ಸಂಕಷ್ಟದ ಸಮಯದಲ್ಲಿ ಸ್ಪಂದಿಸಲು ಮುಂದಾಗಿ: ಶಾಸಕ ವಿ. ಮುನಿಯಪ್ಪ ಹೇಳಿಕೆ

16 SDLP 01
Published on

ಶಿಡ್ಲಘಟ್ಟ : ಕರೊನಾ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬರೂ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬದ ಅಂಗವಾಗಿ ನಗರಸಭೆ ಮುಂಭಾಗ ಭಾನುವಾರ ಪೌರಕಾರ್ಮಿಕರು, ಸರ್ಕಾರಿ ಆಸ್ಪತ್ರೆ ಹಾಗೂ ಪೊಲೀಸ್ ಸಿಬ್ಬಂದಿಗೆ ಊಟ ವಿತರಿಸಿ ಮಾತನಾಡಿ, ಪ್ರತಿಯೊಬ್ಬರೂ ಮಾನವೀಯತೆಗೆ ಆದ್ಯತೆ ಕೊಡಬೇಕು. ಜಾತಿ, ಮತ, ಮೇಲು, ಕೀಳು, ಉಳ್ಳವರು, ಇರದವರು, ಅಧಿಕಾರ, ಅಹಂಕಾರ ತ್ಯಜಿಸಬೇಕು.

ಕರೊನಾ ಅಟ್ಟಹಾಸ ಮೆರೆಯುತ್ತಿರುವ ಈ ದಿನಮಾನದಲ್ಲಿ ಪರಸ್ಪರ ನೆರವಾಗುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಕರೊನಾ ವೈರಸ್ ಕಣ್ಣಿಗೆ ಕಾಣಿಸದೇ ಇರುವುದರಿಂದ ಪ್ರತಿಯೊಬ್ಬರೂ ಪರಸ್ಪರ ಅಂತರ ಕಾಪಾಡಿಕೊಳ್ಳುವುದು ಸೇರಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನಗರದ ವಿವಿಧ ವಾರ್ಡ್‌ಗಳ ಜವಾಬ್ದಾರಿಯನ್ನು ಆಯಾ ವಾರ್ಡ್‌ನ ಯುವಕರು ಹೊತ್ತು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಕರೊನಾ ವಿರುದ್ಧದ ಹೋರಾಟದಲ್ಲಿ ಪ್ರತಿನಿತ್ಯ ದುಡಿಯುತ್ತಿರುವ ಪೌರಕಾರ್ಮಿಕರು, ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುವ ಕೆಲಸವಾಗಬೇಕು. ಎಷ್ಟು ಸಾಧ್ಯವೋ ಅಷ್ಟು ಅಳಿಲು ಸೇವೆ ಸಲ್ಲಿಸುವ ಮೂಲಕ, ನಾವು ಕೂಡ ಈ ಹೋರಾಟದಲ್ಲಿ ಪರೋಕ್ಷವಾಗಿಯಾದರೂ ಪಾಲ್ಗೊಳ್ಳೋಣ ಎಂದು ಹೇಳಿದರು.

ನಗರಸಭೆ ಸದಸ್ಯ ಅನಿಲ್‌ಕುಮಾರ್, ಕೃಷ್ಣಮೂರ್ತಿ ಮುಖಂಡರಾದ ಮನೋಹರ್, ಎಲ್.ಮಧುಸೂದನ್, ಕೆ.ಎನ್.ಮುನೀಂದ್ರ, ವಿಜಯ್, ಸಾದಿಕ್, ರಾಜಕುಮಾರ್, ನಾಗನರಸಿಂಹ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net