ಮೃತ ಕಾರ್ಮಿಕನಿಗೆ ಪರಿಹಾರ ಕೊಡುವಂತೆ ಶಾಸಕಿ ಸೂಚನೆ

kdp
ಶಿವಮೊಗ್ಗ ತಾಪಂ ತ್ರೈಮಾಸಿಕ ಸಭೆಯಲ್ಲಿ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಮಾತನಾಡಿದರು. ರಾಜೀವ್, ಎಚ್.ಎಂ.ಮಧು ಇತರರಿದ್ದರು.
Published on

ಶಿವಮೊಗ್ಗ: ಸಿದ್ಲಿಪುರ ಕೈಗಾರಿಕಾ ಪ್ರದೇಶದಲ್ಲಿ ತಾತ್ಕಾಲಿಕ ಶೆಡ್‌ನ ಗೋಡೆ ಕುಸಿದ ಪರಿಣಾಮ ಸೋಮವಾರ ಕಾರ್ಮಿಕನೋರ್ವ ಮೃತಪಟ್ಟ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ಮೃತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಒತ್ತಾಯಿಸಿದರು.

ತಾಪಂ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಘಟನೆ ಬಗ್ಗೆ ಕಾರ್ಮಿಕ ಇಲಾಖೆ ಸಮರ್ಪಕ ಮಾಹಿತಿ ಸಂಗ್ರಹಿಸಬೇಕು. ನೊಂದ ಕುಟುಂಬಕ್ಕೆ ಆಸರೆಯಾಗಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಕಾರ್ಮಿಕ ಇಲಾಖೆಯ ಅಧೀನದಲ್ಲಿರುವ ವಿವಿಧ ಮಂಡಳಿಗಳ ಯೋಜನೆ ಬಗ್ಗೆ ಕಾರ್ಮಿಕರಿಗೆ ಅರಿವು ಮೂಡಿಸಬೇಕು. ಜಿಲ್ಲಾದ್ಯಂತ ವ್ಯಾಪಕ ಪ್ರಚಾರ ಮಾಡಬೇಕು. ಅರ್ಹ ಕಾರ್ಮಿಕರಿಗೆ ಮಂಡಳಿಯ ಪ್ರಯೋಜನಗಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕಾರ್ಯಕ್ರಮ ರೂಪಿಸಬೇಕೆಂದು ತಿಳಿಸಿದರು.

ಮಿಷನ್ ಸುರಕ್ಷಾ ಅಭಿಯಾನಕ್ಕೆ ಆಯನೂರು, ಕುಂಸಿ, ಚೋರಡಿ ಮತ್ತು ತುಪ್ಪೂರು ಗ್ರಾಪಂಗಳಿಗೆ ಕಾರ್ಮಿಕ ನಿರೀಕ್ಷಕರನ್ನು ನೋಡಲ್ ಆಫೀಸರ್ ಆಗಿ ನೇಮಕ ಮಾಡಲಾಗಿದೆ. ಕಾರ್ಮಿಕ ಇಲಾಖೆ ಯೋಜನೆಗಳ ಬಗ್ಗೆ ಸಂಬಂಧಿಸಿದವರಿಗೆ ವಿವರವಾದ ಮಾಹಿತಿ ನೀಡಬೇಕೆಂದು ಸೂಚಿಸಿದರು.

ಶಿಕ್ಷಣ ಇಲಾಖೆಯಿಂದ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು. ಸರ್ಕಾರಿ ಶಾಲೆಯ ಮಕ್ಕಳಿಗೆ ಸರ್ಕಾರದಿಂದ ನೀಡುವ ಸೌಲಭ್ಯಗಳು ಸಮರ್ಪಕವಾಗಿ ಸಿಗುವಂತಾಗಬೇಕು. ಗ್ರಾಮೀಣ ಹಾಗೂ ನಗರದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಸೌಲಭ್ಯಗಳಿಂದ ವಂಚಿತರಾಗಬಾರದು ಎಂದು ತಿಳಿಸಿದರು.

ಶಿವಮೊಗ್ಗ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎಚ್.ಎಂ.ಮಧು, ತಹಸೀಲ್ದಾರ್ ರಾಜೀವ್, ತಾಪಂ ವ್ಯವಸ್ಥಾಪಕ ಪ್ರವೀಣ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net