ಶಾಸಕರಿಗೆ ಖುದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೂರವಾಣಿ ಮೂಲಕ ಸಂರ್ಪಸಿ ಅಸಮಾಧಾನ ಶಮನ ಮಾಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net