ಅಕ್ರಮಕ್ಕೆ ಅವಕಾಶ ಕೊಟ್ಟರೆ ಬೆಲೆ ತೆರಬೇಕಾದೀತು: ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸಗೌಡ ಎಚ್ಚರಿಕೆ

27-klr-9
Published on

ಕೋಲಾರ : ಬಗರ್‌ಹುಕುಂ ಸಾಗುವಳಿ ಚೀಟಿ ಕೋರಿ ನಮೂನೆ 53ರಲ್ಲಿ ಸಲ್ಲಿಕೆಯಾಗಿರುವ 16,000 ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅಧಿಕಾರಿಗಳು ಕೆಲಸದ ವೇಗ ಹೆಚ್ಚಿಸಿ, ಆಮಿಷಗಳಿಗೆ ಬಲಿಯಾಗಿ ಅಕ್ರಮ, ಅವ್ಯವಹಾರಗಳಿಗೆ ಅವಕಾಶ ಕೊಡಿಕೊಟ್ಟರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಎಚ್ಚರಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಸಾಗುವಳಿ ಚೀಟಿಗೆ ಸಲ್ಲಿಕೆಯಾಗಿರುವ ಅರ್ಜಿ ಪರಿಶೀಲಿಸಿ ಅರ್ಹರಿಗೆ ಸಾಗುವಳಿ ಚೀಟಿ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು, ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಪರಿಶೀಲಿಸಿ ಕಾನೂನು ಬದ್ಧವಾದ ಕ್ರಮ ಕೈಗೊಳ್ಳಬೇಕು ಎಂದರು.

ಗ್ರಾಮಗಳಲ್ಲಿ ಪಹಣಿ, ಸಾಗುವಳಿ ಚೀಟಿ, ಪೋಡಿ, ವಿಭಾಗೀಯ ಖಾತೆ ಸೇರಿ ಹಲವು ದಾಖಲೆಗಳಿಗೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಇದೆಲ್ಲವನ್ನೂ ಪರಾಮರ್ಶಿಸಿ ಕಾನೂನು ಚೌಕಟ್ಟಿನಲ್ಲಿ ಅಧಿಕಾರಿಗಳು ತ್ವರಿತವಾಗಿ ಕೆಲಸ ಮಾಡಿಕೊಡಬೇಕು ಎಂದರು.

ಹೊಳಲಿ ಗ್ರಾಮದ ಸರ್ವೇ ಸಂಖ್ಯೆ 103ರಲ್ಲಿ 422 ಎಕರೆ ಗೋಮಾಳ ಜಮೀನಿದೆ. ಗ್ರಾಮದ ಕೆರೆ 565 ಎಕರೆ ಇದ್ದು ಇದನ್ನು ಡೇರಿಗೆ 50 ಎಕರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ 20 ಎಕರೆ, ಮುರಾರ್ಜಿ ದೇಸಾಯಿ ವಸತಿ ಶಾಲೆಗೆ 20 ಎಕರೆ ಹಾಗೂ ತೋಟಗಾರಿಕೆ ಇಲಾಖೆ 65 ಎಕರೆ ಸೇರಿ ಇತರ ಅಭಿವೃದ್ಧಿ ಕಾರ್ಯಗಳಿಗೆ ಜಮೀನು ನಿಗದಿಪಡಿಸಲು ತೀರ್ಮಾನಿಸಲಾಗಿತ್ತು. ಈ ಕುರಿತು ಬಂಗಾರಪೇಟೆ ಶಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಈವರೆಗೆ ಕ್ರಮ ಕೈಗೊಂಡಿಲ್ಲ. ರಸ್ತೆ ಇಲ್ಲದಂತೆ ಜಮೀನುಗಳನ್ನು ಅಕ್ರಮವಾಗಿ ಮಂಜೂರು ಮಾಡಿರುವ ಹಿಂದಿನ ತಹಸೀಲ್ದಾರ್ ಕ್ರಮವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಕ್ರಮ ಕೈಗೊಳ್ಳಬೇಕೆಂದು ಮುಖಂಡ ಹೊಳಲಿ ಪ್ರಕಾಶ್ ಆಗ್ರಹಿಸಿದಾಗ ಉಸ್ತುವಾರಿ ಸಚಿವರ ಜತೆ ಚರ್ಚಿಸುವುದಾಗಿ ತಿಳಿಸಿದರು.

ಪಿ ನಂಬರ್ ಜಮೀನುಗಳಿಗೆ ಸಂಬಂಧಿಸಿದಂತೆ ಸರ್ವೇ ಕಾರ್ಯ ಬಾಕಿ ಉಳಿದಿರುವ ಕುರಿತು ಜಿಲ್ಲಾಧಿಕಾರಿ ಮಟ್ಟದ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು, ಹೊಳಲಿ ಗ್ರಾಮದ ಗೋಮಾಳ ಜಮೀನಿಗೆ ಸಂಬಂಧಿಸಿದಂತೆ ಮುಂದಿನ ಮಂಗಳವಾರ ಅಥವಾ ಗುರುವಾರ ಸಭೆ ಕರೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಿರಸ್ತೇದಾರ್ ಕೊಂಡಪ್ಪ, ಆರ್‌ಐ ರಾಜೇಂದ್ರ , ಮುಖಂಡ ಬೈಚಪ್ಪ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net